ಇಲ್ಲಿನ ಐತಿಹಾಸಿಕ ಕೆಂಪುಕೋಟೆಯ ಬಳಿ ನಡೆದ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯು ಹಲವು ಅಂಶಗಳನ್ನು ಬಹಿರಂಗ ಮಾಡುತ್ತಿದೆ. ಕಳೆದ ಸೋಮವಾರ ಸಂಜೆ ವೇಳೆಗೆ ಕೆಂಪುಕೋಟೆ ಮೆಟ್ರೋ ಸ್ಟೇಶನ್ ಬಳಿ ಐ20 ಕಾರಿನಲ್ಲಿ ಸ್ಪೋಟವಾಗಿತ್ತು. ಆದರೆ ಇದೀಗ ಬೆಚ್ಚಿ ಬೀಳಿಸುವ ಮಾಹಿತಿಗಳು ಹೊರಬಿದ್ದಿದ್ದು, ಸುಮಾರು 32 ಕಾರುಗಳಲ್ಲಿ ಬಾಂಬ್ ಇರಿಸಲಾಗಿತ್ತು ಎನ್ನಲಾಗಿದೆ.
ಮಾರುತಿ ಸುಜುಕಾ ಬ್ರೆಝಾ, ಮಾರುತಿ ಸ್ವಿಫ್ಟ್ ಡಿಜೈರ್ ಮತ್ತು ಫೋರ್ಡ್ ಇಕೋಸ್ಪೋರ್ಟ್ ಸೇರಿದಂತೆ ಮೂವತ್ತೆರಡು ಕಾರುಗಳನ್ನು ಸ್ಫೋಟಕ ವಸ್ತುಗಳನ್ನು ಸಾಗಿಸಲು ಮತ್ತು ಬಾಂಬ್‌ಗಳನ್ನು ತಲುಪಿಸಲು ಸಿದ್ಧಪಡಿಸಲಾಗುತ್ತಿತ್ತು ಎಂದು ದೆಹಲಿ ಕೆಂಪು ಕೋಟೆ ಸ್ಫೋಟ ತನಿಖೆಯ ನಿಕಟ ಮೂಲಗಳನ್ನು ಉಲ್ಲೇಖಿಸಿ ಗುರುವಾರ (ನ.13) ಎನ್‌ಡಿಟಿವಿ ವರದಿ ಮಾಡಿದೆ.
ಬಾಬರಿ ಮಸೀದಿ ಪ್ರತೀಕಾರ
ಅಯೋಧ್ಯೆಯ 16 ನೇ ಶತಮಾನದ ಬಾಬರಿ ಮಸೀದಿಯನ್ನು ಕೆಡವಿದ ದಿನವಾದ ಡಿಸೆಂಬರ್ 6 ರಂದು ಸೇಡು ತೀರಿಸಿಕೊಳ್ಳಲು ದೇಶದೆಲ್ಲೆಡೆ ಹಲವು ಸ್ಪೋಟಗಳನ್ನು ಮಾಡಲು ಈ ಗುಂಪು ಯೋಜನೆ ರೂಪಿಸಿತ್ತು. ಸೋಮವಾರ ಸಂಜೆ ಸ್ಫೋಟಗೊಂಡ ಹುಂಡೈ ಐ20 ಸೇರಿದಂತೆ ಈ ಕಾರುಗಳು ದೆಹಲಿಯಲ್ಲಿ ಆರು ಸ್ಥಳಗಳನ್ನು ಒಳಗೊಂಡಂತೆ ಅನೇಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ನಡೆಸಬೇಕಿದ್ದ ಸರಣಿ ‘ಸೇಡು’ ದಾಳಿಯ ಭಾಗವಾಗಬೇಕಿತ್ತು.
ಈ ಕಾರ್ಯಕ್ಕಾಗಿ ಬಳಸಲಾಗುತ್ತಿದ್ದ ನಾಲ್ಕು ಕಾರುಗಳನ್ನು ಈಗಾಗಲೇ ಪತ್ತೆ ಮಾಡಲಾಗಿದೆ. ಹಳೆಯ ಕಾರುಗಳಾದ ಇವುಗಳನ್ನು ಈಗಾಗಲೇ ಹಲವು ಬಾರಿ ಮರು ಮಾರಾಟ ಮಾಡಲಾಗಿತ್ತು. ಪೊಲೀಸರಿಗೆ ಗುರುತು ಪತ್ತೆ ಮಾಡಲು ಕಷ್ಟವಾಗಬೇಕು ಎಂದು ಇಂತಹ ಕಾರುಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೂ ನಾಲ್ಕು ಕಾರುಗಳನ್ನು ಪತ್ತೆ ಮಾಡಲಾಗಿದೆ.
ಫರಿದಾಬಾದ್ ನ ಅಲ್ ಫತೇಹ್ ಕ್ಯಾಂಪಸ್‌ನಲ್ಲಿ ಬ್ರೇಜಾ ಕಾರನ್ನು ಪತ್ತೆ ಮಾಡಲಾಗಿದೆ. ಈ ಉಗ್ರ ಮಾಡ್ಯೂಲ್ ನ ಎಪಿಸೆಂಟರ್ ಆಗಿರುವ ಫರಿದಾಬಾದ್ ನ ಮತ್ತೊಂದೆಡೆ ಇಕೊಸ್ಪೋರ್ಟ್ ಕಾರನ್ನು ಬುಧವಾರ ಪತ್ತೆ ಮಾಡಲಾಗಿದ್ದು, ಕಾರಿನ ಹಿಂದಿನ ಸೀಟಿನಲ್ಲಿ ಮಲಗಿದ್ದ ಯುವಕನ್ನು ಬಂಧಿಸಲಾಗಿದೆ. ಆತನ ಗುರುತನ್ನು ಇದುವರೆಗೆ ಬಹಿರಂಗ ಮಾಡಿಲ್ಲ.
ಕಳೆದ ಸೋಮವಾರ ಡಿಸೈರ್ ಕಾರನ್ನು ವಶಕ್ಕೆ ಪಡೆದಿದ್ದು, ಅದರಲ್ಲಿ ರೈಫಲ್ ಮತ್ತು ಮದ್ದುಗುಂಡುಗಳನ್ನು ಪತ್ತೆ ಮಾಡಲಾಗಿದೆ.
ಸೋಮವಾರ ಬೆಳಿಗ್ಗೆ ಬದರ್ಪುರ್ ಗಡಿಯಲ್ಲಿ ದೆಹಲಿಯನ್ನು ಪ್ರವೇಶಿಸಿದ್ದ ಐ20 ಕಾರು ಕೆಲವು ಗಂಟೆಗಳ ಕಾಲ ನಗರದಲ್ಲಿ ಸಂಚರಿಸಿತ್ತು. ಸಂಜೆ 6.52ರ ಸಮಯಕ್ಕೆ ಕೆಂಪುಕೋಟೆಯ ಬಳಿ ಸ್ಪೋಟವಾಗಿತ್ತು. ಘಟನೆಯಲ್ಲಿ 13 ಮಂದಿ ಅಸುನೀಗಿದ್ದು, ಹಲವರು ಗಾಯಗೊಂಡಿದ್ದಾರೆ.
ಎದೆ ನಡುಗಿಸುವ ಸಂಚು.. 32 ಕಾರುಗಳಲ್ಲಿತ್ತು ಬಾಂಬ್.: ಸ್ಪೋಟವಾಗಿದ್ದು ಒಂದು ಮಾತ್ರ!
WhatsApp Group
Join Now