ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳರೆ ಗ್ರಾಮದಲ್ಲಿ 15 ವರ್ಷದ ಬಾಲಕಿಯೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಬಾಲಕಿಯನ್ನು ಅತ್ಯಾ*ಚಾರ ಮಾಡಿ ಕೊಲೆ ಮಾಡಿರುವ ಬಗ್ಗೆ ತೀವ್ರ ಶಂಕೆ ವ್ಯಕ್ತವಾಗಿದೆ. ಈ ಘಟನೆಯು ಸ್ಥಳೀಯರಲ್ಲಿ ತೀವ್ರ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ಬೋಳರೆ ಗ್ರಾಮದ ಅಶ್ವಥ್ ನಾರಾಯಣ್ ಎಂಬುವವರ ತೋಟದ ಮನೆಯಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಸಂಪತ್ ಕುಮಾರ್ ಎಂಬುವವರ ಪುತ್ರಿ ಕವಿತ (15) ಮೃತ ಬಾಲಕಿ.
ಶೌಚಕ್ಕೆ ಹೋಗಿದ್ದ ಬಾಲಕಿ ಶವವಾಗಿ ಪತ್ತೆ :
ನಿನ್ನೆ ಸಂಜೆ ಕವಿತಾ ಶೌಚಕ್ಕೆ ಹೋಗಿ ಬರುವುದಾಗಿ ಮನೆಯ ಸದಸ್ಯರಿಗೆ ತಿಳಿಸಿ ಹೋಗಿದ್ದಳು. ಆದರೆ, ರಾತ್ರಿ ಕಳೆದರೂ ಆಕೆ ಮನೆಗೆ ಹಿಂತಿರುಗಿರಲಿಲ್ಲ. ಆತಂಕಗೊಂಡ ಕುಟುಂಬದವರು ತಕ್ಷಣ ಹುಡುಕಾಟ ನಡೆಸಿದರು. ತಡರಾತ್ರಿ ಕುಟುಂಬಸ್ಥರು ಮತ್ತು ಸ್ಥಳೀಯರು ಪಕ್ಕದ ತೋಟದಲ್ಲಿ ಹುಡುಕಿದಾಗ ಬಾಲಕಿ ಕವಿತಾ ಶವವಾಗಿ ಪತ್ತೆಯಾಗಿದ್ದಾಳೆ. ಶವದ ಸ್ಥಿತಿ ಮತ್ತು ಸ್ಥಳದಲ್ಲಿದ್ದ ಪರಿಸ್ಥಿತಿ ಗಮನಿಸಿದಾಗ, ಆಕೆಯ ಮೇಲೆ ಯಾರೋ ದುಷ್ಕರ್ಮಿಗಳು ಅತ್ಯಾ*ಚಾರ ಎಸಗಿ, ನಂತರ ಆಕೆಯನ್ನು ಕೊಲೆ ಮಾಡಿದ್ದಾರೆ ಎಂದು ಬಲವಾಗಿ ಶಂಕಿಸಲಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ಭಾರೀ ಆಕ್ರೋಶ ಭುಗಿಲೆದ್ದಿದ್ದು, ನ್ಯಾಯಕ್ಕಾಗಿ ಆಗ್ರಹ ಕೇಳಿಬಂದಿದೆ.
ಪೊಲೀಸರಿಂದ ಸ್ಥಳ ಪರಿಶೀಲನೆ, ಪ್ರಕರಣ ದಾಖಲು
ಈ ಘಟನೆಯ ಮಾಹಿತಿ ತಿಳಿದ ಕೂಡಲೇ ಕಗ್ಗಲೀಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಶವದ ಪಂಚನಾಮೆ ನಡೆಸಿದ ಪೊಲೀಸರು, ಸ್ಥಳವನ್ನು ಸಂಪೂರ್ಣವಾಗಿ ಪರಿಶೀಲಿಸಿ, ಪ್ರಾಥಮಿಕ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಬಾಲಕಿಯ ಸಾವಿನ ಸುತ್ತ ಅನುಮಾನದ ವಾತಾವರಣ ನಿರ್ಮಾಣವಾಗಿರುವುದರಿಂದ, ಈ ಕುರಿತು ಸಮಗ್ರ ತನಿಖೆ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಈ ಸಂಬಂಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವೇ, ಬಾಲಕಿಯ ಸಾವಿಗೆ ನಿಖರ ಕಾರಣ ಮತ್ತು ಅತ್ಯಾ*ಚಾರ ನಡೆದಿದೆಯೇ ಎಂಬುದು ಖಚಿತವಾಗಲಿದೆ.
ಪ್ರಕರಣದ ಗಂಭೀರತೆ ಅರಿತಿರುವ ಹಿರಿಯ ಪೊಲೀಸ್ ಅಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡಿದ್ದು, ಆರೋಪಿಗಳನ್ನು ಶೀಘ್ರವಾಗಿ ಪತ್ತೆಹಚ್ಚಿ ಬಂಧಿಸಲು ವಿಶೇಷ ತಂಡಗಳನ್ನು ರಚಿಸಿರುವುದಾಗಿ ತಿಳಿಸಿದ್ದಾರೆ. ದುಷ್ಕರ್ಮಿಗಳ ಪತ್ತೆಗಾಗಿ ಪೊಲೀಸರು ಸುತ್ತಮುತ್ತಲಿನ ಪ್ರದೇಶಗಳ ಮೇಲೆ ನಿಗಾ ಇಟ್ಟಿದ್ದು, ಕೂಲಿ ಕಾರ್ಮಿಕರ ಮನೆಗಳಿರುವ ಪ್ರದೇಶದಲ್ಲಿ ಸರಣಿ ವಿಚಾರಣೆ ನಡೆಸುತ್ತಿದ್ದಾರೆ.
ಬೋಳರೆ ಗ್ರಾಮದಲ್ಲಿ ಬಹಿರ್ದೆಸೆಗೆ ಹೋದ ಬಾಲಕಿ ಶವವಾಗಿ ಪತ್ತೆ; ಅತ್ಯಾಚಾರಗೈದು ಕೊಲೆ ಶಂಕೆ!
WhatsApp Group
Join Now