ಆಸ್ತಿ ವಿವಾದಕ್ಕೆ ತಂದೆಯನ್ನೇ ಮಕ್ಕಳು ಹತ್ಯೆ ಮಾಡಿದ ಭೀಕರ ಘಟನೆ ಸಿಲಿಕಾನ್ ಸಿಟಿಯ ಇಂದಿರಾನಗರದಲ್ಲಿ ನಡೆದಿದೆ. ಇಂದಿರಾನಗರದ ದೂಪನಹಳ್ಳಿ ಪ್ರದೇಶದಲ್ಲಿ ಶನಿವಾರ ರಾತ್ರಿ ಈ ದುರ್ಘಟನೆ ಸಂಭವಿಸಿದ್ದು, ತಂದೆ ಮತ್ತು ಮಕ್ಕಳ ನಡುವೆ ಆಸ್ತಿಯ ವಿಚಾರವಾಗಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿದೆ.
ಮೃತರನ್ನು ಮುನಿಕೃಷ್ಣಪ್ಪ (70) ಎಂದು ಗುರುತಿಸಲಾಗಿದ್ದು, ಅವರು ಬಿಎಂಟಿಸಿ ಸಂಸ್ಥೆಯ ನಿವೃತ್ತ ಕಂಡಕ್ಟರ್ ಆಗಿದ್ದರು.
ಆಸ್ತಿ ವಿವಾದವೇ ಕೊಲೆಗೆ ಕಾರಣ
ಮುನಿಕೃಷ್ಣಪ್ಪ ಅವರು ಕೋಟ್ಯಾಂತರ ಮೌಲ್ಯದ ಆಸ್ತಿ ಹೊಂದಿದ್ದು, ಅದರಲ್ಲಿನ ಕೆಲವು ಆಸ್ತಿಯನ್ನು ಮೊಮ್ಮಕ್ಕಳ ಹೆಸರಿಗೆ ವಿಲ್ ಮಾಡಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿ ಕಳೆದ ಕೆಲವು ವರ್ಷಗಳಿಂದ ತಂದೆ ಮತ್ತು ಮಕ್ಕಳ ನಡುವೆ ಆಗಾಗ ಜಗಳ ನಡೆಯುತ್ತಿತ್ತು.
ಫೆಬ್ರವರಿ 14ರ ಶನಿವಾರ ರಾತ್ರಿ ಸುಮಾರು 9.30ರ ವೇಳೆಗೆ ಮುನಿಕೃಷ್ಣಪ್ಪ ಮತ್ತು ಅವರ ಮಗ ಮೋಹನ್ ಕುಮಾರ್ ನಡುವೆ ತೀವ್ರ ಗಲಾಟೆ ನಡೆದಿದೆ. ಈ ವೇಳೆ ಮೋಹನ್ ಕುಮಾರ್ ಹಾಗೂ ಇನ್ನೊಬ್ಬ ಮಗ ಗಜೇಂದ್ರ ಸೇರಿ ಹಾಕಿ ಸ್ಟಿಕ್ ಹಾಗೂ ಕಬ್ಬಿಣದ ರಾಡ್ ಬಳಸಿ ಮುನಿಕೃಷ್ಣಪ್ಪ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಈ ಭೀಕರ ಹೊಡೆತಕ್ಕೆ ಅವರು ಅಲ್ಲೇ ಕುಸಿದು ಬಿದ್ದಿದ್ದಾರೆ. ಹಲ್ಲೆಯ ಪರಿಣಾಮ ತೀವ್ರ ರಕ್ತಸ್ರಾವದಿಂದ ಮುನಿಕೃಷ್ಣಪ್ಪ ಕುಸಿದು ಬಿದ್ದ ಅವರನ್ನು ಸ್ಥಳೀಯರು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ.
ಪ್ರಕರಣ ದಾಖಲು, ಆರೋಪಿಯ ಬಂಧನ
ಪೂರ್ವ ವಿಭಾಗ ಡಿಸಿಪಿ ವಿಕ್ರಮ್ ಅಮ್ಟೆ ಹೇಳಿಕೆ ನೀಡಿ, ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ದಿವ್ಯಾ ಎನ್ನುವವರು ಬೆಳಗಿನ ಜಾವ 2 ಗಂಟೆ ಸುಮಾರಿಗೆ ದೂರು ನೀಡಿದ್ರು. ಮುನಿಕೃಷ್ಣಪ್ಪ ಎನ್ನುವವರ ಮೇಲೆ ಹಲ್ಲೆ ಆಗಿದೆ ಎಂದು ದೂರು ಕೊಟ್ರು. ಮುನಿಕೃಷ್ಣಪ್ಪ ಮತ್ತು ಅವರ ಮಕ್ಕಳ ನಡುವೆ ಆಸ್ತಿ ವಿಚಾರಕ್ಕೆ ವಿವಾದ ಇತ್ತು. ನಾಯಿ ಹಿಡಿದು ವಾಕಿಂಗ್ ಮಾಡುವಾಗ ಬಂದು ಹಲ್ಲೆ ಮಾಡಿದ್ದಾರೆ. ಘಟನೆ ಸಂಬಂಧ ಎರಡು ತಂಡ ಮಾಡಿ ತನಿಖೆ ಮಾಡಲಾಗಿತ್ತು. ಮೋಹನ್ ಕುಮಾರ್ ಎಂಬುವವರನ್ನ ಬಂಧನ ಮಾಡಲಾಗಿದೆ. ಆರೋಪಿ ಬಂಧನ ಮಾಡಿ ಹೆಚ್ಚಿನ ತನಿಖೆಯನ್ನ ನಡೆಸಲಾಗ್ತಿದೆ. ದಿವ್ಯಾ ಅವರ ಪತಿ ಗಜೇಂದ್ರ ವಿರುದ್ಧವೂ ದೂರು ನೀಡಿದ್ದಾರೆ. ತನಿಖೆ ನಡೆಸಿ ಗಜೇಂದ್ರ ನ ಪಾತ್ರ ಇದ್ದರೂ ಕ್ರಮ ತೆಗೆದುಕೊಳ್ಳಲಾಗುತ್ತೆ. ಇಂದಿರಾನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ನಡೆಸಲಾಗ್ತಿದೆ ಎಂದು ಮಾಹಿತಿ ನೀಡಿದರು.
ನಗರವನ್ನೇ ಬೆಚ್ಚಿಬೀಳಿಸಿದ ಘಟನೆ
ತಂದೆಯನ್ನೇ ಮಕ್ಕಳು ಆಸ್ತಿಗಾಗಿ ಕೊಂದಿರುವ ಈ ಘಟನೆ ಇಂದಿರಾನಗರ ಸೇರಿದಂತೆ ಬೆಂಗಳೂರು ನಗರವನ್ನೇ ಬೆಚ್ಚಿಬೀಳಿಸಿದೆ. ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮುಂದುವರಿದಿದೆ.
ಬಿಎಂಟಿಸಿ ನಿವೃತ್ತ ಕಂಡಕ್ಟರ್ ಗೆ ಕೋಟಿಗಟ್ಟಲೆ ಆಸ್ತಿ ತಂದ ಕುತ್ತು, ಇಂದಿರಾನಗರದಲ್ಲಿ ಮಕ್ಕಳಿಂದಲೇ ತಂದೆ ಹತ್ಯೆ!
WhatsApp Group
Join Now