ಬೆಳಗಾವಿ : ಮಹಿಳಾ ಅಧಿಕಾರಿಯೊಬ್ಬರ ಖಾಸಗಿ ದೃಶ್ಯಗಳನ್ನು ಗುಪ್ತವಾಗಿ ಸೆರೆಹಿಡಿದು, ಬ್ಲ್ಯಾಕ್’ಮೇಲ್ ಮಾಡುತ್ತಿದ್ದ ಆರೋಪಿಗಳನ್ನು ಬೆಳಗಾವಿ ಪೊಲೀಸರು ಭೇದಿಸಿದ್ದಾರೆ. 50 ಲಕ್ಷ ರೂಪಾಯಿ ಹಣ ನೀಡದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಹಿನ್ನೆಲೆ
ಸಂತ್ರಸ್ತ ಮಹಿಳಾ ಅಧಿಕಾರಿಯ ಮನೆಯಲ್ಲಿ ಗುಪ್ತವಾಗಿ ಹಿಡನ್ ಕ್ಯಾಮೆರಾಗಳನ್ನು ಅಳವಡಿಸಿ, ಅವರ ಖಾಸಗಿ ಕ್ಷಣಗಳನ್ನು ಆರೋಪಿಗಳು ಚಿತ್ರೀಕರಿಸಿದ್ದರು. ಈ ವಿಡಿಯೋಗಳನ್ನು ಇಟ್ಟುಕೊಂಡು ಅಧಿಕಾರಿಗೆ ಬೆದರಿಕೆ ಹಾಕಲಾರಂಭಿಸಿದ ಆರೋಪಿಗಳು, ಬರೋಬ್ಬರಿ 50 ಲಕ್ಷ ರೂಪಾಯಿ ಹಣ ನೀಡುವಂತೆ ಬೇಡಿಕೆಯಿಟ್ಟಿದ್ದರು. ಹಣ ನೀಡದಿದ್ದರೆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದಾಗಿ ಬೆದರಿಸಿದ್ದರು.
ಪೊಲೀಸ್ ಕಮಿಷನರ್ ಮೊರೆ ಹೋದ ಅಧಿಕಾರಿ
ಆರೋಪಿಗಳ ಕಿರುಕುಳ ಮತ್ತು ಬ್ಲ್ಯಾಕ್ಮೇಲ್ನಿಂದ ಬೇಸತ್ತ ಮಹಿಳಾ ಅಧಿಕಾರಿಯು ಧೈರ್ಯ ಮಾಡಿ ಬೆಳಗಾವಿ ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಿದ್ದರು. ಪ್ರಕರಣದ ಗಂಭೀರತೆ ಅರಿತ ಕಮಿಷನರ್ ಅವರು ತಕ್ಷಣ ತನಿಖೆಗೆ ಆದೇಶಿಸಿದ್ದರು.
ಕಾರ್ಯಾಚರಣೆ ಮತ್ತು ಜಪ್ತಿ
ಗೋಕಾಕ್‌ನ ಸಮೀರ್ ನಿಸಾರ್ ಅಹ್ಮದ್ ಶೇಖ್, ಅಬ್ಬುಲ್ ರಶೀದ್ ಮಕಾಂದಾರ್ ಹಾಗೂ ಮೊಹಮ್ಮದ್ ಬಾಳೇಕುಂದ್ರಿ ಬಂಧಿತ ಆರೋಪಿಗಳು. ಆರೋಪಿಗಳು ಮಹಿಳಾ ಅಧಿಕಾರಿ ಮನೆಯ ಲೈಟ್ ಬಲ್ಬ್ ಹೋಲ್ಡರ್‌ಗಳಲ್ಲಿ ರಹಸ್ಯ ಕ್ಯಾಮರಾ ಅಳವಡಿಸಿ ಖಾಸಗಿ ದೃಶ್ಯಗಳನ್ನು ಸೆರೆಹಿಡಿದಿದ್ದರು. ಬಳಿಕ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವುದಾಗಿ ಬೆದರಿಸಿ 50 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ತನಿಖೆ ನಡೆಸಿದ ಮಾಳ ಮಾರುತಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 3 ಮೊಬೈಲ್ ಫೋನ್ಗಳು, 6 ಹಿಡನ್ ಕ್ಯಾಮೆರಾಗಳು,1 ಪೆನ್ ಡ್ರೈವ್ ಮತ್ತು ಮೆಮೋರಿ ಕಾರ್ಡ್ಗಳು, 2 ಒಟಿಜಿ (OTG) ಮತ್ತು ಒಂದು ಇನ್ನೋವಾ ಕ್ರಿಸ್ಟಾ ಕಾರು ವಶಪಡಿಸಿಕೊಳ್ಳಲಾಗಿದೆ.
ಮನೆಯೊಳಗೆ ರಹಸ್ಯ ಕ್ಯಾಮರಾ ಅಳವಡಿಸಿದ್ಹೇಗೆ ಆರೋಪಿಗಳು?
ಪ್ರಕರಣದಲ್ಲಿ ಮಹಿಳಾ ಅಧಿಕಾರಿಯ ಮನೆ ಕೆಲಸದವನ ಪಾತ್ರವೂ ಬೆಳಕಿಗೆ ಬಂದಿದೆ. ಮನೆ ಕಿಟಕಿಯಲ್ಲಿ ಬೀಗದ ಕೀಲಿಕೈಯನ್ನು ಇಡುವ ವಿಚಾರವನ್ನು ತಿಳಿದಿದ್ದ ಆತ ಆರೋಪಿಗಳಿಗೆ ಮಾಹಿತಿ ನೀಡುತ್ತಿದ್ದ ಎನ್ನಲಾಗಿದೆ. ಎರಡು ತಿಂಗಳ ಹಿಂದೆ ಮಹಿಳಾ ಅಧಿಕಾರಿ ಕೀಲಿಕೈ ಕಿಟಕಿಯಲ್ಲಿ ಇಟ್ಟು ಹೋಗಿದ್ದಾಗ ಮನೆ ಕೆಲಸದಾತ ಆರೋಪಿಗಳಿಗೆ ಮಾಹಿತಿ ನೀಡಿದ್ದ. ಅದರಂತೆ, ಸಮಯ ನೋಡಿ ಮನೆಗೆ ನುಗ್ಗಿದ್ದ ಆರೋಪಿಗಳು ಬೆಡ್‌ರೂಮ್ ಹಾಗೂ ಹಾಲ್‌ನಲ್ಲಿ ರಹಸ್ಯ ಕ್ಯಾಮರಾಗಳನ್ನು ಅಳವಡಿಸಿದ್ದರು. ಆ ಮೂಲಕ ಮಹಿಳಾ ಅಧಿಕಾರಿಯ ಖಾಸಗಿ ದೃಶ್ಯಗಳನ್ನು ಸೆರೆಹಿಡಿದು ನಂತರ ತೆಗೆದುಕೊಂಡು ಹೋಗಿದ್ದರು.
ಬಳಿಕ ಖಾಸಗಿ ವಿಡಿಯೋ ಆಧರಿಸಿ ಮಹಿಳಾ ಅಧಿಕಾರಿ ಬಳಿ ಹಣಕ್ಕೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಮೂವರನ್ನು ಬಂಧಿಸಿದ್ದು, ಪರಾರಿಯಾಗಿರುವ ಮನೆ ಕೆಲಸದವನ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.