ನಗರದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳು ಮತ್ತು ಸಂಚಾರ ಅಡಚಣೆಗಳಿಗೆ ಕಾರಣವಾಗುತ್ತಿರುವ ಪ್ರಮುಖ ಅಂಶಗಳಲ್ಲಿ ಪ್ರಕಾಶಮಾನವಾದ ಹೈ ಬೀಮ್ ಹೆಡ್‌ಲೈಟ್‌ಗಳ ದುರ್ಬಳಕೆ ಕೂಡ ಒಂದು ಗುರುತಿಸಲಾಗಿದೆ. ಕೆಲ ವಾಹನ ಚಾಲಕರು ಹಾಗೂ ಸವಾರರು ತಮ್ಮ ವಾಹನಗಳಲ್ಲಿ ಮಾನದಂಡ ಮೀರಿ ಹೆಚ್ಚು ಬೆಳಕು ಸೂಸುವ ಹೈಬೀಮ್ ಹಾಗೂ ಹೆಚ್ಚುವರಿ ಲೈಟ್‌ಗಳನ್ನು ಅಳವಡಿಸಿಕೊಂಡು ರಸ್ತೆಯಲ್ಲಿ ಸಂಚರಿಸುತ್ತಿರುವುದು ಸಾರ್ವಜನಿಕರ ಸುರಕ್ಷತೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಬೆಂಗಳೂರು ಟ್ರಾಫಿಕ್ ಪೊಲೀಸರು ತಪಾಸಣೆ ಕೈಗೊಂಡು, ಬರೋಬ್ಬರಿ 11,875 ವಾಹನ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ವಾಹನಗಳಿಗೆ ಹೈಬೀಮ್ ಫ್ಲಾಶ್‌ಲೈಟ್‌ಗಳ ಅಳವಡಿಕೆ ಕಾನೂನುಬಾಹಿರ. ಆದರೂ ಇತ್ತೀಚೆಗೆ ಬಹುತೇಕರು ಶೋಕಿಗಾಗಿ ತಮ್ಮ ವಾಹನಗಳಿಗೆ ಈ ರೀತಿಯ ಹೆಚ್ಚುವರಿ ಲೈಟ್ ಅಳವಡಿಸುವುದು ಹೆಚ್ಚಾಗುತ್ತಿದೆ. ಇದರಿಂದ ಎದುರು ದಿಕ್ಕಿನಲ್ಲಿ ಬರುವ ವಾಹನ ಸವಾರರಿಗೆ ಗೋಚರತೆ ಸಮಸ್ಯೆಯಾಗಿ ಅಪಘಾತಗಳು ಕೂಡ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಜನವರಿ 7ರಿಂದ ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ.
ಈ ಕಾರ್ಯಾಚರಣೆಯಡಿ ಹೈಬೀಮ್ ಹಾಗೂ ಅಕ್ರಮ ಹೆಚ್ಚುವರಿ ಲೈಟ್‌ಗಳನ್ನು ಬಳಸಿ ವಾಹನ ಚಲಾಯಿಸುತ್ತಿದ್ದ ಚಾಲಕರು ಮತ್ತು ಸವಾರರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ. ಟ್ರಾಫಿಕ್ ಪೊಲೀಸ್ ಇಲಾಖೆ ನೀಡಿರುವ ಮಾಹಿತಿಯಂತೆ, ಜನವರಿ 7ರಿಂದ 13ರವರೆಗೆ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು 11,875 ಪ್ರಕರಣಗಳನ್ನು ದಾಖಲಿಸಲಾಗಿದೆ. ಇದು ನಗರದಲ್ಲಿ ಹೈ ಬೀಮ್ ಲೈಟ್‌ಗಳ ದುರ್ಬಳಕೆ ಎಷ್ಟು ವ್ಯಾಪಕವಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.
ಹೈಬೀಮ್ ಬಳಕೆಯಿಂದ ಏನೆಲ್ಲ ಅಪಾಯ?
ಪೊಲೀಸರು ಹೇಳುವಂತೆ, ರಾತ್ರಿ ಸಮಯದಲ್ಲಿ ಹೈ ಬೀಮ್ ಲೈಟ್‌ಗಳ ಅತಿಯಾದ ಬಳಕೆ ಎದುರಿನಿಂದ ಬರುವ ವಾಹನ ಚಾಲಕರ ಕಣ್ಣಿಗೆ ತೀವ್ರ ಸಮಸ್ಯೆ ಉಂಟುಮಾಡುತ್ತದೆ. ಇದರಿಂದ ಕೆಲ ಕ್ಷಣಗಳ ಕಾಲ ದೃಷ್ಟಿ ಮಂಕಾಗುವ ಸಾಧ್ಯತೆ ಇದ್ದು, ಇದು ಅಪಘಾತಗಳಿಗೆ ಪ್ರಮುಖ ಕಾರಣವಾಗುತ್ತಿದೆ. ಅಲ್ಲದೆ ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರಿಗೂ ಈ ಬೆಳಕು ಅಪಾಯಕಾರಿ ಎಂದು ಎಚ್ಚರಿಸಿದ್ದಾರೆ.
