ರಾಜ್ಯದಲ್ಲಿ ಕೆಲ ಪೊಲೀಸ್ ಠಾಣೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಇನ್ನೂ ಕೆಲವೆಡೆ ಸರಿಯಾದ ಕಾರ್ಯಕ್ಷಮತೆ ಕಾಣಿಸುತ್ತಿಲ್ಲ. ಸುಮಾರು 88 ಅಪರಾಧ ಪ್ರಕರಣಗಳಲ್ಲಿ ಪೊಲೀಸರೇ ಶಾಮೀಲಾಗಿರುವುದು ‘ಬೇಲಿಯೇ ಎದ್ದು ಹೊಲ ಮೇಯ್ದಂತೆ’ ಅಕ್ಷಮ್ಯ ಅಪರಾಧವಾಗಿದ್ದು, ಇದು ರಾಜ್ಯ ಸರ್ಕಾರಕ್ಕೂ ಪೊಲೀಸ್ ಇಲಾಖೆಗೂ ಕೆಟ್ಟ ಹೆಸರು ತರುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, 2003ರಿಂದ ರಾಜ್ಯದಲ್ಲಿ ಒಟ್ಟಾರೆ ಅಪರಾಧ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಹೇಳಿದರು. ಇದಕ್ಕೆ ಉದಾಹರಣೆಯಾಗಿ, ರಾಯಚೂರು ಜಿಲ್ಲೆಯ ಕವಿತಾಳ ಪೊಲೀಸ್ ಠಾಣೆ ದೇಶದ ಅತ್ಯುತ್ತಮ ಪೊಲೀಸ್ ಠಾಣೆಗಳ ಪೈಕಿ ಮೂರನೇ ಸ್ಥಾನ ಪಡೆದಿರುವುದನ್ನು ಅವರು ಉಲ್ಲೇಖಿಸಿದರು.
ಬಲಾಢ್ಯರ ಕೈಗೊಂಬೆ ಆಗಬೇಡಿ
ಪೊಲೀಸ್ ಸಬ್ ಇನ್ಸ್ಪೆಕ್ಟರ್, ಎಎಸ್ಪಿ, ಡಿವೈಎಸ್ಪಿ, ಎಸಿಪಿ ಮಟ್ಟದ ಅಧಿಕಾರಿಗಳಿಗೆ ಗೊತ್ತಿಲ್ಲದೆ ಯಾವುದೇ ಅಪರಾಧ ನಡೆಯಲು ಸಾಧ್ಯವಿಲ್ಲ. ಆದ್ದರಿಂದ ಪೊಲೀಸರು ಹೆಚ್ಚು ಜಾಗರೂಕತೆಯಿಂದ ಮತ್ತು ದಕ್ಷತೆಯಿಂದ ಕೆಲಸ ಮಾಡಬೇಕು, ವಿಶೇಷವಾಗಿ ದುರ್ಬಲ ವರ್ಗಗಳಿಗೆ ರಕ್ಷಣೆ ನೀಡಬೇಕು. ಬಲಾಢ್ಯರ ಕೈಗೊಂಬೆಗಳಂತೆ ಕಾರ್ಯನಿರ್ವಹಿಸಬಾರದು ಎಂದು ಸ್ಪಷ್ಟ ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ತಿಳಿಸಿದರು.
ಕಳ್ಳತನ, ಸುಲಿಗೆ, ದರೋಡೆ, ಕೊಲೆ ಪ್ರಕರಣಗಳು ಕಡಿಮೆಯಾಗುತ್ತಿದ್ದರೂ, ಸೈಬರ್ ಅಪರಾಧ ಹಾಗೂ ಮಾದಕ ವಸ್ತು (ಡ್ರಗ್ಸ್) ಪ್ರಕರಣಗಳು ಇಳಿಮುಖವಾಗುತ್ತಿಲ್ಲ ಎಂಬುದು ಗಂಭೀರ ವಿಚಾರ ಎಂದು ಸಿದ್ದರಾಮಯ್ಯ ಹೇಳಿದರು. ಡ್ರಗ್ಸ್ನಿಂದ ಯುವಜನರು ಹಾಳಾಗುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕವನ್ನು ಮಾದಕ ವಸ್ತು ಮುಕ್ತ ರಾಜ್ಯವಾಗಿಸುವುದಾಗಿ ಸರ್ಕಾರ ಘೋಷಿಸಿದೆ. ಪೊಲೀಸರು ಎಚ್ಚರಿಕೆಯಿಂದ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದರೆ ಇದು ಸಾಧ್ಯವಾಗುತ್ತದೆ, ಜೊತೆಗೆ ಯುವಜನರ ಭವಿಷ್ಯವನ್ನೂ ರಕ್ಷಿಸಬಹುದು ಎಂದರು.
