ವರದಕ್ಷಿಣೆ ಭೂತಕ್ಕೆ ಬಲಿಯಾದ ವಿವಾಹಿತೆ; ಮದುವೆಯಾದ ಎರಡೇ ವರ್ಷಕ್ಕೆ ಮಸಣ ಸೇರಿದ ಮಗಳು ಕೀರ್ತಿ!

Spread the love

ಬೆಂಗಳೂರಿನಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ನವವಿವಾಹಿತೆ ಕೀರ್ತಿ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಪತಿ ಗುರುಪ್ರಸಾದ್ ಮತ್ತು ಆತನ ಕುಟುಂಬದವರು ಮನೆ ಕಟ್ಟಲು ಹೆಚ್ಚುವರಿ ಹಣಕ್ಕಾಗಿ ಪೀಡಿಸುತ್ತಿದ್ದರು ಎಂದು ಮೃತಳ ಪೋಷಕರು ಆರೋಪಿಸಿದ್ದು, ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೆಂಗಳೂರು (ಜ.26): ನಗರದ ಯಡಿಯೂರು ಕೆರೆ ಸಮೀಪದ ನಿವಾಸಿಯೊಬ್ಬರು ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಆತ್ಮಹ*ತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ. ಮದುವೆಯಾದ ಕೇವಲ ಎರಡೇ ವರ್ಷಕ್ಕೆ ಕೀರ್ತಿ (24) ಎಂಬ ವಿವಾಹಿತೆ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾವನ್ನಪ್ಪಿದ್ದಾರೆ. ಈ ಸಾವು ಕೇವಲ ಆತ್ಮಹ*ತ್ಯೆಯಲ್ಲ, ಇದು ವರದಕ್ಷಿಣೆ ದಾಹಕ್ಕೆ ನಡೆದ ಬಲಿ ಎಂದು ಮೃತಳ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.

ಮೂಲತಃ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನವರಾದ ಕೀರ್ತಿ ಅವರಿಗೆ 2023ರ ನವೆಂಬರ್‌ನಲ್ಲಿ ಗುರುಪ್ರಸಾದ್ ಎಂಬುವವರೊಂದಿಗೆ ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಪೋಷಕರು ಮಗಳ ಸುಖಜೀವನಕ್ಕಾಗಿ ಸುಮಾರು 35 ಲಕ್ಷ ರೂಪಾಯಿ ಖರ್ಚು ಮಾಡಿ ವಿವಾಹ ನೆರವೇರಿಸಿದ್ದರು.

ಮದುವೆಯಾದ ಹೊಸತರಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ಕಳೆದ ಕೆಲವು ತಿಂಗಳುಗಳಿಂದ ಪತಿ ಗುರುಪ್ರಸಾದ್ ಮತ್ತು ಕುಟುಂಬಸ್ಥರು ಹೆಚ್ಚುವರಿ ಹಣಕ್ಕಾಗಿ ಕೀರ್ತಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲು ಆರಂಭಿಸಿದ್ದರು ಎನ್ನಲಾಗಿದೆ.

ಕಳೆದ ಡಿಸೆಂಬರ್‌ನಲ್ಲಿ ಮನೆ ಕಟ್ಟಿಸುವ ನೆಪದಲ್ಲಿ ಪತಿ ಗುರುಪ್ರಸಾದ್ 10 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಎನ್ನಲಾಗಿದೆ. ಮಗಳ ಬಾಳು ಹಸನಾಗಲಿ ಎಂಬ ಆಶಯದಿಂದ ಪೋಷಕರು ಈಗಾಗಲೇ 8 ಲಕ್ಷ ರೂಪಾಯಿಯನ್ನು ನೀಡಿದ್ದರು.

ಆದರೂ ಕಿರುಕುಳ ನಿಂತಿರಲಿಲ್ಲ. ಈ ನೋವಿನ ಬಗ್ಗೆ ಕೀರ್ತಿ ಪದೇ ಪದೇ ತನ್ನ ತಾಯಿಯ ಬಳಿ ಅಳಲು ತೋಡಿಕೊಂಡಿದ್ದರು. ವರದಕ್ಷಿಣೆ ಪಿಶಾಚಿಯ ಕಿರುಕುಳ ಮಿತಿಮೀರಿದಾಗ, ಜೀವನದಲ್ಲಿ ಜಿಗುಪ್ಸೆಗೊಂಡ ಕೀರ್ತಿ ನಿನ್ನೆ ಬೆಳಿಗ್ಗೆ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ.

ಕೀರ್ತಿ ಆತ್ಮಹ*ತ್ಯೆ ಮಾಡಿಕೊಂಡ ವಿಷಯ ತಿಳಿದ ಪತಿ ಗುರುಪ್ರಸಾದ್, ಪೋಷಕರಿಗೆ ಸತ್ಯ ಮರೆಮಾಚಿ ‘ಕೀರ್ತಿ ತಲೆ ಸುತ್ತಿ ಬಿದ್ದಿದ್ದಾಳೆ, ಆಸ್ಪತ್ರೆಗೆ ಸೇರಿಸಿದ್ದೇವೆ’ ಎಂದು ಸುಳ್ಳು ಮಾಹಿತಿ ನೀಡಿದ್ದಾನೆ. ಪೋಷಕರು ಆಸ್ಪತ್ರೆಗೆ ಬಂದು ನೋಡಿದಾಗ ಕೀರ್ತಿ ಮೃತಪಟ್ಟಿರುವುದು ದೃಢಪಟ್ಟಿದೆ. ಇದರಿಂದ ಆಘಾತಕ್ಕೊಳಗಾದ ಪೋಷಕರು ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸದ್ಯ ಮೃತದೇಹದ ಮರಣೋತ್ತರ ಪರೀಕ್ಷೆ ಮುಗಿದಿದ್ದು, ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಕೀರ್ತಿಯ ಅಂತ್ಯಕ್ರಿಯೆಯನ್ನು ಮಧುಗಿರಿಯ ಸ್ವಗ್ರಾಮದಲ್ಲಿ ನೆರವೇರಿಸಲು ಪೋಷಕರು ಮೃತದೇಹವನ್ನು ಕೊಂಡೊಯ್ದಿದ್ದಾರೆ. ಪೊಲೀಸರು ಪತಿ ಗುರುಪ್ರಸಾದ್ ಮತ್ತು ಆತನ ಕುಟುಂಬದ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

WhatsApp Group Join Now

Spread the love

Leave a Reply