ಈ ಹಿನ್ನೆಲೆ ಸಾರ್ವಜನಿಕರ ಸುಗಮ ಹಾಗೂ ಸುರಕ್ಷಿತ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಬೆಂಗಳೂರು ಟ್ರಾಫಿಕ್ ಪೊಲೀಸರು ಮುಂದುವರಿದ ದಿನಗಳಲ್ಲೂ ಇಂತಹ ಕಾರ್ಯಾಚರಣೆಗಳನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ. ವಾಹನ ಚಾಲಕರು ಲೋ ಬೀಮ್ ಲೈಟ್‌ಗಳ ಸರಿಯಾದ ಬಳಕೆ, ಅಕ್ರಮ ಲೈಟ್‌ಗಳ ಅಳವಡಿಕೆ ತಪ್ಪಿಸುವುದು ಹಾಗೂ ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ಸಹಕಾರ ನೀಡಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ. ಹೈ ಬೀಮ್ ಲೈಟ್‌ಗಳ ನಿಯಂತ್ರಣಕ್ಕಾಗಿ ಕೈಗೊಂಡಿರುವ ಈ ಕ್ರಮವು ರಸ್ತೆ ಸುರಕ್ಷತೆ ಹೆಚ್ಚಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಪೊಲೀಸ್ ಇಲಾಖೆ ಅಭಿಪ್ರಾಯಪಟ್ಟಿದೆ.
ಮಾರಾಟಗಾರರ ಮೇಲೂ ಕ್ರಮ ಕೈಗೊಳ್ಳಿ
ಹೈಬೀಮ್ ಮತ್ತು ಅಕ್ರಮವಾಗಿ ಅಳವಡಿಸುವ ಹೆಚ್ಚುವರಿ ಹೆಡ್‌ಲೈಟ್‌ಗಳ ವಿರುದ್ಧ ಬೆಂಗಳೂರು ಟ್ರಾಫಿಕ್ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುತ್ತಿರುವ ನಡುವೆ, ಇದೀಗ ಹೈಬೀಮ್ ಹೆಡ್‌ಲೈಟ್ ಮಾರಾಟಗಾರರ ಮೇಲೂ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಜೋರಾಗಿದೆ. ಈ ಸಮಸ್ಯೆಯ ಮೂಲದಲ್ಲಿರುವ ಅನಧಿಕೃತ ಲೈಟ್‌ಗಳ ಮಾರಾಟದ ಮೇಲೆ ಸಮರ್ಪಕ ನಿಯಂತ್ರಣ ಇಲ್ಲದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ನಗರದ ವಿವಿಧ ಭಾಗಗಳಲ್ಲಿ ಆಟೋಮೊಬೈಲ್ ಅಂಗಡಿಗಳು, ರಸ್ತೆ ಬದಿ ಶಾಪ್‌ಗಳು ಹಾಗೂ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಮಾನದಂಡ ಮೀರುವ ಲೈಟ್‌ಗಳನ್ನು ಸುಲಭವಾಗಿ ಮಾರಾಟ ಮಾಡಲಾಗುತ್ತಿದೆ. ಈ ಲೈಟ್‌ಗಳನ್ನು ವಾಹನಗಳಿಗೆ ಅಳವಡಿಸಿಕೊಂಡು ಸಂಚರಿಸುವುದರಿಂದ ಎದುರು ವಾಹನ ಚಾಲಕರ ದೃಷ್ಟಿಗೆ ತೀವ್ರ ತೊಂದರೆ ಉಂಟಾಗಿ, ಅಪಘಾತಗಳ ಸಾಧ್ಯತೆ ಹೆಚ್ಚುತ್ತಿದೆ ಎಂಬ ಆರೋಪಗಳು ಸಹ ಕೇಳಿಬರುತ್ತಿವೆ.
ಹೈಬೀಮ್ ಹೆಡ್‌ಲೈಟ್ ಅಳವಡಿಸಿದ್ದ 11,875 ವಾಹನಗಳ ವಿರುದ್ಧ ಕೇಸ್ ದಾಖಲು
WhatsApp Group
Join Now