ಚಳಿಗಾಲದ ಆರಂಭದೊಂದಿಗೆ ಅನೇಕ ಪುರುಷರಲ್ಲಿ ರಾತ್ರಿ ವೇಳೆ ಪದೇ ಪದೇ ಮೂತ್ರವಿಸರ್ಜನೆ ಮಾಡುವ ಅಭ್ಯಾಸ ಹೆಚ್ಚಾಗುತ್ತದೆ. ಇದನ್ನು ಸಾಮಾನ್ಯ ‘ಚಳಿಯ ಪ್ರಭಾವ’ ಎಂದು ಹೆಚ್ಚಿನವರು ನಿರ್ಲಕ್ಷಿಸುತ್ತಾರೆ. ಆದರೆ, ವೈದ್ಯಕೀಯ ತಜ್ಞರ ಪ್ರಕಾರ ಇದು ಕೇವಲ ಹವಾಮಾನದ ಬದಲಾವಣೆಯಲ್ಲ, ಬದಲಾಗಿ ನಿಮ್ಮ ಕಿಡ್ನಿ ಅಥವಾ ಪ್ರೊಸ್ಟೇಟ್ ಸಮಸ್ಯೆಯ ಎಚ್ಚರಿಕೆಯ ಗಂಟೆಯೂ ಆಗಿರಬಹುದು.
ಚಳಿಗಾಲದಲ್ಲಿ ಮೂತ್ರವಿಸರ್ಜನೆ ಹೆಚ್ಚಾಗುವುದು ಏಕೆ? ವಾಸ್ತವವಾಗಿ, ಚಳಿಗಾಲದಲ್ಲಿ ವಾತಾವರಣದ ಉಷ್ಣಾಂಶ ಕಡಿಮೆಯಾದಾಗ ನಮ್ಮ ದೇಹದ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ಇದರಿಂದ ಪ್ರಮುಖ ಅಂಗಾಂಗಗಳಿಗೆ ರಕ್ತದ ಹರಿವು ಹೆಚ್ಚಾಗುತ್ತದೆ. ಈ ರಕ್ತವನ್ನು ಶುದ್ಧೀಕರಿಸುವಾಗ ಕಿಡ್ನಿಗಳು ಹೆಚ್ಚಿನ ಪ್ರಮಾಣದ ದ್ರವವನ್ನು ಹೊರಹಾಕಬೇಕಾಗುತ್ತದೆ. ಅಲ್ಲದೆ, ಬೇಸಿಗೆಯಂತೆ ಚಳಿಗಾಲದಲ್ಲಿ ಬೆವರುವಿಕೆ ಕಡಿಮೆಯಿರುವುದರಿಂದ ದೇಹದ ದ್ರವವು ಮೂತ್ರದ ರೂಪದಲ್ಲೇ ಹೊರಬರುತ್ತದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ‘ಕೋಲ್ಡ್ ಡೈಯೂರಿಸಿಸ್’ ಎಂದು ಕರೆಯಲಾಗುತ್ತದೆ.
ಕಿಡ್ನಿ ಸಮಸ್ಯೆಯ ಮುನ್ಸೂಚನೆ ತಿಳಿಯುವುದು ಹೇಗೆ.?
ರಾತ್ರಿ ವೇಳೆ ಪದೇ ಪದೇ ಮೂತ್ರವಿಸರ್ಜನೆಯಾಗುವುದನ್ನು ‘ನೋಕ್ಟೂರಿಯಾ’ ಎನ್ನಲಾಗುತ್ತದೆ. ಚಳಿಗಾಲದ ಬದಲಾವಣೆಗಳ ಜೊತೆಗೆ ಈ ಕೆಳಗಿನ ಲಕ್ಷಣಗಳಿದ್ದರೆ ತಕ್ಷಣ ಎಚ್ಚೆತ್ತುಕೊಳ್ಳಬೇಕು :-
• ಮೂತ್ರ ವಿಸರ್ಜನೆಯ ವೇಳೆ ಉರಿ ಅಥವಾ ನೋವು ಕಾಣಿಸಿಕೊಳ್ಳುವುದು.
