ಕೂಡ್ಲಿಗಿ ತಾಲ್ಲೂಕಿನ ಕ್ಯಾಸನಕೆರೆ ಬಳಿ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಲಾರಿ ಹರಿದು ಅಜ್ಜ ಮೊಮ್ಮಗಳು ಮೃತಪಟ್ಟಿದ್ದಾರೆ. ಪರೀಕ್ಷೆ ಮುಗಿಸಿ ಮೊಮ್ಮಗಳನ್ನು ಬೈಕಿನಲ್ಲಿ ಕರೆದೊಯ್ಯುತ್ತಿದ್ದಾಗ, ರಸ್ತೆಯಲ್ಲಿದ್ದ ರಾಗಿಯ ಮೇಲೆ ಬೈಕ್ ಜಾರಿ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಲಾರಿ ಡಿಕ್ಕಿ ಹೊಡೆದು ಬೈಕ್‌ನಲ್ಲಿ ಹೋಗುತ್ತಿದ್ದ ಅಜ್ಜ, ಮೊಮ್ಮಗಳು ಸಾವನ್ನಪ್ಪಿದ ಆಘಾತಕಾರಿ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ. ಅಜ್ಜ ಮೊಮ್ಮಗಳು ಪ್ರಯಾಣಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಬಿದ್ದಾಗ ತಮಿಳುನಾಡು ನೋಂದಣಿಯ ಕಂಟೈನರ್ ಲಾರಿಯೊಂದು ಡಿಕ್ಕಿ ಹೊಡೆದಿದೆ.
ಪರಿಣಾಮ ಅಜ್ಜ ಹಾಗೂ ಮೊಮ್ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಕ್ಯಾಸನಕೆರೆ ಬಳಿ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ. ಮೃತರನ್ನು 55 ವರ್ಷದ ಈಶ್ವರಪ್ಪ ಹಾಗೂ ಮೊಮ್ಮಗಳು 14 ವರ್ಷದ ಸೃಷ್ಟಿ ಎಂದು ಗುರುತಿಸಲಾಗಿದೆ.
ಮೃತ ಬಾಲಕಿ ಸೃಷ್ಟಿ ಕರ್ನಾರ್ ಹಟ್ಟಿ ಗ್ರಾಮದವರಾಗಿದ್ದು, ಕೂಡ್ಲಿಗಿ ಪಟ್ಟಣದಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದಳು. ವಾರ್ಷಿಕ ಪರೀಕ್ಷೆ ಮುಗಿದ ಕಾರಣ ಸೃಷ್ಟಿಯನ್ನು ಅಜ್ಜ ಬೈಕಿನಲ್ಲಿ ಕರೆದುಕೊಂಡು ತಮ್ಮ ಸ್ವಗ್ರಾಮಕ್ಕೆ ಹೋಗುತ್ತಿರುವಾಗ ಕ್ಯಾಸನಕೆರೆ ಹೆದ್ದಾರಿಯಲ್ಲಿ ರಸ್ತೆ ಮೇಲೆ ಹಾಕಿದ್ದ ರಾಗಿ ಮೇಲೆ ಸಾಗುವಾಗ ಬೈಕ್ ನಿಯಂತ್ರಣ ತಪ್ಪಿ ಇಬ್ಬರು ಕೆಳಗೆ ಬಿದ್ದಿದ್ದಾರೆ.
ಇದೇ ವೇಳೆ ಹಿಂದೆ ಬಂದ ಲಾರಿ ಇಬ್ಬರ ಮೇಲೆ ಹರಿದಿದೆ. ಇದರಿಂದ ತೀವ್ರವಾಗಿ ಗಾಯಗೊಂಡ ಅಜ್ಜ ಮೊಮ್ಮಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಸ್ತೆಯಲ್ಲಿ ಹಾಕಿದ ರಾಗಿಗೆ ಬಲಿಯಾದ್ರು ಅಜ್ಜ ಮೊಮ್ಮಗಳು : ಬೈಕ್‌ನಿಂದ ಬಿದ್ದವರ ಮೇಲೆ ಹರಿದ ಲಾರಿ
WhatsApp Group
Join Now