ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ನಡೆದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 5 ವಿಕೆಟ್ಗಳ ಭರ್ಜರಿ ಗೆಲುವನ್ನು ಕಂಡು 1 – 0 ಅಂತರದ ಮುನ್ನಡೆಯನ್ನು ಸಾಧಿಸಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮೊದಲ ಇನ್ನಿಂಗ್ಸ್ನಲ್ಲಿ 471 ರನ್ಗಳಿಗೆ ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್ ಹಾಗೂ ರಿಷಭ್ ಪಂತ್ ಶತಕಗಳ ನೆರವಿನಿಂದ ಆಲ್ಔಟ್ ಆಗಿತ್ತು. ಬಳಿಕ ಇಂಗ್ಲೆಂಡ್ 465 ರನ್ಗಳಿಗೆ ಆಲ್ಔಟ್ ಆಗಿತ್ತು. ಈ ಮೂಲಕ ಭಾರತ ಮೊದಲ ಇನ್ನಿಂಗ್ಸ್ನಲ್ಲಿ 6 ರನ್ಗಳ ಮುನ್ನಡೆ ಸಾಧಿಸಿತ್ತು.
ಬಳಿಕ ಎರಡನೇ ಇನ್ನಿಂಗ್ಸ್ನಲ್ಲಿ ಕೆ ಎಲ್ ರಾಹುಲ್ ಹಾಗೂ ರಿಷಭ್ ಪಂತ್ ಶತಕಗಳ ನೆರವಿನಿಂದ ಭಾರತ 364 ರನ್ ಗಳಿಸಿ ಆಲ್ಔಟ್ ಆಗಿ ಇಂಗ್ಲೆಂಡ್ಗೆ 371 ರನ್ಗಳ ಗುರಿಯನ್ನು ನೀಡಿತ್ತು. ಅತ್ತ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ನಲ್ಲಿ ಬೆನ್ ಡಕೆಟ್ ಅಬ್ಬರದ ಶತಕದ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 373 ರನ್ ದಾಖಲಿಸಿತು.
ಹೀಗೆ ಭಾರತ ಭರ್ಜರಿ ಆರಂಭ ಮಾಡಿ ಹೀನಾಯ ಸೋಲನ್ನು ಕಂಡಿದ್ದು, ಎರಡೂ ಇನ್ನಿಂಗ್ಸ್ನಲ್ಲಿಯೂ ಕೆಳ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯವಾಗಿದ್ದು ಸೋಲಿಗೆ ಪ್ರಮುಖ ಕಾರಣವಾಗಿದೆ. ರಿಷಭ್ ಪಂತ್ವರೆಗಿನ ಆಟಗಾರರು ಮಾತ್ರ ಕೊಡುಗೆ ನೀಡಿದ್ದು, ನಂತರದ ಆಟಗಾರರೆಲ್ಲ ನೀರಸ ಪ್ರದರ್ಶನ ನೀಡಿದ್ದಾರೆ.
ಇದನ್ನು ಸ್ಕೈ ಸ್ಪೋರ್ಟ್ಸ್ ಚಾನೆಲ್ನಲ್ಲಿ ಕಾಮೆಂಟರಿ ಮಾಡುತ್ತಿದ್ದ ದಿನೇಶ್ ಕಾರ್ತಿಕ್ ಸಹ ಟೀಕಿಸಿದ್ದು, ಭಾರತ ತಂಡ ಡಾಬರ್ಮ್ಯಾನ್ ನಾಯಿಯಂತಾಗಿದೆ ಎಂದಿದ್ದಾರೆ. ಅದರ ತಲೆ ಚೆನ್ನಾಗಿದೆ, ದೇಹವೂ ಸರಿಯಿದೆ, ಆದರೆ ಬಾಲವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಈ ಮೂಲಕ ಆರಂಭಿಕ ಬ್ಯಾಟ್ಸ್ಮನ್ಗಳು ಹಾಗೂ ನಾಲ್ಕು ಮತ್ತು ಐದನೇ ಕ್ರಮಾಂಕದ ಬ್ಯಾಟ್ಸ್ಮನ್ಗಳು ಚೆನ್ನಾಗಿ ಆಡಿದ್ದು, ನಂತರದ ಆಟಗಾರರು ವಿಫಲರಾದ ಕಾರಣ ಬಾಲವಿಲ್ಲದ ನಾಯಿಗೆ ಹೋಲಿಕೆ ಮಾಡಿದ್ದಾರೆ.

ಇಂಗ್ಲೆಂಡ್ ವಿರುದ್ಧ ಸೋತ ಟೀಮ್ ಇಂಡಿಯಾವನ್ನು ನಾಯಿಗೆ ಹೋಲಿಸಿದ ದಿನೇಶ್ ಕಾರ್ತಿಕ್
WhatsApp Group
Join Now