ಆಂಧ್ರಪ್ರದೇಶ ಬಸ್‌ ದುರಂತ : ಮಗನನ್ನು ಕಿಟಕಿಯಿಂದ ಹೊರದೂಡಿ ಸಜೀವ ದಹನವಾದ ತಾಯಿ.!

Spread the love

ಆಂಧ್ರಪ್ರದೇಶದ ಮಾರ್ಕಾಪುರಂ ಜಿಲ್ಲೆಯಲ್ಲಿ ಖಾಸಗಿ ಬಸ್ ಮತ್ತು ಟಿಪ್ಪರ್ ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ 13 ಮಂದಿ ಸಜೀವ ದಹನವಾಗಿದ್ದಾರೆ. ಈ ದುರಂತದಲ್ಲಿ, ತಾಯಿಯೊಬ್ಬರು ತನ್ನ ಮಗನನ್ನು ಕಿಟಕಿಯಿಂದ ಹೊರಗೆ ತಳ್ಳಿ ಉಳಿಸಿ, ತಾನು ಬೆಂಕಿಗೆ ಆಹುತಿಯಾದ ಹೃದಯವಿದ್ರಾವಕ ಘಟನೆ ನಡೆದಿದೆ.

ಚಲಿಸುತ್ತಿದ್ದ ಬಸ್ಸಿನಲ್ಲಿ ಬೆಂಕಿ ಆವರಿಸುತ್ತಿದ್ದಂತೆ ತನ್ನ ಮಗನನ್ನು ಹೇಗಾದರೂ ಮಾಡಿ ಉಳಿಸಲೇಬೇಕೆಂಬ ಹಂಬಲದಿಂದ ಕಿಟಕಿಯಿಂದ ಹೊರಕ್ಕೆ ತಳ್ಳಿದ ತಾಯಿಯೊಬ್ಬರು, ತಾನು ಮಾತ್ರ ಬೆಂಕಿಗಾಹುತಿಯಾದ ಹೃದಯವಿದ್ರಾವಕ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಆಂಧ್ರಪ್ರದೇಶದ ಮಾರ್ಕಾಪುರಂ ಜಿಲ್ಲೆಯಲ್ಲಿ ನಡೆದ ಈ ಭೀಕರ ರಸ್ತೆ ಅಪಘಾತದಲ್ಲಿ ಒಟ್ಟು 13 ಮಂದಿ ಬೆಂಕಿಗೆ ಆಹುತಿಯಾಗಿದ್ದಾರೆ. ತೆಲಂಗಾಣದ ನಿರ್ಮಲ್‌ನಿಂದ ನೆಲ್ಲೂರು ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ ಮತ್ತು ಎದುರಿನಿಂದ ಬಂದ ಟಿಪ್ಪರ್ ಲಾರಿ ಮುಖಾಮುಖಿ ಡಿಕ್ಕಿಯಾಗಿವೆ. ಗುರುವಾರ ಮುಂಜಾನೆ ಸುಮಾರು 6 ಗಂಟೆಯ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಡಿಕ್ಕಿಯಾದ ಬೆನ್ನಲ್ಲೇ ಬಸ್ಸಿನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ.

ಈ ಬಸ್ಸಿನಲ್ಲಿ 45 ವರ್ಷದ ಉಪ್ಪು ರಮಾದೇವಿ ಮತ್ತು ಅವರ ಮಗ ಮನೋಹರ್ ತಮ್ಮ ಊರಿಗೆ ಪ್ರಯಾಣಿಸುತ್ತಿದ್ದರು. ಬಸ್ಸಿನ ಪರದೆಗಳಿಗೆ ಬೆಂಕಿ ಹೊತ್ತಿಕೊಂಡಿದ್ದನ್ನು ಕಂಡು ಗಾಬರಿಗೊಂಡ ರಮಾದೇವಿ, ಸಮಯ ಪ್ರಜ್ಞೆ ಮೆರೆದು ತಕ್ಷಣವೇ ತನ್ನ ಮಗ ಮನೋಹರ್‌ನನ್ನು ಬಸ್ಸಿನ ಕಿಟಕಿಯಿಂದ ಹೊರಕ್ಕೆ ತಳ್ಳಿದ್ದಾರೆ. ಇದರಿಂದಾಗಿ ಮನೋಹರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ದುರದೃಷ್ಟವಶಾತ್ ತಾಯಿ ರಮಾದೇವಿ ಬಸ್ಸಿನ ಒಳಗೆ ಸಿಲುಕಿಕೊಂಡಿದ್ದರಿಂದ ಬೆಂಕಿಯಲ್ಲಿ ಬೆಂದು ಮೃತಪಟ್ಟಿದ್ದಾರೆ.

ಬಸ್ಸಿನ ಒಳಗೆ ಸಿಲುಕಿಕೊಂಡಿದ್ದ 13 ಪ್ರಯಾಣಿಕರು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಘೋರ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ತಲಾ 50,000 ರೂಪಾಯಿಗಳ ಆರ್ಥಿಕ ನೆರವನ್ನು ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಘೋಷಿಸಲಾಗಿದೆ.

WhatsApp Group Join Now

Spread the love

Leave a Reply