ಯುದ್ಧದಿಂದ ಇಂಧನ ಕೊರತೆ, ಬೆಲೆ ಏರಿಕೆ ಆತಂಕ: ಪೆಟ್ರೋಲ್ ಬಂಕ್ ಮುಂದೆ ಸಾಲುಗಟ್ಟಿ ನಿಂತ ಜನ

Spread the love

ಉತ್ತರ ಕನ್ನಡ : ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಯುದ್ಧದ ಕಾರ್ಮೋಡಗಳು ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಗಂಭೀರ ಪರಿಣಾಮ ಬೀರಲಿವೆ ಎಂಬ ವದಂತಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಸುಳ್ಳು ಸುದ್ದಿಯನ್ನು ನಂಬಿದ ಸಾರ್ವಜನಿಕರು ಆತಂಕಕ್ಕೊಳಗಾಗಿ ಪೆಟ್ರೋಲ್ ಬಂಕ್‌ಗಳ ಮುಂದೆ ಸಾಲುಗಟ್ಟಿ ನಿಂತಿದ್ದು, ಕೃತಕ ಅಭಾವ ಸೃಷ್ಟಿಯಾಗಿದೆ.

ಯುದ್ಧದ ಹಿನ್ನೆಲೆಯಲ್ಲಿ ಪೆಟ್ರೋಲ್ ಬೆಲೆ ರಾತ್ರೋರಾತ್ರಿ ಗಗನಕ್ಕೇರಬಹುದು ಅಥವಾ ಪೂರೈಕೆ ಸಂಪೂರ್ಣ ಸ್ಥಗಿತಗೊಳ್ಳಬಹುದು ಎಂಬ ತಪ್ಪು ಗ್ರಹಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಇಂಧನ ಸಂಗ್ರಹಿಸಲು ಜನರು ಪೈಪೋಟಿಗೆ ಬಿದ್ದಿದ್ದಾರೆ. ಪಟ್ಟಣದ ಪ್ರಮುಖ ಪೆಟ್ರೋಲ್ ಪಂಪ್‌ಗಳಲ್ಲಿ ವಾಹನಗಳ ಉದ್ದನೆಯ ಸಾಲು ಕಂಡುಬರುತ್ತಿದ್ದು, ಕೇವಲ ಕೆಲವೇ ಗಂಟೆಗಳಲ್ಲಿ ಮೂರಕ್ಕೂ ಹೆಚ್ಚು ಬಂಕ್‌ಗಳಲ್ಲಿ ಪೆಟ್ರೋಲ್ ದಾಸ್ತಾನು ಖಾಲಿಯಾಗಿದೆ.

ಕೇವಲ ವಾಹನಗಳಿಗೆ ಇಂಧನ ತುಂಬಿಸುವುದು ಮಾತ್ರವಲ್ಲದೆ, ಜನರು ಪ್ಲಾಸ್ಟಿಕ್ ಕ್ಯಾನ್‌ಗಳು ಮತ್ತು ಬಾಟಲಿಗಳಲ್ಲಿ ಲೀಟರ್‌ಗಟ್ಟಲೆ ಪೆಟ್ರೋಲ್ ತುಂಬಿಸಿಕೊಂಡು ಹೋಗುತ್ತಿರುವ ದೃಶ್ಯಗಳು ಸಾಮಾನ್ಯವಾಗಿದ್ದವು. ಭಟ್ಕಳದಲ್ಲಿ ಪೆಟ್ರೋಲ್ ಸಿಗದ ಕಾರಣ ಅನಿವಾರ್ಯವಾಗಿ ಜನರು ನೆರೆಯ ಹೊನ್ನಾವರ ಹಾಗೂ ಉಡುಪಿ ಜಿಲ್ಲೆಯ ಕುಂದಾಪುರ ಭಾಗದ ಬಂಕ್‌ಗಳಿಗೆ ಧಾವಿಸುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, “ಸದ್ಯಕ್ಕೆ ತೈಲ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ ಮತ್ತು ಬೆಲೆ ಏರಿಕೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯಿಲ್ಲ. ಜನರು ಅನಗತ್ಯವಾಗಿ ಸುಳ್ಳು ಸುದ್ದಿಗಳನ್ನು ನಂಬಿ ಆತಂಕಕ್ಕೊಳಗಾಗಬಾರದು,” ಎಂದು ಮನವಿ ಮಾಡಿದ್ದಾರೆ. ಅತಿಯಾದ ಮತ್ತು ಅನಗತ್ಯ ಸಂಗ್ರಹಣೆಯಿಂದಾಗಿ ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಯಾಗುತ್ತಿದೆ ಎಂದು ಅವರು ಎಚ್ಚರಿಸಿದ್ದಾರೆ. ಪ್ರಸ್ತುತ ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸ್ಥಳೀಯ ಆಡಳಿತ ಮುಂದಾಗಿದೆ.

WhatsApp Group Join Now

Spread the love

Leave a Reply