ಪೆಹಲ್ಗಾಮ್ ದಾಳಿಯಿಂದಾಗಿ ಈ ದೇಶದ 26 ಜನ ಅಮಾಯಕರು ಪ್ರಾಣತೆತ್ತರು. ಆಗ ಪಾಕಿಸ್ತಾನವನ್ನು ಶತ್ರು ರಾಷ್ಟ್ರವೆಂದು ಯಾಕೆ ಘೋಷಿಸಲಿಲ್ಲ. ಭಾರತದ ಗಡಿಯೊಳಗೆ ಭಯೋತ್ಪಾದಕರನ್ನು ಬಿಟ್ಟವರ್ಯಾರು? ಅವರು ಹೇಗೆ ಬಂದರು ಎಂದು ವಿಧಾನಪರಿಷತ್ ಹಿರಿಯ ಸದಸ್ಯ ಬಿ.ಕೆ.ಹರಿಪ್ರಸಾದ್ ಬಿಜೆಪಿಗೆ ಪ್ರಶ್ನೆ ಹಾಕಿದರು.
ಬುಧವಾರ ವಿಧಾನ ಪರಿಷತ್ ಕಲಾಪದಲ್ಲಿ ಪಾಕಿಸ್ತಾನ ಶತ್ರು ರಾಷ್ಟ್ರವೋ, ಇಲ್ಲ ಮಿತ್ರ ರಾಷ್ಟ್ರವೋ ಎಂಬುದರ ಬಗ್ಗೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಕೆಲವು ಭಾರಿ ಮಾತಿನ ಚಕಮಕಿಗೆ ಕಾರಣವಾಯಿತು.
ಈ ವೇಳೆ ಬಿಜೆಪಿ ಸದಸ್ಯ ನವೀನ್ ಮಾತನಾಡಿ, ಕೆಲವರಿಗೆ ಪಾಕಿಸ್ತಾನದ ಮೇಲೆ ಅತಿಯಾದ ಪ್ರೇಮವಿದೆ. ಕೆಲವರು ಯಾವಾಗಲೂ ಪಾಕಿಸ್ತಾನವನ್ನು ಜಪಿಸುತ್ತಾರೆ. ಪಾಕಿಸ್ತಾನ ನಮಗೆ ಶತ್ರು ರಾಷ್ಟ್ರವಲ್ಲ. ಅದು ನಮ್ಮ ನೆರೆಯ ರಾಷ್ಟ್ರ ಎಂದು ಕಾಂಗ್ರೆಸ್‍ನ ಓರ್ವ ಹಿರಿಯ ಸದಸ್ಯರೇ ಹೇಳಿದ್ದಾರೆ. ಹಾಗಾಗಿ ಅವರಿಗೆ ಯಾವಾಗಲೂ ಪಾಕಿಸ್ತಾನ ಎಂದರೆ ಬಲು ಪ್ರೀತಿ ಎಂದು ವ್ಯಂಗ್ಯವಾಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿ.ಕೆ.ಹರಿಪ್ರಸಾದ್, ಕೇಂದ್ರದಲ್ಲಿ ನಿಮ್ಮದೇ(ಬಿಜೆಪಿ) ಸರಕಾರ ಅಧಿಕಾರದಲ್ಲಿದೆ. ಪಾಕಿಸ್ತಾನವನ್ನು ಶತ್ರು ರಾಷ್ಟ್ರ ಎಂದು ಘೋಷಿಸಿಬಿಡಿ. ಶತ್ರು ರಾಷ್ಟ್ರ ಎಂದರೆ ಆ ದೇಶದ ಜೊತೆ ಯಾವುದೇ ರೀತಿಯ ವ್ಯಾಪಾರ-ವಹಿವಾಟು ನಡೆಸುವಂತಿಲ್ಲ. ಪಾಕಿಸ್ತಾನಕ್ಕೆ ಗೋ ಮಾಂಸದ ರಫ್ತು ಮಾಡುತ್ತಿರುವವರು ಯಾರು?, ಅಲ್ಲಿಂದ ಈರುಳ್ಳಿಯನ್ನು ಆಮದು ಮಾಡಿಕೊಳ್ಳುತ್ತಿರುವವರ್ಯಾರು? ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಇದೆ. ಪಾಕಿಸ್ತಾನವನ್ನು ನಾಳೆ ಶತ್ರು ರಾಷ್ಟ್ರ ಎಂದು ಘೋಷಿಸಲಿ. ಅದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ ಎಂದು ಸವಾಲು ಹಾಕಿದರು.
ಈ ವೇಳೆ ಕಾಂಗ್ರೆಸ್ ಸದಸ್ಯ ಕೆ.ಶಿವಕುಮಾರ್ ಮಾತನಾಡಿ, ಪಾಕಿಸ್ತಾನದ ಬಗ್ಗೆ ನಮಗೆ ಯಾವುದೇ ಪ್ರೀತಿಯೂ ಇಲ್ಲ. ಪ್ರೇಮವೂ ಇಲ್ಲ. ಅಲ್ಲಿನ ಪ್ರಧಾನ ಮಂತ್ರಿ ನವಾಜ್ ಷರೀಫ್‍ರ ಮೊಮ್ಮಗನ ಹುಟ್ಟುಹಬ್ಬಕ್ಕೆ ಹೋಗಿ ಬಿರಿಯಾನಿ ತಿಂದು ಬಂದವರು ನಿಮ್ಮ ಮೋದಿಯವರಲ್ಲವೇ? ಎಂದು ಬಿಜೆಪಿಗೆ ತಿರುಗೇಟು ನೀಡಿದರು.
ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಇನ್ನು ಬಿಜೆಪಿ ಸದಸ್ಯ ಕಿಶೋರ್ ಶೆಟ್ಟಿ ಮಾತನಾಡುವ ವೇಳೆ ಪಾಕಿಸ್ತಾನದ ವಿರುದ್ಧ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಯುದ್ಧವನ್ನೇ ಸಾರಿದರು. ಕಾರ್ಗಿಲ್ ವಶಪಡಿಸಿಕೊಂಡು ಭಾರತದ ತಾಕತ್ತು ಏನೆಂಬುದು ತೋರಿಸಿಕೊಟ್ಟಿದ್ದಾರೆ. ಪುಲ್ವಾಮದಲ್ಲಿ ಸೈನಿಕರ ಮೇಲೆ ದಾಳಿ ನಡೆಸಿದಾಗಲೂ ಆ ರಾಷ್ಟ್ರದ ವಿರುದ್ಧ ವಾಯು ದಾಳಿ ನಡೆಸಲಾಯಿತು ಎಂದಾಗ ಕಾಂಗ್ರೆಸ್ ಸದಸ್ಯರು ಗದ್ದಲ ಎಬ್ಬಿಸಿದರು.
ಪುಲ್ವಾಮದಲ್ಲಿ ಸೈನಿಕರ ಮೇಲೆ ದಾಳಿ ನಡೆದಾಗ ಯಾವ ಸರಕಾರವಿತ್ತು? ನಿಮ್ಮ ಮೋದಿ ಸರಕಾರ ಅಲ್ಲವೇ ಎಂದು ಪ್ರತಿಪಕ್ಷವನ್ನು ಆಡಳಿತ ಪಕ್ಷದ ಸದಸ್ಯರು ಕಿಚಾಯಿಸಿದರು.
ಕ್ರಿಕೆಟ್ ಆಡಲು ಯಾರು ಬಿಟ್ಟಿದ್ದು? ಭಾರತದ ಮೇಲೆ ಪದೇ ಪದೇ ದಾಳಿ ನಡೆಸುತ್ತಿರುವ ಪಾಕಿಸ್ತಾನದವರ ಜೊತೆ ಕ್ರಿಕೆಟ್ ಆಡುತ್ತಾರಲ್ಲ. ಇವರಿಗೆ ನಾಚಿಕೆ, ಮಾನ ಮರ್ಯಾದೆ ಇದೆಯಾ? ದುಬೈನಲ್ಲಿ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡಲು ಯಾರು ಬಿಟ್ಟಿದ್ದು? ಬಿಸಿಸಿಐನಲ್ಲಿ ಸಾವಿರಾರು ಕೋಟಿ ರೂ. ಹಣವಿದೆ. ಆದರೂ, ಹಣದ ಆಸೆಗಾಗಿ ಕ್ರಿಕೆಟ್ ಆಡಿ ಇಡೀ ರಾಷ್ಟ್ರದ ಮಾನವನ್ನು ಹರಾಜು ಹಾಕಿದರು ಎಂದು ಬಿ.ಕೆ.ಹರಿಪ್ರಸಾದ್ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಂಘಪರಿವಾರದವರ ಹೆಸರು ‘ಇಂಡಿಯಾ ಗೇಟ್’ನಲ್ಲಿದೆಯೇ? ಬಿಜೆಪಿಯವರು ದಿಲ್ಲಿಯಲ್ಲಿರುವ ಇಂಡಿಯಾ ಗೇಟ್ ನೋಡಿಕೊಂಡು ಬನ್ನಿ. ಅಲ್ಲಿ 97 ಸಾವಿರ ಜನರ ಹೆಸರುಗಳಿವೆ. ಅದರಲ್ಲಿ 37 ಸಾವಿರ ಮುಸಲ್ಮಾನರೇ ಇದ್ದಾರೆ. 18 ಸಾವಿರ ಜನರು ಸಿಖ್ಖರು ಇದ್ದಾರೆ. ಜೊತೆಗೆ ಕ್ರೈಸ್ತರು ಇದ್ದಾರೆ. ತಾವು ದೇಶಭಕ್ತರು ಎಂದು ಹೇಳಿಕೊಳ್ಳುವ, ಸರ್ಟಿಫಿಕೇಟ್ ಕೊಡುವ ಯಾರದಾದರೂ ಒಂದೇ ಒಂದು ಸಂಘಪರಿವಾರದವರ ಹೆಸರು ಇಂಡಿಯಾ ಗೇಟ್‍ನಲ್ಲಿದೆಯೇ? ನೋಡಿಕೊಂಡು ಬನ್ನಿ ಎಂದು ಬಿ.ಕೆ.ಹರಿಪ್ರಸಾದ್ ಪ್ರತಿಪಕ್ಷಕ್ಕೆ ಸವಾಲು ಹಾಕಿದರು.
ಪೆಹಲ್ಗಾಮ್ ದಾಳಿಯಾದಾಗ ಪಾಕಿಸ್ತಾನವನ್ನು ಶತ್ರು ರಾಷ್ಟ್ರವೆಂದು ಯಾಕೆ ಘೋಷಿಸಲಿಲ್ಲ: ಬಿಜೆಪಿಗೆ ಬಿ.ಕೆ.ಹರಿಪ್ರಸಾದ್ ಪ್ರಶ್ನೆ
WhatsApp Group
Join Now