ಬೆಂಗಳೂರು : ನಗರದಲ್ಲಿ ಹಳೇ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಹೆಚ್ಚು ಕಾಲ ರಸ್ತೆಗಳಲ್ಲಿ ನಿಲ್ಲಿಸಿರುವ ಹಳೇ ವಾಹನಗಳನ್ನು ಟೋಯಿಂಗ್ ಮಾಡಿ ನಿರ್ದಿಷ್ಟ ಸ್ಥಳಗಳಿಗೆ ಕೊಂಡೊಯ್ದು ಡಂಪ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಜಿಬಿಎ ವ್ಯಾಪ್ತಿಯ ನಗರ ಪಾಲಿಕೆಗಳ 2026-27ನೇ ಸಾಲಿನ ಆಯವ್ಯಯ ಸಿದ್ಧತೆ ಕುರಿತ ಪೂರ್ವಭಾವಿ ಸಭೆಯ ಬಳಿಕ ಮಾತನಾಡಿದ ಅವರು, ಹಳೇ ವಾಹನಗಳನ್ನು ವಶಪಡಿಸಿಕೊಳ್ಳಲು ಬೆಳ್ಳಳ್ಳಿ, ಮಿಟಗಾನಹಳ್ಳಿ, ಸೊಂಡೆಕೊಪ್ಪ ಹಾಗೂ ಗಿಡ್ಡೇನಹಳ್ಳಿ ಪ್ರದೇಶಗಳಲ್ಲಿ ಜಾಗಗಳನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.
ನಗರದಲ್ಲಿ ಟ್ರಾಫಿಕ್ ನಿಯಂತ್ರಣಕ್ಕಾಗಿ ಇನ್ಮುಂದೆ ಟೋಯಿಂಗ್ ಕಾರ್ಯಾಚರಣೆ ಆರಂಭವಾಗಲಿದೆ. ನಾನ್-ಪಾರ್ಕಿಂಗ್ ಸ್ಥಳಗಳಲ್ಲಿ ವಾಹನ ನಿಲ್ಲಿಸಿದರೆ ತಕ್ಷಣವೇ ಟೋಯಿಂಗ್ ಮಾಡಲಾಗುವುದು. ಪ್ರತಿಯೊಂದು ಕಾರ್ಪೊರೇಷನ್‌ಗೆ ಎರಡೆರಡು ಟೋಯಿಂಗ್ ವಾಹನಗಳನ್ನು ನೀಡಲಾಗಿದೆ ಎಂದು ಹೇಳಿದರು.
ವ್ಯಾಪಾರ ಚಟುವಟಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಿಗದಿತ ಸ್ಥಳದಲ್ಲೇ ವ್ಯಾಪಾರ ನಡೆಸಬೇಕು. ನೋಂದಾಯಿತ ವ್ಯಾಪಾರಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ತಿಳಿಸಿದರು. ಅನಧಿಕೃತವಾಗಿ ಫ್ಲೆಕ್ಸ್ ಹಾಕಿದರೆ 50,000 ರೂ.ರಿಂದ 1 ಲಕ್ಷ ರೂ.ದವರೆಗೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದರು. ಈ ಬಗ್ಗೆ ಪೊಲೀಸ್ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಬೀದಿ ಬದಿ ವ್ಯಾಪಾರವನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಗುರುತಿನ ಚೀಟಿ ಹೊಂದಿದವರಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ಇರುತ್ತದೆ. ತಳ್ಳುಗಾಡಿ ವ್ಯಾಪಾರಿಗಳಿಗೆ ವ್ಯವಸ್ಥೆ ಕಲ್ಪಿಸಲು ಟೆಂಡರ್ ಕರೆಯಲಾಗಿದೆ ಎಂದು ಹೇಳಿದರು. ಫುಟ್‌ಪಾತ್ ಪಾಲಿಸಿ ರೂಪಿಸಿ, ನಿಗದಿತ ಸ್ಥಳಗಳಲ್ಲಿ ಮಾತ್ರ ವ್ಯಾಪಾರ ಮಾಡಲು ಅವಕಾಶ ನೀಡಲಾಗುವುದು ಎಂದರು.
ಪಾರ್ಕ್‌ಗಳಲ್ಲಿ ಅನಧಿಕೃತ ಚಟುವಟಿಕೆಗಳ ಆರೋಪ ಹಿನ್ನೆಲೆ, ಪಾರ್ಕ್‌ಗಳ ಕಾರ್ಯಾವಧಿ ನಿಗದಿ ಮಾಡುವ ಬಗ್ಗೆ ಸ್ಥಳೀಯ ಶಾಸಕರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಜಿಬಿಎ ಬಜೆಟ್ ಕುರಿತು ಮಾತನಾಡಿದ ಅವರು, ವಾರ್ಡ್‌ವಾರು ಬಜೆಟ್ ನೀಡುವಂತೆ ಶಾಸಕರು ಒತ್ತಾಯಿಸಿದ್ದಾರೆ. ಪ್ರತಿ ವಾರ್ಡ್‌ಗೆ 5 ರಿಂದ 10 ಕೋಟಿ ರೂ. ಅನುದಾನ ಬೇಡಿಕೆಯ ಬಗ್ಗೆ ಚರ್ಚೆ ನಡೆದಿದ್ದು, ಸಾಧ್ಯವಾದ ಮಟ್ಟಿಗೆ ನೆರವು ನೀಡಲಾಗುವುದು ಎಂದು ಹೇಳಿದರು.
ಹಳೇ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವವರ ಗಮನಕ್ಕೆ.. ಡಿಸಿಎಂ ಡಿ.ಕೆ ಶಿವಕುಮಾರ್ ಖಡಕ್ ವಾರ್ನಿಂಗ್!
WhatsApp Group
Join Now