ಆತ LLB, ಆಕೆ ಬಿಕಾಂ… ಉನ್ನತ ಶಿಕ್ಷಣ ಪಡೆದಿದ್ರೂ ದೇವಸ್ಥಾನದ ಮುಂದೆ ಭಿಕ್ಷೆ, ಮನಕಲಕುತ್ತೆ ದಂಪತಿಯ ಕಣ್ಣೀರ ಕತೆ!

Spread the love

ಮಹಾಮಾರಿ ಕರೊನಾ ಸಾಂಕ್ರಾಮಿಕ ರೋಗವು ಭಾರತದಲ್ಲಿ ಮಾತ್ರವಲ್ಲದೆ ಇಡೀ ಜಗತ್ತಿನಾದ್ಯಂತ ಅನೇಕ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಕೆಲವರು ಆರೋಗ್ಯ ಸಮಸ್ಯೆಗಳಿಂದ ತೀವ್ರವಾಗಿ ಬಳಲಿದರೆ, ಇನ್ನು ಕೆಲವರು ಉದ್ಯೋಗ ಕಳೆದುಕೊಂಡು ಜೀವನೋಪಾಯವಿಲ್ಲದೆ ಬೀದಿಗೆ ಬಿದ್ದಿದ್ದಾರೆ.

ಈ ರೀತಿ ಅತಂತ್ರ ಸ್ಥಿತಿಗೆ ಸಿಲುಕಿದ ಜನರಲ್ಲಿ ಕೆಲವರು ಉನ್ನತ ಶಿಕ್ಷಣವನ್ನೂ ಪಡೆದಿದ್ದಾರೆ. ಅಂಥವರಲ್ಲಿ ಜಲಂಧರ್ ರೆಡ್ಡಿ ಮತ್ತು ಸಿರಿಷಾ ದಂಪತಿ ಕೂಡ ಒಬ್ಬರು. ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ಮಂಥನಿ ಮೂಲದ ಜಲಂಧರ್ ರೆಡ್ಡಿ, ಎಲ್‌ಎಲ್‌ಬಿ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಇನ್ನೂ ಅವರ ಪತ್ನಿ ಸಿರಿಷಾ ಬಿ.ಕಾಂ. ಮುಗಿಸಿದ್ದಾರೆ. ಇಬ್ಬರು 2006ರಲ್ಲಿ ವಿವಾಹವಾದರು. ಜಲಂಧರ್ ರೆಡ್ಡಿ, ಕರೀಂನಗರದಲ್ಲಿ ವಕೀಲರಾಗಿ ಅಭ್ಯಾಸ ಮಾಡಿ ಬಾಡಿಗೆ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದರು.

ಕರೊನಾ ಸಾಂಕ್ರಾಮಿಕ ರೋಗದ ನಂತರ, ಅವರ ವೃತ್ತಿಗೆ ತೊಂದರೆಯಾಯಿತು. ಆರ್ಥಿಕ ಸಮಸ್ಯೆಗಳ ಜೊತೆಗೆ, ಸಿರಿಷಾ ಅನಾರೋಗ್ಯಕ್ಕೂ ಒಳಗಾದರು ಮತ್ತು ಅನೇಕ ಆಸ್ಪತ್ರೆಗಳಿಗೆ ಭೇಟಿ ನೀಡಬೇಕಾಯಿತು. ಆದಾಗ್ಯೂ, ಸಿರಿಷಾ ಅವರ ಆರೋಗ್ಯ ಸುಧಾರಿಸಲಿಲ್ಲ. ಇನ್ನೊಂದೆಡೆ ಮಕ್ಕಳಿಲ್ಲದ ಕಾರಣ ಜೀವನದ ಮೇಲೆಯೇ ಭ್ರಮನಿರಸನಗೊಂಡರು. ಎರಡು ವರ್ಷಗಳ ಹಿಂದೆ ವೇಮುಲವಾಡಕ್ಕೆ ಬಂದ ದಂಪತಿ, ರಾಜಣ್ಣ ದೇವಸ್ಥಾನ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀ ರಾಜ ರಾಜೇಶ್ವರ ಸ್ವಾಮಿ ದೇವಸ್ಥಾನದ ಸುತ್ತಮುತ್ತ ವಾಸಿಸಲು ಶುರು ಮಾಡಿದರು.

