ಮದುವೆಯಾಗದ ಮೊಮ್ಮಗಳಿಗೆ ಹುಟ್ಟಿದ ಮಗು ; ಒಂದೇ ನಿಮಿಷಕ್ಕೆ ಹಸುಗೂಸಿನ ಕುತ್ತಿಗೆ ಹಿಸುಕಿ ತಿಪ್ಪೆಗೆಸೆದ ಅಜ್ಜಿ!

Spread the love

ಚಿಕ್ಕಮಗಳೂರು : ಕಾಫಿನಾಡಿನಲ್ಲಿ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಹೃದಯವಿದ್ರಾವಕ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಮದುವೆಯಾಗದ ಮೊಮ್ಮಗಳು ಗರ್ಭಿಣಿಯಾದ ವಿಷಯ ಹೊರಗೆ ತಿಳಿದರೆ ಎಲ್ಲಿ ಗೌರವ ಹೋಗುತ್ತದೋ ಎಂಬ ಭಯಕ್ಕೆ, ಹುಟ್ಟಿದ ಕೇವಲ ಒಂದು ನಿಮಿಷಕ್ಕೆ ಗಂಡು ಮಗುವನ್ನು ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ತರೀಕೆರೆ ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ ನಡೆದಿದೆ.

ಘಟನೆಯ ಹಿನ್ನೆಲೆ: ತಾನೇ ಹೆತ್ತು, ತಾನೇ ಕೊಂದ ನರ್ಸ್!

ಕೊಲೆಯಾದ ಮಗುವಿನ ತಾಯಿ ವೃತ್ತಿಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಯುವತಿ. ಈಕೆ ಮದುವೆಗೆ ಮೊದಲೇ ಗರ್ಭಿಣಿಯಾಗಿದ್ದು, ಕುಟುಂಬದ ಗೌರವದ ದೃಷ್ಟಿಯಿಂದ ಈ ವಿಷಯವನ್ನು ಗುಟ್ಟಾಗಿಡಲಾಗಿತ್ತು. ಕಳೆದ 15 ದಿನಗಳ ಹಿಂದೆ ಮನೆಯಲ್ಲೇ ಯುವತಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ಹೋದರೆ ವಿಷಯ ಜಗಜ್ಜಾಹೀರಾಗುತ್ತದೆ ಎಂಬ ಕಾರಣಕ್ಕೆ, ನರ್ಸ್ ಆಗಿದ್ದ ಯುವತಿ ತನ್ನ ತಂದೆ-ತಾಯಿ ಮತ್ತು ಅಜ್ಜಿಯ ಸಹಾಯದಿಂದ ಮನೆಯಲ್ಲೇ ಹೆರಿಗೆ ಮಾಡಿಸಿಕೊಂಡಿದ್ದಾಳೆ.

ಕಣ್ಣು ಬಿಡುವ ಮೊದಲೇ ಕುತ್ತಿಗೆ ಹಿಸುಕಿದ ಅಜ್ಜಿ

ಮಗು ಹುಟ್ಟಿದ ತಕ್ಷಣ ಮನೆಯವರೆಲ್ಲಾ ಸೇರಿ ಕ್ರೂರ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಹಸುಗೂಸು ಕಣ್ಣು ಬಿಡುವ ಮೊದಲೇ, ಆಕೆಯ ಅಜ್ಜಿ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ನಂತರ ರಕ್ತಸಿಕ್ತ ಮಗುವನ್ನು ಬ್ಯಾಗ್‌ನಲ್ಲಿ ತುಂಬಿಸಿಕೊಂಡು ಹೋಗಿ, ಜನವಸತಿ ಇಲ್ಲದ ತಿಪ್ಪೆಯ ಗುಂಡಿಯೊಂದರಲ್ಲಿ ಹೂತು ಬಂದಿದ್ದಾರೆ.

ಬಯಲಾಗಿದ್ದು ಹೇಗೆ?

ಈ ಘಟನೆ ನಡೆದು 15 ದಿನಗಳು ಕಳೆದಿದ್ದವು. ಆದರೆ ತಿಪ್ಪೆ ಗುಂಡಿಯ ಪಕ್ಕದ ಮನೆಯ ಯುವಕನಿಗೆ ಅಲ್ಲಿ ಏನೋ ಹೂತು ಹಾಕಿರುವ ಬಗ್ಗೆ ಅನುಮಾನ ಮೂಡಿದೆ. ಆತ ಪೊಲೀಸರಿಗೆ ಮಾಹಿತಿ ನೀಡಿದ ಬೆನ್ನಲ್ಲೇ ಲಕ್ಕವಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದಾಗ ಹೂತು ಹಾಕಿದ್ದ ಮಗುವಿನ ಮೃತದೇಹ ಪತ್ತೆಯಾಗಿದೆ.

ಪೊಲೀಸರ ಕ್ರಮ

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಲಕ್ಕವಳ್ಳಿ ಪೊಲೀಸರು, ಮಗುವಿನ ತಾಯಿ, ಅಪ್ಪ, ಅಮ್ಮ ಮತ್ತು ಅಜ್ಜಿಯನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಮದುವೆಗೆ ಮುನ್ನ ಮಗು ಜನಿಸಿದರೆ ಸಮಾಜದ ಮುಂದೆ ಮುಖ ತೋರಿಸಲು ಸಾಧ್ಯವಿಲ್ಲ ಎಂದು ಮರ್ಯಾದೆಗಂಜಿ ಒಂದು ಹಸುಗೂಸಿನ ಪ್ರಾಣ ತೆಗೆಯುವ ಹೀನಾಯ ಕೆಲಸ ಮಾಡಲಾಗಿದೆ.

WhatsApp Group Join Now

Spread the love

Leave a Reply