ಬೆಂಗಳೂರು ಆರ್‌ಟಿಒ ಕರ್ಮಕಾಂಡ: ಹೊರರಾಜ್ಯದ ವಾಹನಗಳಿಗೆ ತಪಾಸಣೆ ಇಲ್ಲದೆ ‘ಫಿಟ್ನೆಸ್ ಸರ್ಟಿಫಿಕೇಟ್’ ಆರೋಪ

Spread the love

ಬೆಂಗಳೂರು : ನಗರದ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (RTO) ತಪಾಸಣೆಯೇ ಇಲ್ಲದೇ ಹೊರರಾಜ್ಯದ ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪ ಇದೀಗ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಗುಜರಾತ್ ಮತ್ತು ಮಹಾರಾಷ್ಟ್ರದ ವಾಹನಗಳಿಗೆ ಯಾವುದೇ ಭೌತಿಕ ತಪಾಸಣೆ ನಡೆಸದೇ ಅಕ್ರಮವಾಗಿ ಫಿಟ್ನೆಸ್ ಸರ್ಟಿಫಿಕೇಟ್‌ಗಳನ್ನು ‘ಮಾರಾಟ’ ಮಾಡಲಾಗುತ್ತಿದೆ ಎಂಬ ಮಾಹಿತಿ ಗುಜರಾತ್ ಅಧಿಕಾರಿಗಳಿಂದಲೇ ಲಭಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆರೋಪಿಸಿದ್ದಾರೆ.

ಈ ಕುರಿತು ತೀವ್ರ ವಾಗ್ದಾಳಿ ನಡೆಸಿರುವ ವಿಜಯೇಂದ್ರ, “ಇದು ಕೇವಲ ಒಬ್ಬೊಬ್ಬ ಅಧಿಕಾರಿಗಳ ತಪ್ಪಲ್ಲ. ಸಂಪೂರ್ಣ ಕಾಂಗ್ರೆಸ್ ಸರ್ಕಾರದ ವ್ಯವಸ್ಥಿತ ಭ್ರಷ್ಟಾಚಾರದ ಪ್ರತಿಬಿಂಬ. ದಿನಕ್ಕೊಂದು ಹಗರಣ ಬಯಲಾಗುತ್ತಿರುವ ಕಾಂಗ್ರೆಸ್ ‘ಕರಪ್ಷನ್‌ ಮಾಡಲ್‌’ಗೆ ಇದು ಮತ್ತೊಂದು ಕೈಗನ್ನಡಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಕೆಲ ಆರ್‌ಟಿಒ ಕಚೇರಿಗಳಲ್ಲಿ ಗುಜರಾತ್ ಹಾಗೂ ಮಹಾರಾಷ್ಟ್ರದಿಂದ ನೋಂದಾಯಿತ ವಾಹನಗಳಿಗೆ ಯಾವುದೇ ತಾಂತ್ರಿಕ ಅಥವಾ ಸುರಕ್ಷತಾ ತಪಾಸಣೆ ನಡೆಸದೇ ಫಿಟ್ನೆಸ್ ಸರ್ಟಿಫಿಕೇಟ್ ನೀಡಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ವಾಹನಗಳು ಬೆಂಗಳೂರಿಗೆ ಬಂದೇ ಇಲ್ಲದಿದ್ದರೂ ಸಹ ದಾಖಲೆಗಳ ಮೂಲಕವೇ ಸರ್ಟಿಫಿಕೇಟ್ ನೀಡಲಾಗುತ್ತಿದೆ ಎಂಬ ಅನುಮಾನ ವ್ಯಕ್ತವಾಗಿದೆ.

