ರೈತರ ಮಗನ ಮದುವೆಯಾಗುವ ಹುಡುಗಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಘೋಷಿಸಿ : ರೈತರಿಂದ ಸಿಎಂ ಸಿದ್ದರಾಮಯ್ಯಗೆ ಕೋರಿಕೆ

Spread the love

ರೈತರ ಮಗನನ್ನು ವಿವಾಹವಾಗುವ ಹೆಣ್ಣು ಮಕ್ಕಳಿಗೆ ಸರಕಾರಿ ಉದ್ಯೋಗಗಳಲ್ಲಿ ಶೇ.20ರಷ್ಟು ಮೀಸಲು ಯೋಜನೆ ಜಾರಿ ಮಾಡುವಂತೆ ರೈತ ಸಂಘಟನೆಗಳು ಸರಕಾರದ ಮುಂದೆ ಬೇಡಿಕೆ ಇಟ್ಟಿವೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ವಿಧಾನಸೌಧದಲ್ಲಿ ನಡೆಸಿದ 2026 – 27ನೇ ಸಾಲಿನ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ರೈತ ಮುಖಂಡರು ಈ ಬೇಡಿಕೆ ಸಲ್ಲಿಸಿದ್ದಾರೆ.

ರೈತ ಯುವಕರನ್ನು ಮದುವೆಯಾಗಲು ವಧು ಸಿಗದಿರುವುದು ಸದ್ಯ ಒಂದು ಸಾಮಾಜಿಕ ಪಿಡುಗಾಗಿದೆ. ಹಾಗಾಗಿ, ಯುವಜನರು ಕೃಷಿಯಿಂದ ವಿಮುಖರಾಗುವುದನ್ನು ತಪ್ಪಿಸಲು ಹಾಗೂ ರೈತರ ಮಕ್ಕಳನ್ನು ವಿವಾಹವಾಗಲು ಯುವತಿಯರು ಆಸಕ್ತಿ ತೋರದಿರುವ ಹಿನ್ನೆಲೆಯಲ್ಲಿ ಈ ಘೋಷಣೆ ಮಾಡಬೇಕು ಎಂಬ ಹಕ್ಕೊತ್ತಾಯ ಸಲ್ಲಿಸಲಾಯಿತು.

ರೈತರ ಮಗನನ್ನು ವಿವಾಹವಾಗುವ ಹೆಣ್ಣು ಮಕ್ಕಳಿಗೆ 10 ಲಕ್ಷ ರೂ. ಠೇವಣಿ ಇಡುವ, ಕೃಷಿ ಮತ್ತು ಕೃಷಿ ಸಂಬಂಧಿ ಸಣ್ಣ ಉದ್ದಿಮೆ ಸ್ಥಾಪಿಸಲು ಬಡ್ಡಿ ರಹಿತ ಸಾಲ ನೀಡುವಂತಹ ಉತ್ತೇಜನ ಕ್ರಮಗಳನ್ನು ಬಜೆಟ್‌ನಲ್ಲಿ ಪ್ರಕಟಿಸಬೇಕು ಎಂದು ರಾಜ್ಯ ರೈತ ಸಂಘದ ಮುಖಂಡರು ಸಭೆಯಲ್ಲಿಸಿಎಂಗೆ ಬೇಡಿಕೆ ಇಟ್ಟರು.

ಕೃಷಿ ಸಚಿವ ಚಲುವರಾಯಸ್ವಾಮಿ, ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್‌, ನೀತಿ ಆಯೋಗದ ಉಪಾಧ್ಯಕ್ಷ ಬಿ.ಆರ್‌.ಪಾಟೀಲ್‌, ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ಹಣಕಾಸು ಇಲಾಖೆ ಅಧಿಕಾರಿಗಳು, ರೈತ ಸಂಘಟನೆಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

ರೈತ ಸಂಘಟನೆಗಳ ಪ್ರಮುಖ ಬೇಡಿಕೆಗಳು ಏನು?

• ಕೃಷಿ ಭೂಮಿ ಫಲವತ್ತತೆ ಹಾಗೂ ಜಲಮೂಲಗಳ ಪುನಃಶ್ಚೇತನಕ್ಕಾಗಿ ಕೆರೆಗಳ ಹೂಳು ತೆಗೆಸಿ ರೈತರ ಜಮೀನಿಗೆ ಸಾಗಿಸಬೇಕು.
• ಕಿಸಾನ್‌ ಸಮ್ಮಾನ್‌ ಯೋಜನೆಯಡಿ ರಾಜ್ಯ ಸರಕಾರದ ವತಿಯಿಂದ ವಾರ್ಷಿಕ 4000 ರೂ. ಸಹಾಯಧನ ಮುಂದುವರಿಸಬೇಕು.
• ಭೂಸುಧಾರಣೆ ತಿದ್ದುಪಡಿ ಕಾಯಿದೆ ರದ್ದುಪಡಿಸಬೇಕು. ಎಪಿಎಂಸಿಗಳಲ್ಲಿರೈತರ ಉತ್ಪನ್ನಗಳ ಅಡಮಾನ ಸಾಲ ಯೋಜನೆಗೆ ಶಕ್ತಿ ತುಂಬಬೇಕು.
• ಕಳಪೆ ಕೀಟನಾಶಕ ಮತ್ತು ಬೀಜ, ನಕಲಿ ಗೊಬ್ಬರ ಮಾರಾಟ ಮಾಡುವವರ ವಿರುದ್ಧ ಕಠಿಣ ಶಿಕ್ಷೆ ವಿಧಿಸುವ ಕಾನೂನು ಜಾರಿಗೊಳಿಸಬೇಕು.
• ರೈತರ ಎಲ್ಲ ಬೆಳೆಗಳಿಗೂ ಬೆಳೆ ವಿಮೆ ಜಾರಿಗೆ ತರಬೇಕು.
ಬ್ಯಾಂಕ್‌ಗಳ ಕೃಷಿ ಸಾಲ ನೀತಿ ಬದಲಾಗಬೇಕು. ರೈತರ ಭೂಮಿ ಮೌಲ್ಯದ ಶೇ.75ರಷ್ಟು ಸಾಲ ನೀಡುವ ಯೋಜನೆ ಜಾರಿಗೊಳಿಸಬೇಕು.
• ಕಬ್ಬಿಗೆ ಸಮರ್ಪಕ ಬೆಲೆ ನಿಗದಿಪಡಿಸಬೇಕು. ಕಟಾವು ಮತ್ತು ಸಾಗಾಣಿಕೆ ವೆಚ್ಚವನ್ನು ಸಕ್ಕರೆ ಕಾರ್ಖಾನೆಗಳೇ ಭರಿಸಬೇಕು.

WhatsApp Group Join Now

Spread the love

Leave a Reply