ರಾಜಣ್ಣ ಸಿರಿಸಿಲ್ಲಾ ಜಿಲ್ಲಾಧಿಕಾರಿ ಗರಿಮಾ ಅಗರ್ವಾಲ್ ಅವರ ಆದೇಶದ ಮೇರೆಗೆ, ಜಿಲ್ಲಾ ಕಲ್ಯಾಣ ಅಧಿಕಾರಿ ಮತ್ತು ಹೆಚ್ಚುವರಿ ಎಸ್ಪಿ ಇತ್ತೀಚೆಗೆ ರಾಜಣ್ಣ ದೇವಸ್ಥಾನದ ಸುತ್ತಮುತ್ತ ಭಿಕ್ಷೆ ಬೇಡುತ್ತಿದ್ದವರಿಗೆ ಕೌನ್ಸೆಲಿಂಗ್ ನಡೆಸಿದರು. ಈ ಪ್ರಕ್ರಿಯೆಯಲ್ಲಿ, ಜಲಂಧರ್ ರೆಡ್ಡಿ ಮತ್ತು ಅವರ ಪತ್ನಿ ಸಿರಿಷಾ ವಿಷಯ ಬೆಳಕಿಗೆ ಬಂದಿತು. ಅವರ ಬಗ್ಗೆ ತಿಳಿದ ಅಧಿಕಾರಿಗಳು ಮತ್ತು ಸ್ಥಳೀಯ ಜನರು ಒಂದು ಕ್ಷಣ ಶಾಕ್ ಆದರು.

ದೇವಸ್ಥಾನದ ಮೆಟ್ಟಿಲುಗಳಲ್ಲಿ ಭಿಕ್ಷೆ ಬೇಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಜಲಂಧರ್ ರೆಡ್ಡಿ, ಕರೊನಾದಿಂದಾಗಿ ನಮ್ಮ ಜೀವನವೇ ನಾಶವಾಯಿತು. ನನ್ನ ಕೆಲಸ ಹೋಯಿತು. ನನ್ನ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿದ್ದು, ಎಷ್ಟೇ ಆಸ್ಪತ್ರೆಗಳಿಗೆ ಹೋದರೂ ಗುಣಮುಖಳಾಗಲಿಲ್ಲ. ರಾಜಣ್ಣ ತನ್ನ ಪತ್ನಿಯ ಕನಸಿನಲ್ಲಿ ಬಂದ ಕಾರಣ ಆಕೆ ಇಲ್ಲಿಗೆ ಬಂದಳು. ನಂತರ, ನಾನು ಕೂಡ ಆಕೆಯನ್ನು ಹುಡುಕಿಕೊಂಡು ಇಲ್ಲಿದೆ ಬಂದೆ.

ನಾವು ಪ್ರತಿದಿನ ರಾಜಣ್ಣ ದೇವಸ್ಥಾನದ ಮೆಟ್ಟಿಲುಗಳನ್ನು ಸ್ವಚ್ಛಗೊಳಿಸುತ್ತೇವೆ. ನಾವು ಯಾರಿಂದಲೂ ಕೈ ಚಾಚಿ ಹಣ ಕೇಳುವುದಿಲ್ಲ ಆದರೆ, ಅವರಾಗಿಯೇ ಹಣ ನೀಡಿದರೆ ಬೇಡ ಎನ್ನುವುದಿಲ್ಲ. ಅಧಿಕಾರಿಗಳು ಭಿಕ್ಷುಕರೊಂದಿಗೆ ನಮ್ಮನ್ನೂ ಆಶ್ರಮಕ್ಕೆ ಕರೆದೊಯ್ದರು. ಆದರೆ, ನಾವು ಮತ್ತೆ ದೇವಸ್ಥಾನದ ಮೆಟ್ಟಿಲುಗಳಿಗೆ ಬಂದೆವು. ಸರ್ಕಾರ ಒಂದು ಉದ್ಯೋಗ ನೀಡಿದರೆ ಅನುಕೂಲವಾಗುತ್ತದೆ ಎಂದು ಜಲಂಧರ್ ರೆಡ್ಡಿ ಹೇಳಿದರು.

ಅಂದಹಾಗೆ, ಇಂದಿನ ಯುಗದಲ್ಲಿ ಸಣ್ಣಪುಟ್ಟ ಕಾರಣಗಳಿಗೂ ದಂಪತಿಗಳು ಬೇರ್ಪಡುತ್ತಿರುವಾಗ, ಪತ್ನಿಯ ಯೋಗಕ್ಷೇಮಕ್ಕಾಗಿ ಎಲ್ಲವನ್ನೂ ತ್ಯಜಿಸುವ ಗಂಡನ ಮನೋಭಾವ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

WhatsApp Group Join Now

Spread the love

Leave a Reply