ಹೊರರಾಜ್ಯದ ವಾಹನ ಮಾಲೀಕರಿಂದ ಕಮಿಷನ್ ವಸೂಲಿ

ವಾಹನಗಳ ತಾಂತ್ರಿಕ ಸ್ಥಿತಿಯ ಪರಿಶೀಲನೆ ನಡೆಯದೇ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟ ಆಡಿದಂತಾಗಿದೆ. ಕಾಂಗ್ರೆಸ್ ಸರ್ಕಾರವನ್ನು ‘ಹೈಕಮಾಂಡ್‌ನ ATM ಸರ್ಕಾರ’ ಎಂದು ಕರೆದಿರುವ ವಿಜಯೇಂದ್ರ, “ಹೊರರಾಜ್ಯದ ವಾಹನ ಮಾಲೀಕರಿಂದ ಕಮಿಷನ್ ವಸೂಲಿ ಮಾಡಿ, ರಾಜ್ಯದ ಗೌರವವನ್ನು ಇಡೀ ದೇಶದ ಮುಂದೆ ಹರಾಜು ಹಾಕಲಾಗುತ್ತಿದೆ. ಇದು ಕೇವಲ ಅಧಿಕಾರಿಗಳ ಆಟವಲ್ಲ, ಮೇಲಿನಿಂದ ಕೆಳಗಿನವರೆಗೆ ಹರಿಯುತ್ತಿರುವ ವಸೂಲಿ ಭಾಗ್ಯದ ಫಲ” ಎಂದು ಗಂಭೀರ ಆರೋಪ ಮಾಡಿದ್ದಾರೆ.

ಇತ್ತೀಚೆಗೆ ಡ್ರಗ್ಸ್ ಮಾಫಿಯಾ ವಿಚಾರದಲ್ಲಿ ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನ ಜಾಲವನ್ನು ಬಯಲು ಮಾಡಿದ ಉದಾಹರಣೆ ನೀಡಿದ ಅವರು, ಈಗ ಸಾರಿಗೆ ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ಗುಜರಾತ್ ಅಧಿಕಾರಿಗಳೇ ಬಹಿರಂಗಪಡಿಸಿರುವುದು ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯವನ್ನು ತೋರಿಸುತ್ತದೆ ಎಂದು ಹೇಳಿದರು. ಈ ಅಕ್ರಮದಿಂದ ಕರ್ನಾಟಕದ ಘನತೆ ಮತ್ತು ಗೌರವಕ್ಕೆ ಭಾರೀ ಕಳಂಕ ಎಂದು ಟೀಕಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೇರವಾಗಿ ಪ್ರಶ್ನೆ ಹಾಕಿರುವ ವಿಜಯೇಂದ್ರ, “ಕನಿಷ್ಠ ಪಕ್ಷ ರಾಜ್ಯದ ಮಾನ ಕಳೆಯುತ್ತಿರುವ ಭ್ರಷ್ಟ ಅಧಿಕಾರಿಗಳ ವಿರುದ್ಧವಾದರೂ ಕಠಿಣ ಕ್ರಮ ಕೈಗೊಳ್ಳಿ. ಜನರಿಗೆ ಅಭಿವೃದ್ಧಿ ಮರೀಚಿಕೆಯಾಗಿದೆ, ಆದರೆ ಸರಣಿ ಹಗರಣಗಳ ಮೂಲಕ ಕಾಂಗ್ರೆಸ್ ಖಜಾನೆ ಲೂಟಿ ಮಾಡುತ್ತಿದೆ” ಎಂದು ಟೀಕಿಸಿದ್ದಾರೆ.

ಈ ಜನವಿರೋಧಿ ಸರ್ಕಾರ ತೊಲಗುವವರೆಗೂ, ಆರ್‌ಟಿಒ ಭ್ರಷ್ಟಾಚಾರ ಸೇರಿದಂತೆ ಎಲ್ಲ ಹಗರಣಗಳ ವಿರುದ್ಧ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ. ಈ ಆರೋಪಗಳಿಗೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಸಾರಿಗೆ ಇಲಾಖೆಯಿಂದ ಇನ್ನೂ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಆದರೆ ಆರೋಪಗಳು ಸತ್ಯವಾಗಿದ್ದರೆ, ಇದು ರಾಜ್ಯದ ಆಡಳಿತ ಮತ್ತು ರಸ್ತೆ ಸುರಕ್ಷತೆ ಎರಡಕ್ಕೂ ದೊಡ್ಡ ಹೊಡೆತವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

WhatsApp Group Join Now

Spread the love

Leave a Reply