ಬಜಾಜ್ ಶೋರೂಮ್ ಒಂದರ ಮುಂದೆ ಯುವಕನೊಬ್ಬ ತನ್ನ ಸ್ವಂತ ಇ-ರಿಕ್ಷಾಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ನಾಟಕೀಯ ಘಟನೆ ರಾಜಸ್ಥಾನದ ಜೋಧ್‌ಪುರದಲ್ಲಿ ನಡೆದಿದೆ. ಪದೇ ಪದೇ ದೂರು ನೀಡಿದರೂ ಕಂಪನಿಯು ದೋಷಪೂರಿತ ವಾಹನವನ್ನು ಸರಿಪಡಿಸದ ಅಥವಾ ಬದಲಿಸಿಕೊಡದ ಹಿನ್ನೆಲೆಯಲ್ಲಿ ಈ ಆಕ್ರೋಶದ ಪ್ರತಿಭಟನೆ ನಡೆದಿದೆ.
ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಏನಿದು ಘಟನೆ? ಮೋಹನ್ ಸೋಲಂಕಿ ಎಂಬುವವರು ಈ ಇ-ರಿಕ್ಷಾದ ಮಾಲೀಕರು. ಇವರು ಇ-ರಿಕ್ಷಾ ಖರೀದಿಸಿದ ದಿನದಿಂದಲೂ ಅದರ ಬ್ಯಾಟರಿಯಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು ಮತ್ತು ಮೈಲೇಜ್ ಕೂಡ ತೀರಾ ಕಡಿಮೆಯಾಗಿತ್ತು. ಹಲವು ಬಾರಿ ಸರ್ವಿಸ್ ಸೆಂಟರ್‌ಗೆ ಅಲೆದರೂ ಯಾವುದೇ ಪ್ರಯೋಜನವಾಗಲಿಲ್ಲ. ಇದರಿಂದ ಬೇಸತ್ತ ಸೋಲಂಕಿ, ಇತ್ತೀಚೆಗಷ್ಟೇ ಕೆಟ್ಟು ನಿಂತಿದ್ದ ಇ-ರಿಕ್ಷಾವನ್ನು ಕತ್ತೆಯ ಮೂಲಕ ಎಳೆಸಿ ಶೋರೂಮ್‌ಗೆ ತಂದು ವಿಭಿನ್ನವಾಗಿ ಪ್ರತಿಭಟಿಸಿದ್ದರು. ಆದರೂ ಕಂಪನಿಯಿಂದ ಸೂಕ್ತ ಸ್ಪಂದನೆ ಸಿಗದಿದ್ದಾಗ, ಸೋಲಂಕಿ ನೇರವಾಗಿ ಶೋರೂಮ್ ಎದುರೇ ತಮ್ಮ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ.
ಕುಟುಂಬಸ್ಥರ ಕಣ್ಣೀರು ಮತ್ತು ಆಕ್ರೋಶ ಮೋಹನ್ ಸೋಲಂಕಿ ವಾಹನಕ್ಕೆ ಬೆಂಕಿ ಹಚ್ಚುತ್ತಿದ್ದಾಗ ಅವರ ಪತ್ನಿ ಶೋರೂಮ್ ಮುಂದೆ ಅಸಹಾಯಕತೆಯಿಂದ ಕಣ್ಣೀರಿಡುತ್ತಿರುವುದು ಮತ್ತು ಸೋಲಂಕಿ ಅವರ ಸಹೋದರ ಈ ಇಡೀ ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಬೆಂಕಿ ಕ್ಷಣಾರ್ಧದಲ್ಲಿ ಧಗಧಗನೆ ಉರಿಯತೊಡಗಿದ್ದರಿಂದ ಆ ಭಾಗದಲ್ಲಿದ್ದ ಜನರು ಭಯದಿಂದ ಓಡಲಾರಂಭಿಸಿದರು. ಸದ್ಯ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.
ಶೋರೂಮ್ ಮಾಲೀಕರ ಸ್ಪಷ್ಟನೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಶೋರೂಮ್ ಮಾಲೀಕ ಹರೀಶ್ ಭಂಡಾರಿ, “ನಾವು ಇ-ರಿಕ್ಷಾವನ್ನು ಸಂಪೂರ್ಣವಾಗಿ ತಪಾಸಣೆ ಮಾಡಿದ್ದು, ಅದು ಸುಸ್ಥಿತಿಯಲ್ಲಿದೆ. ಆದರೆ ಸೋಲಂಕಿ ಅವರು ಯಾವುದೇ ತಾಂತ್ರಿಕ ಕಾರಣಗಳಿಲ್ಲದೆ ಹೊಸ ಗಾಡಿಯನ್ನೇ ಬದಲಿಸಿಕೊಡುವಂತೆ ನಮ್ಮ ಮೇಲೆ ಒತ್ತಡ ಹೇರುತ್ತಿದ್ದರು” ಎಂದು ಆರೋಪಿಸಿದ್ದಾರೆ. ಸದ್ಯ ಪೊಲೀಸರು ವೈರಲ್ ವಿಡಿಯೋ ಮತ್ತು ಘಟನೆಯ ಸುತ್ತಮುತ್ತಲಿನ ಸಂದರ್ಭಗಳನ್ನು ಆಧರಿಸಿ ತನಿಖೆ ಕೈಗೊಂಡಿದ್ದಾರೆ.
ಕಂಪನಿಗಳ ಗ್ರಾಹಕ ಸೇವಾ ಗುಣಮಟ್ಟದ ಬಗ್ಗೆ ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಕೆಲವರು ಸೋಲಂಕಿ ಅವರ ಕ್ರಮವನ್ನು ಬೆಂಬಲಿಸಿದರೆ, ಇನ್ನು ಕೆಲವರು ಇದು ಅಪಾಯಕಾರಿ ನಡೆ ಎಂದು ಟೀಕಿಸಿದ್ದಾರೆ.
ಶೋರೂಮ್ ಮುಂದೆ ಧಗಧಗನೆ ಉರಿದ ಇ-ರಿಕ್ಷಾ! ಸರ್ವಿಸ್ ನೀಡದ ಕಂಪನಿಗೆ ತನ್ನದೇ ಗಾಡಿ ಸುಟ್ಟು ಪಾಠ ಕಲಿಸಿದ ಮಾಲೀಕ
WhatsApp Group
Join Now