ಹಾರ್ವರ್ಡ್ ವಿಶ್ವವಿದ್ಯಾಲಯದ ಹೊಸ ಸಂಶೋಧನೆಯು ಶಾಕಿಂಗ್ ಸುದ್ದಿಯೊಂದನ್ನು ರಿವೀಲ್ ಮಾಡಿದೆ. ಅದೇನೆಂದರೆ ನಾವು ರಾತ್ರಿ ವೇಳೆ ಬಳಸುವ ಸಣ್ಣ ಪ್ರಮಾಣದ ಕೃತಕ ಬೆಳಕು (Artificial light) ಕೂಡ ನಮ್ಮ ಹೃದಯದ ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಈ ಬೆಳಕಿನ ಮಾಲಿನ್ಯವು ಹಿಂದೆ ಯೋಚಿಸಿದ್ದಕ್ಕಿಂತ ಹೆಚ್ಚು ಹಾನಿಕಾರಕ ಎಂದು ವಿಜ್ಞಾನಿಗಳು ತೀರ್ಮಾನಿಸಿದ್ದಾರೆ.
ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯದಂತಹ ಅಂಶಗಳು ಹೃದಯ ಕಾಯಿಲೆಗೆ ಕಾರಣವಾಗಬಹುದು ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಹಿಂದೆ ಯಾರೂ ಬೆಳಕಿನ ಮಾಲಿನ್ಯದ ಬಗ್ಗೆ ಹೆಚ್ಚಿನ ಸಂಶೋಧನೆ ಮಾಡಿಲ್ಲ. ಆದರೆ ಕೃತಕ ಬೆಳಕು ಹೃದಯ ವ್ಯವಸ್ಥೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕಂಡುಹಿಡಿಯಲು ಸಂಶೋಧಕರು ಸುಧಾರಿತ ಮೆದುಳಿನ ಚಿತ್ರಣ ತಂತ್ರ (Advanced Brain Imaging Techniques) ಬಳಸಿದ್ದಾರೆ.
ಡಾ. ಅಬೋಹಾಶೆಮ್ (Dr. Abohashem) ಅವರ ತಂಡವು ಹತ್ತು ವರ್ಷಗಳ ಅವಧಿಯಲ್ಲಿ 466 ಆರೋಗ್ಯವಂತ ಜನರ ಮೇಲೆ ಈ ಅಧ್ಯಯನವನ್ನು ನಡೆಸಿತು. ರಾತ್ರಿಯಲ್ಲಿ ಹೆಚ್ಚು ಬೆಳಕಿಗೆ ಒಡ್ಡಿಕೊಳ್ಳುವವರಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಸಂಶೋಧಕರು ಗಮನಿಸಿದರು.
ಮಿದುಳಿನ ಒತ್ತಡ :- ರಾತ್ರಿ ಸಮಯದಲ್ಲಿ ಕೃತಕ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಮೆದುಳಿನಲ್ಲಿ ಒತ್ತಡದ ಚಟುವಟಿಕೆ ಹೆಚ್ಚಾಗುತ್ತದೆ.
ಅಪಧಮನಿಗಳಲ್ಲಿ ಉರಿಯೂತ :- ಮೆದುಳಿನಲ್ಲಿನ ಒತ್ತಡವು ರಕ್ತನಾಳಗಳಲ್ಲಿ ಉರಿಯೂತವನ್ನು ಉಂಟುಮಾಡುವ ಪ್ರತಿರಕ್ಷಣಾ ಪ್ರತಿಕ್ರಿಯೆ(Immune response)ಯನ್ನು ಪ್ರಚೋದಿಸುತ್ತದೆ ಎಂದು ಅಧ್ಯಯನವು ವಿವರಿಸುತ್ತದೆ. ಕಾಲಾನಂತರದಲ್ಲಿ ಈ ಪ್ರಕ್ರಿಯೆಯು ಅಪಧಮನಿಗಳ ಗಟ್ಟಿಯಾಗುವಿಕೆಗೆ ಕಾರಣವಾಗುತ್ತದೆ. ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ.
ಎಷ್ಟು ಅಪಾಯಕಾರಿ?
