ಕಾಂಗ್ರೆಸ್ ನಾಯಕರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಇಲ್ಲಿಯೂ ‘ಡಿನ್ನರ್ ಪಾರ್ಟಿ’ ಮುಂದುವರಿಸಿರುವುದು ನಾಡಿನ ಜನತೆ ಮತ್ತು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ. ನಿವಿಲ್ಲಿ ಅಧಿವೇಶನಕ್ಕೆ ಬಂದಿದ್ದೀರೋ ಡಿನ್ನರ್ ಪಾರ್ಟಿಗೆ ಬಂದಿದ್ದೀರೋ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿ ಕಾರಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ‘ನಿಮ್ಮ ನಾಯಕತ್ವದ ಸಮಸ್ಯೆ ಬಗೆಹರಿಸಿಕೊಂಡು, ನಂತರ ಬೆಳಗಾವಿ ಅಧಿವೇಶನಕ್ಕೆ ಬರಬೇಕು ಎಂದು ನಾವು ಮೊದಲೇ ತಕರಾರು ಮಾಡಿದ್ದೇವು.10 ದಿನ ಮುಂಚಿತವಾಗಿ ಮತ್ತೆ ಸ್ಪಷ್ಟವಾಗಿ ಹೇಳಿದ್ದೇವು. ಇವರು ಜನಾಧಿವೇಶನವನ್ನು ತಮ್ಮ ಕುರ್ಚಿ ಕಾಪಾಡುವ ಅಧಿವೇಶನ ಮಾಡಿಕೊಳ್ಳುತ್ತಿದ್ದಾರೆ’ ಎಂದರು.
‘ನೀವೇನು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಲ್ಲ. ಇಡೀ ರಾಜ್ಯದ ಮುಖ್ಯಮಂತ್ರಿ. ಇಷ್ಟೊಂದು ಗೊಂದಲ ಇಟ್ಟುಕೊಂಡು ಕಾಟಾಚಾರಕ್ಕೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸುವುದು ಬೇಡ. ಅಧಿವೇಶನ ಮುಂದೂಡಿ ಎಂದು ಕೂಡ ಸಲಹೆ ನೀಡಿದ್ದೇವು’ ಎಂದೂ ಹೇಳಿದರು.
‘ಕಳೆದ ನಾಲ್ಕು ತಿಂಗಳಿನಿಂದ ಪದೇ ಪದೇ ಡಿನ್ನರ್ ಮೀಟಿಂಗ್ ಮಾಡಿಕೊಂಡು ಬಂದಿದ್ದಾರೆ. ಇದೇ ಕಾರಣದಿಂದ ಕಬ್ಬು ಬೆಳೆಗಾರರ ಹೋರಾಟ ವಿಕೋಪಕ್ಕೆ ಹೋಯಿತು. ರಾಜ್ಯದ ಜನರ ಸಮಸ್ಯೆಗಳ ಕುರಿತು ಚಿಂತನೆ ಮಾಡಲು ಈ ಸರ್ಕಾರ ಸಮಯ ಕೊಡಲಿಲ್ಲ. ಡಿನ್ನರ್, ಲಂಚ್ ಮೀಟಿಂಗ್ ನಲ್ಲಿ ಕಬ್ಬು, ಮೆಕ್ಕೆಜೋಳ ಬೆಳೆಗಾರರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತಾರೆ ಅಂದರೆ ಅದೂ ಇಲ್ಲ. ಕೇವಲ ತಮ್ಮ ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ಕಸರತ್ತು ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ ನೇತೃತ್ವದ ತಂಡವು ಹೇಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕುರ್ಚಿಯಿಂದ ಬೀಳಿಸಬೇಕು ಎಂದು ತಂತ್ರಗಾರಿಕೆ ರೂಪಿಸಲು ಮೀಟಿಂಗ್ ಮಾಡುತ್ತಿದೆ. ಇದರ ನಡುವೆ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದು. ರೈತರು ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ’ ಎಂದು ವಿಜಯೇಂದ್ರ ಕಿಡಿಕಾರಿದರು.
ಅಧಿವೇಶನಕ್ಕೆ ಬಂದಿರೊ? ಪಾರ್ಟಿ ಮಾಡಲು ಬಂದಿರೊ? ಕೈ ನಾಯಕರ ವಿರುದ್ಧ ಬಿವೈವಿ ಕಿಡಿ
WhatsApp Group
Join Now