ಮದ್ಯದ ನಶೆಯಲ್ಲಿ ತಾಯಿಯ ಜೊತೆ ತಮಾಷೆ ಮಾಡಲು ಹೋಗಿ ನೇಣಿಗೆ ಸಿಲುಕಿ ಯುವಕನೋರ್ವ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ರೋಹಿತ್ ನಗರದಲ್ಲಿ ನಡೆದಿದೆ. ವಿಜಯಕುಮಾರ್(28) ಮೃತ ದುರ್ದೈವಿಯಾಗಿದ್ದು, ಮಗನ ಹುಚ್ಚಾಟಕ್ಕೆ ತಾಯಿ ಹಾಗೂ ಸಂಬಂಧಿಕರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.
ನಿನ್ನೆ ಸಂಜೆ ಮದ್ಯ ಸೇವಿಸಿ ಮನೆಗೆ ತೆರಳಿದ್ದ ವಿಜಯ್ ಕುಮಾರ್ ತಾಯಿ ಬಳಿ ಖರ್ಚಿಗೆ ಹಣ ನೀಡುವಂತೆ ಕೇಳಿದ್ದ. ಈ ವೇಳೆ ಆಕೆ ಕೊಡಲ್ಲ ಎಂದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಳ್ತೀನಿ ಎಂದು ಬೆದರಿಕೆ ಹಾಕಿದ್ದ. ಬಳಿಕ ತಮಾಷೆ ಮಾಡಲು ಹೋಗಿ ನೇಣಿನ ಕುಣಿಕೆಗೆ ಸಿಲುಕಿ ವಿಜಯ್ ಮೃತಪಟ್ಟಿದ್ದಾರೆ. ನಿನ್ನೆ ರಾತ್ರಿ 8 ಗಂಟೆಗೆ ಘಟನೆ ನಡೆದಿದ್ದು, ಸ್ಥಳಕ್ಕೆ ನೆಲಮಂಗಲ ಟೌನ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ನೆಲಮಂಗಲ ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದೆ.
ಇದೇ ರೀತಿ ಹಿಂದೆಯೂ ತಮಾಷೆ ಮಾಡಿದ್ದ ವಿಜಯ್
ವೃತ್ತಿಯಲ್ಲಿ ಎಲೆಕ್ಟ್ರೀಷಿಯನ್ ಆಗಿದ್ದ ವಿಜಯ್ಕುಮಾರ್ಗೆ ಮದುವೆ ಮಾಡಬೇಕೆಂದು ತಾಯಿ ಕನಸು ಕಂಡಿದ್ದರು. ಚೆನ್ನಾಗಿ ಮಾತನಾಡುತ್ತಾ ತಮಾಷೆಯ ಸ್ವಾಭಾವ ಹೊಂದಿದ್ದ ವಿಜಯ್ ಮದ್ಯಪಾನ ಮಾಡಿ ಬಂದಿದ್ದಕ್ಕೆ ತಾಯಿ ಬೈದಿದ್ದರು. ಆ ವೇಳೆ ಆಕೆಯನ್ನು ತಮಾಷೆಗೆ ಹೆದರಿಸಲು ಹೋಗಿ ವಿಜಯ್ ನೇಣಿನ ಕುಣಿಕೆಗೆ ಸಿಲುಕಿದ್ದು, ಮನೆಯವರಿಗೆ ಇದು ಗಮನಕ್ಕೆ ಬರುವಷ್ಟರಲ್ಲಿ ಆತನ ಪ್ರಾಣಪಕ್ಷಿ ಹಾರಿ ಹೋಗಿತ್ತು. ಹೆತ್ತವರ ಬಳಿ ಇದೇ ರೀತಿ ಹಲವು ಬಾರಿ ಈತ ತಮಾಷೆ ಮಾಡಿದ್ದು, ಸಾವಿನ ವಿಚಾರದಲ್ಲಿ ತಮಾಷೆ ಮಾಡಬೇಡ ಕಣೋ ಎಂದು ಹಲವು ಬಾರಿ ತಾಯಿಯೂ ವಿಜಯ್ಗೆ ಬುದ್ಧಿ ಹೇಳಿದ್ದರು. ಆದರೂ ಅದೇ ಚಾಳಿ ಮುಂದುವರಿಸಿದ್ದ ಕಾರಣ ಈಗ ಮಗ ಪ್ರಾಣವನ್ನೇ ಕಳೆದುಕೊಂಡಿದ್ದಾನೆ ಎಂದು ಕುಟುಂಬಸ್ಥರು ಅಲವತ್ತುಕೊಂಡಿದ್ದಾರೆ.
ಎಣ್ಣೆ ನಶೆಯಲ್ಲಿ ತಾಯಿಗೆ ಹೆದರಿಸಲು ಹೋದ ಮಗ ಹೆಣವಾದ.! ತಮಾಷೆಯಾಟಕ್ಕೆ ಬಲಿಯಾಯ್ತು ಯುವಕನ ಪ್ರಾಣ
WhatsApp Group
Join Now