ಅಧ್ಯಯನದ ಅತ್ಯಂತ ಆತಂಕಕಾರಿ ಸಂಗತಿಯೆಂದರೆ ರಾತ್ರಿಯಲ್ಲಿ ಬೆಳಕಿಗೆ ಒಡ್ಡಿಕೊಳ್ಳುವುದು ಹೆಚ್ಚಾದಂತೆ ಐದು ವರ್ಷಗಳಲ್ಲಿ ಹೃದ್ರೋಗದ ಅಪಾಯವು ಶೇಕಡ 35 ರಷ್ಟು ಹೆಚ್ಚಾಗಿದೆ. ಶಬ್ದ ಮಾಲಿನ್ಯ ಮತ್ತು ಜೀವನಶೈಲಿಯಂತಹ ಇತರ ಅಂಶಗಳನ್ನು ಗಣನೆಗೆ ತೆಗೆದುಕೊಂಡ ನಂತರವೂ ಈ ಅಪಾಯವು ಹಾಗೆಯೇ ಉಳಿದಿದೆ. ಡಾ. ಅಬೋಹಾಶೆಮ್ ಪ್ರಕಾರ, ರಾತ್ರಿಯಲ್ಲಿ ಬೆಳಕಿನಲ್ಲಿನ ಸಣ್ಣ ಹೆಚ್ಚಳವು ಸಹ ಮೆದುಳು ಮತ್ತು ಅಪಧಮನಿಗಳಲ್ಲಿನ ಒತ್ತಡದ ಪ್ರತಿಕ್ರಿಯೆಗಳೊಂದಿಗೆ ಸಂಬಂಧಿಸಿದೆ ಮತ್ತು ಹೆಚ್ಚಿನ ಮಟ್ಟದ ಬೆಳಕಿಗೆ ಒಡ್ಡಿಕೊಳ್ಳುವುದು ಹೃದ್ರೋಗದ ಹೆಚ್ಚಿನ ಅಪಾಯದೊಂದಿಗೆ ಸಂಬಂಧಿಸಿದೆ. ಕಡಿಮೆ ಆದಾಯದ ಅಥವಾ ಹೆಚ್ಚಿನ ದಟ್ಟಣೆಯ ಪ್ರದೇಶಗಳಲ್ಲಿ ವಾಸಿಸುವ ಜನರಲ್ಲಿ ಈ ಅಪಾಯ ಹೆಚ್ಚಿರುವುದು ಕಂಡುಬಂದಿದೆ.
ನಿದ್ರೆಯ ಮೇಲೆ ಪರಿಣಾಮ
ರಾತ್ರಿಯಲ್ಲಿ ಕೃತಕ ಬೆಳಕಿನಿಂದ ಉಂಟಾಗುವ ಹಾನಿಗಳು ಹೃದಯದ ಆರೋಗ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ನಮ್ಮ ದೇಹದ ನಿದ್ರೆ ಎಚ್ಚರ ಚಕ್ರವನ್ನೂ (Sleep Wake Cycle) ಅಡ್ಡಿಪಡಿಸುತ್ತದೆ. ಕೊನೆಗೆ ಇದು ಕಳಪೆ ನಿದ್ರೆ ಮತ್ತು ನಿದ್ರಾಹೀನತೆಗೆ ಕಾರಣವಾಗುತ್ತದೆ.
ಆಲ್ಝೈಮರ್ಸ್
ಹಿಂದಿನ ಅಧ್ಯಯನಗಳು ರಾತ್ರಿಯಲ್ಲಿ ಪ್ರಕಾಶಮಾನವಾದ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ವಯಸ್ಸಾದವರಲ್ಲಿ ಆಲ್ಝೈಮರ್ ಕಾಯಿಲೆಯ ಅಪಾಯ ಹೆಚ್ಚಾಗುತ್ತದೆ ಎಂದು ತೋರಿಸಿವೆ.
ಬೆಳಕಿನ ಮಾಲಿನ್ಯವನ್ನು ಕಡಿಮೆ ಮಾಡುವುದು ಹೇಗೆ?
ಬೆಳಕಿನ ಮಾಲಿನ್ಯವನ್ನು ಕಡಿಮೆ ಮಾಡಲು ಸುಲಭ ಮಾರ್ಗಗಳು
ಕೋಣೆಯನ್ನು ಕತ್ತಲೆಯಾಗಿಡಿ
ಮಲಗುವ ಕೋಣೆಯನ್ನು ಸಾಧ್ಯವಾದಷ್ಟು ಕತ್ತಲೆಯಾಗಿಡಿ.
ಫೋನ್, ಟಿವಿ ನೋಡಬೇಡಿ
ಮಲಗುವ ಮುನ್ನ ಫೋನ್ ಮತ್ತು ಟಿವಿ ನೋಡುವುದನ್ನು ತಪ್ಪಿಸಿ.
ಬ್ಲ್ಯಾಕೌಟ್ ಕರ್ಟನ್‌ಗಳು
ಹೊರಗಿನ ಬೀದಿ ದೀಪಗಳಿಂದ ಬರುವ ಬೆಳಕನ್ನು ತಡೆಯಲು ದಪ್ಪ ಕರ್ಟನ್‌ಗಳು ಅಥವಾ ಸ್ಲೀಪ್ ಮಾಸ್ಕ್ ಬಳಸಿ.
ಡಾ. ಅಬೋಹಾಶೆಮ್ ಹೇಳುವಂತೆ ಬೆಳಕಿನ ಮಾಲಿನ್ಯವು ಕೇವಲ ಒಂದು ಉಪದ್ರವವಲ್ಲ, ಅದು ಹೃದಯ ಕಾಯಿಲೆಯ ಅಪಾಯವನ್ನು ಸಕ್ರಿಯವಾಗಿ ಹೆಚ್ಚಿಸುತ್ತಿದೆ. ಆದ್ದರಿಂದ ಅದನ್ನು ತಡೆಗಟ್ಟುವುದು ಬಹಳ ಮುಖ್ಯ.