ಬಿಸಿಯೂಟ ಯೋಜನೆ ನೌಕರರಿಗೆ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಕ್ಷರ ದಾಸೋಹ ನೌಕರರು, ಅಂಗನವಾಡಿ ಕಾರ್ಯಕರ್ತೆಯರು ಸಿಐಟಿಯು ನೇತೃತ್ವದಲ್ಲಿ ಮಂಡ್ಯದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು. ಈ ನಡುವೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಪ್ರತಿಭಟನೆ ಬಿಟ್ಟು ಮಾತುಕತೆಗೆ ದೆಹಲಿಗೆ ಬರುವಂತೆ ಆಹ್ವಾನ ನೀಡಿದ್ದಾರೆ.
ನೀವು ಚಳಿಯಲ್ಲಿ ಧರಣಿ ಕೂರುವುದು ಬೇಡ:
ಜಿಲ್ಲಾಧಿಕಾರಿ ಕುಮಾರ್ ಅವರ ಮೂಲಕ ರಾಜ್ಯ ಅಂಗನವಾಡಿ ನೌಕರರ ಸಂಘದ ಪದಾಧಿಕಾರಿ ಶ್ರೀಕುಮಾರಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಕೇಂದ್ರ ಸಚಿವರು, ನೀವು ಚಳಿಯಲ್ಲಿ ರಸ್ತೆಯಲ್ಲಿ ಧರಣಿ ಕೂರುವುದು ಬೇಡ. ನಿಮ್ಮ ಸಂಘದ ಪ್ರತಿನಿಧಿಗಳಲ್ಲಿ ಹತ್ತು ಜನ ಪ್ರಮುಖರು ನವದೆಹಲಿಗೆ ಬನ್ನಿ. ನಾನೇ ಸಂಬಂಧಪಟ್ಟ ಸಚಿವರು, ಅಧಿಕಾರಿಗಳ ಜತೆ ಸಭೆ ಏರ್ಪಾಡು ಮಾಡಿಸುತ್ತೇನೆ. ನಾನೂ ನಿಮ್ಮ ಜತೆ ಸಭೆಯಲ್ಲಿ ಪಾಲ್ಗೊಳ್ಳುತ್ತೇನೆ. ಧರಣಿಯನ್ನು ಕೊನೆಗೊಳಿಸಿ ದೆಹಲಿಗೆ ಬನ್ನಿ ಎಂದು ಕೋರಿದರು.
ನೀವು ದೆಹಲಿಗೆ ಬಂದು ಹೋಗುವ ವೆಚ್ಚ, ವ್ಯವಸ್ಥೆ ನಾನೇ ಕಲ್ಪಿಸುವೆ:
ನೀವು ಬಂದು ಹೋಗುವ ವಿಮಾನಯಾನ ವೆಚ್ಚ ಹಾಗೂ ದೆಹಲಿಯಲ್ಲಿ ವಸತಿ ವ್ಯವಸ್ಥೆಯನ್ನು ನಾನೇ ಕಲ್ಪಿಸುವೆ. ತಾಯಂದಿರುವ ಚಳಿಯಲ್ಲಿ ಬೀದಿಯಲ್ಲಿ ಇರುವುದು ಬೇಡ. ದಯಮಾಡಿ ಚರ್ಚೆಗೆ ಬನ್ನಿ ಎಂದು ಸಚಿವರು ವಿನಂತಿಸಿದರು.
ಸಚಿವರ ಮಾತಿಗೆ ಸ್ಪಂದಿಸಿದ ಶ್ರೀಕುಮಾರಿ ಅವರು, ಈ ಬಗ್ಗೆ ಸಂಘದ ಪದಾಧಿಕಾರಿಗಳ ಜತೆ ಚರ್ಚೆ ನಡೆಸಿ ತಮಗೆ ತಿಳಿಸುವುದಾಗಿ ಹೇಳಿದರು. ದೂರವಾಣಿ ಮಾತುಕತೆ ನಡೆಸುವಾಗ ಅಂಗನವಾಡಿ ಕಾರ್ಯಕರ್ತೆಯರ ಜತೆ ಮಂಡ್ಯ ಜಿಲ್ಲಾಧಿಕಾರಿ ಕುಮಾರ ಅವರೂ ಹಾಜರಿದ್ದರು.
ಚಳಿಯಲ್ಲಿ ಧರಣಿ ಕೂರುವುದು ಬೇಡ, ಪ್ರತಿಭಟನೆ ಕೈಬಿಟ್ಟು ದೆಹಲಿಗೆ ಬನ್ನಿ : ಅಂಗನವಾಡಿ ನೌಕರರಿಗೆ ಎಚ್ಡಿಕೆ ಆಹ್ವಾನ
WhatsApp Group
Join Now