• ಮೂತ್ರದಲ್ಲಿ ನೊರೆ ಬರುವುದು. (ಇದು ಪ್ರೊಟೀನ್ ಸೋರಿಕೆಯ ಲಕ್ಷಣವಾಗಿರಬಹುದು).
• ಮುಖ ಅಥವಾ ಪಾದಗಳಲ್ಲಿ ಅತಿಯಾದ ಊತ ಕಾಣಿಸಿಕೊಳ್ಳುವುದು.
• ಮೂತ್ರದ ಹರಿವು ತೀರಾ ನಿಧಾನವಾಗುವುದು.
ರಕ್ತದೊತ್ತಡ ಮತ್ತು ಕಿಡ್ನಿ ಮೇಲಿನ ಒತ್ತಡ :-
ಚಳಿಗಾಲದಲ್ಲಿ ದೈಹಿಕ ಚಟುವಟಿಕೆ ಕಡಿಮೆಯಾಗುವುದರಿಂದ ಮತ್ತು ರಕ್ತನಾಳಗಳು ಸಂಕುಚಿತಗೊಳ್ಳುವುದರಿಂದ ರಕ್ತದೊತ್ತಡ (BP) ಏರಿಕೆಯಾಗುತ್ತದೆ. ಅಧಿಕ ರಕ್ತದೊತ್ತಡವು ದೀರ್ಘಕಾಲದ ಕಿಡ್ನಿ ಕಾಯಿಲೆಗೆ (CKD) ಮುಖ್ಯ ಕಾರಣವಾಗಿದೆ. ಕಿಡ್ನಿಗಳ ಕಾರ್ಯಕ್ಷಮತೆ ಕಡಿಮೆಯಾದಾಗ ಅವು ರಕ್ತವನ್ನು ಸರಿಯಾಗಿ ಸಾಂದ್ರೀಕರಿಸಲು ವಿಫಲವಾಗಿ ಮೂತ್ರದ ಪ್ರಮಾಣ ಹೆಚ್ಚಾಗುತ್ತದೆ. ಇದು ವಿಶೇಷವಾಗಿ 35 ವರ್ಷ ಮೇಲ್ಪಟ್ಟ ಪುರುಷರಲ್ಲಿ ಹೆಚ್ಚು ಕಂಡುಬರುತ್ತದೆ.
ಪರಿಹಾರ ಮತ್ತು ಮುನ್ನೆಚ್ಚರಿಕೆ :-
ಒಂದು ವೇಳೆ ಚಳಿಗಾಲ ಮುಗಿದ ನಂತರವೂ ಈ ಸಮಸ್ಯೆ ಮುಂದುವರಿದರೆ ಅಥವಾ ನಿದ್ದೆಗೆ ತೀವ್ರ ಅಡ್ಡಿಯುಂಟಾದರೆ ತಕ್ಷಣ ಕ್ರಿಯೇಟಿನೈನ್ ಪರೀಕ್ಷೆ, ಮೂತ್ರ ಪರೀಕ್ಷೆ ಮತ್ತು ರಕ್ತದೊತ್ತಡ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಮಧುಮೇಹ, ಅಧಿಕ ರಕ್ತದೊತ್ತಡ ಅಥವಾ ಹೃದಯ ಸಂಬಂಧಿ ಕಾಯಿಲೆ ಇರುವವರು ಚಳಿಗಾಲದಲ್ಲಿ ಕಿಡ್ನಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.
ಚಳಿಗಾಲದಲ್ಲಿ ರಾತ್ರಿ ವೇಳೆ ಪದೇ ಪದೇ ಮೂತ್ರವಿಸರ್ಜನೆ ಆಗುತ್ತಿದೆಯೇ? ಪುರುಷರು ಇದನ್ನು ಸಾಮಾನ್ಯ ಎಂದು ಅಲಕ್ಷಿಸಬೇಡಿ!
WhatsApp Group
Join Now