ಡ್ರಗ್ಸ್ ದಂಧೆಯಲ್ಲಿ ತೊಡಗಿರುವ ವಿದೇಶಿಯರನ್ನು ಯಾವುದೇ ಮುಲಾಜಿಲ್ಲದೆ ಅವರ ದೇಶಗಳಿಗೆ ವಾಪಸ್ ಕಳಿಸಬೇಕು ಎಂದು ಸೂಚನೆ ನೀಡಿದರು. ಡ್ರಗ್ಸ್ ಮಾರಾಟಗಾರರು, ವ್ಯಸನಿಗಳು ಮತ್ತು ಸರಬರಾಜುದಾರರನ್ನು ಸಮರ್ಪಕವಾಗಿ ವಿಚಾರಣೆ ಮಾಡಿದರೆ, ಅದರ ಉತ್ಪಾದಕರು ಮತ್ತು ದೊಡ್ಡ ಜಾಲವನ್ನು ಪತ್ತೆಹಚ್ಚಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ಈ ಕಾರ್ಯವನ್ನು ಎಲ್ಲ ಪೊಲೀಸ್ ಠಾಣೆಗಳಲ್ಲಿ ತಕ್ಷಣದಿಂದಲೇ ಆರಂಭಿಸಬೇಕು ಎಂದು ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಮೇಲಾಧಿಕಾರಿಗಳು ನಿಗಾ ಇಡಿ
ವಿದೇಶಿಯರು ಜಾಮೀನಿನ ಮೇಲೆ ಬಿಡುಗಡೆಯಾಗಿ ರಾಜ್ಯದಲ್ಲೇ ಉಳಿದರೆ, ಮತ್ತೆ ಅದೇ ಅಪರಾಧಗಳಲ್ಲಿ ತೊಡಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಅವರ ವಿರುದ್ಧ ಕಠಿಣ ಕ್ರಮ ಅನಿವಾರ್ಯ ಎಂದು ಸಿದ್ದರಾಮಯ್ಯ ಹೇಳಿದರು. ಇನ್ನು ಠಾಣೆಗಳಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ ಮತ್ತು ಡಿವೈಎಸ್ಪಿ ಗಳ ಮೇಲೆ ಮೇಲಾಧಿಕಾರಿಗಳು ಕಟ್ಟುನಿಟ್ಟಿನ ನಿಗಾ ಇಡಬೇಕು. ಅಪರಾಧಗಳಲ್ಲಿ ಅವರು ಶಾಮೀಲಾಗದಂತೆ ಖಚಿತಪಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಮಹಾರಾಷ್ಟ್ರದ ಪೊಲೀಸರು ಬೆಂಗಳೂರಿಗೆ ಬಂದು ಡ್ರಗ್ಸ್ ಪತ್ತೆಹಚ್ಚಲು ಸಾಧ್ಯವಾದರೆ, ನಮ್ಮ ರಾಜ್ಯದ ಪೊಲೀಸರಿಗೆ ಯಾಕೆ ಸಾಧ್ಯವಾಗದು?” ಎಂದು ಪ್ರಶ್ನಿಸಿದ ಅವರು ಡ್ರಗ್ಸ್ ಪತ್ತೆಯಲ್ಲಿ ವಿಫಲವಾದ ಸಂಬಂಧಪಟ್ಟ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಪೊಲೀಸ್ ಇಲಾಖೆ ತನ್ನ ಜವಾಬ್ದಾರಿಯನ್ನು ಅರಿತು ದಕ್ಷತೆಯಿಂದ ಕೆಲಸ ಮಾಡಿದರೆ, ಅಪರಾಧ ನಿಯಂತ್ರಣ ಹಾಗೂ ಡಗ್ರ್ಸ್ ಮುಕ್ತ ಕರ್ನಾಟಕ ಸಾಧಿಸಬಹುದು ಎಂಬ ವಿಶ್ವಾಸವನ್ನು ಸಿದ್ದರಾಮಯ್ಯ ವ್ಯಕ್ತಪಡಿಸಿದರು.
ಡ್ರಗ್ಸ್ ದಂಧೆ ಮಾಡುವ ವಿದೇಶಿಯರನ್ನು ಮುಲಾಜಿಲ್ಲದೆ ಅವರ ದೇಶಕ್ಕೆ ಕಳಿಸಿ : ಸಿಎಂ ಸಿದ್ದರಾಮಯ್ಯ ಸೂಚನೆ
WhatsApp Group
Join Now