ಸಾಧನೆಗೆ ಬಡತನ ಮತ್ತು ಜಾತಿ ಅಡ್ಡಿಯಾಗದು ಎಂಬುದನ್ನು ದಾಂಡೇಲಿಯ ಪ್ರತಿಭೆ ಪದ್ಮಾವತಿ ನಾಗಣ್ಣ ಮಾದಿಗ ಸಾಬೀತುಪಡಿಸಿದ್ದಾರೆ. ಇತ್ತೀಚೆಗೆ ನಡೆದ ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಅಗ್ರ ಶ್ರೇಯಾಂಕದೊಂದಿಗೆ ಉತ್ತೀರ್ಣರಾಗಿರುವ ಪದ್ಮಾವತಿ, ದಾಂಡೇಲಿ ತಾಲ್ಲೂಕಿನ ಮೊಟ್ಟಮೊದಲ ಸಿವಿಲ್ ನ್ಯಾಯಾಧೀಶೆ ಎಂಬ ಇತಿಹಾಸ ನಿರ್ಮಿಸಿದ್ದಾರೆ.
ಬಡತನದಲ್ಲಿ ಅರಳಿದ ಪ್ರತಿಭೆ
ದಾಂಡೇಲಿಯ ಬಾಂಬೂಗೇಟ್ ನಿವಾಸಿಯಾದ ಪದ್ಮಾವತಿ ಅವರ ಕುಟುಂಬ ಅತ್ಯಂತ ಬಡತನದಿಂದ ಕೂಡಿದೆ. ತಂದೆ ನಾಗಣ್ಣ ಮತ್ತು ತಾಯಿ ಚರ್ಮಗಾರಿಕೆ (ಚಪ್ಪಲಿ ಹೊಲೆಯುವ ಕೆಲಸ) ಮಾಡುತ್ತಾ ಎಂಟು ಜನ ಮಕ್ಕಳನ್ನು (ಮೂರು ಹೆಣ್ಣು, ಐದು ಗಂಡು) ಸಾಕಿ ಸಲಹಿದ್ದರು. ಐದು ವರ್ಷಗಳ ಹಿಂದೆ ತಂದೆ ಸಾವು ಕಂಡಾಗ ಕುಟುಂಬಕ್ಕೆ ಆಸರೆಯಾಗಿದ್ದು ಪದ್ಮಾವತಿ ಅವರ ಸಹೋದರರು. ಇಂದಿಗೂ ಇವರ ಸಹೋದರರು ಅಪ್ಪನ ಕುಲಕಸುಬಾದ ಚಮ್ಮಾರಿಕೆಯನ್ನು ಮುಂದುವರಿಸುತ್ತಾ ಸಂಸಾರ ನಿಭಾಯಿಸುತ್ತಿದ್ದಾರೆ.
ಕನ್ನಡ ಮಾಧ್ಯಮದಲ್ಲೇ ಶಿಕ್ಷಣ
ಮೂಲತಃ ಆಂಧ್ರಪ್ರದೇಶದವರಾಗಿದ್ದರೂ ಪದ್ಮಾವತಿ ಅವರ ಶಿಕ್ಷಣ ಸಂಪೂರ್ಣವಾಗಿ ಕನ್ನಡ ಮಾಧ್ಯಮದಲ್ಲಿ ನಡೆದಿದೆ. ದಾಂಡೇಲಿಯ ಬಂಗೂರು ನಗರದ ಶಾಲಾ-ಕಾಲೇಜುಗಳಲ್ಲಿ ಪ್ರಾಥಮಿಕ ಹಾಗೂ ಪದವಿ ಮುಗಿಸಿದ ಇವರು, ಬೈಲಹೊಂಗಲ್ನಲ್ಲಿ ಕಾನೂನು ಪದವಿ ಪಡೆದಿದ್ದರು. ನಂತರ ಹಳಿಯಾಳದ ಬಾರ್ ಕೌನ್ಸಿಲ್ನಲ್ಲಿ ಐದು ವರ್ಷ ವಕೀಲೆಯಾಗಿ ಸೇವೆ ಸಲ್ಲಿಸಿ, ಈಗ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.
ಸಾಧನೆಗೆ ಪ್ರೇರಣೆಯಾದ ಸಹೋದರರು
“ನನ್ನ ಈ ಸಾಧನೆಗೆ ಸಹೋದರರೇ ಬೆನ್ನೆಲುಬು” ಎನ್ನುತ್ತಾರೆ ಪದ್ಮಾವತಿ. ಚರ್ಮಗಾರಿಕೆ ಮಾಡಿ ದುಡಿದ ಹಣದಲ್ಲಿ ಕುಟುಂಬವನ್ನು ಸಲಹುವುದರ ಜೊತೆಗೆ, ತಂಗಿಯ ಓದಿಗೂ ಅಣ್ಣಂದಿರು ಆರ್ಥಿಕ ನೆರವು ನೀಡಿದ್ದರು. ವಕೀಲ ವೃತ್ತಿಯ ನಡುವೆ ಅಖಿಲ ಭಾರತ ವಕೀಲರ ಒಕ್ಕೂಟ (AILU) ನೀಡಿದ ಆನ್ಲೈನ್ ತರಬೇತಿ ಪದ್ಮಾವತಿ ಅವರಿಗೆ ಪರೀಕ್ಷೆಯಲ್ಲಿ ಯಶಸ್ಸು ತಂದುಕೊಟ್ಟಿದೆ.
ಜಿಲ್ಲೆಯ ಸಮಾಜದ ಮೊದಲ ಜಡ್ಜ್
ಪದ್ಮಾವತಿ ಅವರು ಉತ್ತರ ಕನ್ನಡ ಜಿಲ್ಲೆಯ ಮಾದಿಗ ಸಮಾಜದ ಮೊಟ್ಟಮೊದಲ ನ್ಯಾಯಾಧೀಶರು ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. “ಶಿಕ್ಷಣದ ಮೂಲಕವೇ ತಳ ಸಮುದಾಯದವರು ತಮ್ಮ ಬದುಕನ್ನು ಭದ್ರಪಡಿಸಿಕೊಳ್ಳಬೇಕು. ಸಂವಿಧಾನದ ಆಶಯಕ್ಕೆ ಚ್ಯುತಿ ಬಾರದಂತೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತೇನೆ” ಎಂದು ಪದ್ಮಾವತಿ ತಮ್ಮ ಆಶಯ ವ್ಯಕ್ತಪಡಿಸಿದ್ದಾರೆ.
ಚಪ್ಪಲಿ ಹೊಲೆಯುವವನ ಮಗಳು ಈಗ ಸಿವಿಲ್ ಜಡ್ಜ್! ಬಡತನ ಸೀಳಿ ಸಾಧನೆಯ ಶಿಖರಕ್ಕೇರಿದ ದಾಂಡೇಲಿಯ ಪದ್ಮಾವತಿ!
WhatsApp Group
Join Now