ಈಗಾಗಲೇ ಮದುವೆಯಾಗಿ ತಲಾ ಇಬ್ಬರು ಮಕ್ಕಳಿದ್ದರೂ ಅಕ್ರಮ ಸಂಬಂಧ ಹೊಂದಿದ್ದ ಜೋಡಿಯೊಂದು ದುರಂತ ಅಂತ್ಯ ಕಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.
ಹೌದು..ಸಲ್ಮಾಳನ್ನು ಚಾಕುವಿನಿಂದ ಇರಿದು ಕೊಂದು ಆಕೆಯ ಪ್ರಿಯತಮ ಬಾಬಾಜಾನ್ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಾಬಾಜಾನ್ ಈ ನಿರ್ಧಾರಕ್ಕೆ ಕಾರಣವೇನು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಆದರೆ ಇವರಿಬ್ಬರ ಅನೈತಿಕ ಸಂಬಂಧ ವಿಚಾರದಲ್ಲಿ ಎರಡು ಕುಟುಂಬಗಳ ಮಧ್ಯೆ ಈ ಹಿಂದೆ ಗಲಾಟೆ ಆಗಿತ್ತು ಎನ್ನಲಾಗಿದೆ.
ನಡೆದಿದ್ದೇನು..?: ಸಲ್ಮಾ ಚಿಕ್ಕಬಳ್ಳಾಪುರ ಜಿಲ್ಲೆ ಚೇಳೂರು ತಾಲೂಕಿನ ಗರಿಗಿರೆಡ್ಡಿಪಾಳ್ಯಾ ನಿವಾಸಿಯಾಗಿದ್ದು, ಈಕೆಯ ಗಂಡ ಕೂಲಿ ಕೆಲಸ ಮಾಡಿಕೊಂಡಿದ್ದ. ಈಕೆಯೂ ಅದೇ ಕೆಲಸ ಮಾಡುತ್ತಿದ್ದಳು. ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಇನ್ನೊಂದೆಡೆ ಮೂಲತಃ ಆಂಧ್ರದ ನಿವಾಸಿಯಾಗಿರುವ ಬಾಬಾಜಾನ್ ಕುಟುಂಬ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದಲ್ಲಿ ವಾಸವಿತ್ತು. ಈತ ಚೆಳೂರು ಪಟ್ಟಣದಲ್ಲಿ ರೂಮ್ ಮಾಡಿಕೊಂಡು ವಾಸವಿದ್ದ.
ಸಲ್ಮಾ ಹಾಗೂ ಬಾಬಾಜಾನ್ ಇಬ್ಬರಿಗೂ ಪ್ರತ್ಯೇಕ ವಿವಾಹವಾಗಿ ಮಕ್ಕಳು ಇದ್ದರೂ ಪ್ರೀತಿ ಪ್ರೇಮದ ಹೆಸರಲ್ಲಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು. ಈ ನಡುವೆ ಇಬ್ಬರ ಮಧ್ಯೆ ಏನಾಯ್ತೋ ಗೊತ್ತಿಲ್ಲ, ಸಲ್ಮಾ ಮನೆಗೆ ಬಂದಿದ್ದ ಬಾಬಾಜಾನ್ ಆಕೆಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಇನ್ನು ಸಲ್ಮಾ ಕೊಲೆ ಬಳಿಕ ಚೆಳೂರು ಪಟ್ಟಣದಲ್ಲಿ ಮಾಡಿಕೊಂಡಿದ್ದ ಬಾಡಿಗೆ ರೂಮ್ಗೆ ತೆರಳಿರುವ ಬಾಬಾಜಾನ್, ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಚೇಳೂರು ಠಾಣೆ ಪೊಲೀಸರು ಎರಡು ಸ್ಥಳಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಲ್ಮಾ ಹತ್ಯೆ ಪ್ರಕರಣದ ಜೊತೆಗೆ ಆತ್ಮಹತ್ಯೆ ಕೇಸ್ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅನೈತಿಕ ಸಂಬಂಧದ ವಿಚಾರವಾಗಿ ಕುಟುಂಬಸ್ಥರ ಗಲಾಟೆ ಬಳಿಕವೂ ಇವರು ಬೇರೆ ಬೇರೆ ಆಗಿರಲಿಲ್ಲ ಎಂಬ ಮಾಹಿತಿ ತನಿಖೆ ವೇಳೆ ತಿಳಿದುಬಂದಿದೆ.
ಗೃಹಿಣಿ ಆತ್ಮಹತ್ಯೆ: ವಿವಾಹಿತೆಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಬನಶಂಕರಿ ನಗರದಲ್ಲಿ ನಡೆದಿದೆ. ಮೃತಳನ್ನು ಕೀರ್ತಿ ಎಂದು ಗುರುತಿಸಲಾಗಿದೆ. ಈಕೆ ಎರಡು ವರ್ಷಗಳ ಹಿಂದೆಯಷ್ಟೇ ಗುರುಪ್ರಸಾದ್ ಎಂಬಾತನ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಭಾನುವಾರ (ಜ.25) ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಕೀರ್ತಿ ಶವ ಪತ್ತೆಯಾಗಿದೆ. ಈ ವೇಳೆ ಪತಿ ಗುರುಪ್ರಸಾದ್ ಹಾಗೂ ಪರಿಚಯಸ್ಥರು ಪೋಷಕರಿಗೆ ಮಾಹಿತಿ ನೀಡಿ, ತಲೆ ತಿರುಗಿ ಬಿದ್ದಿದ್ದಳು ಆಸ್ಪತ್ರೆಗೆ ಸೇರಿಸಿದ್ದೇವೆ ಎಂದು ತಿಳಿಸಿದ್ದರು.
ಮೃತಳ ಪೋಷಕರ ಮಾಹಿತಿ ಪ್ರಕಾರ, ಕೈತುಂಬಾ ವರದಕ್ಷಿಣೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದರು. ಆದರೂ ಕೂಡ ಕಳೆದ ಎರಡು ತಿಂಗಳಿಂದ ಕಿರುಕುಳ ನೀಡುತ್ತಿದ್ದರು. ಇದೆಲ್ಲವನ್ನು ಕೀರ್ತಿ ತನ್ನ ತಾಯಿ ಬಳಿ ಹೇಳಿಕೊಂಡಿದ್ದಳು. ಹೀಗಾಗಿ ಕಿರುಕುಳಕ್ಕೆ ಬೇಸತ್ತೇ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕುರಿತು ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮದುವೆಯಾಗಿ ಮಕ್ಕಳಿದ್ದರೂ ಅನೈತಿಕ ಸಂಬಂಧ- ದುರಂತ ಅಂತ್ಯ ಕಂಡ ಜೋಡಿ!
WhatsApp Group
Join Now