ಸಾಮೂಹಿಕ ಅತ್ಯಾಚಾರ ಪ್ರಕರಣ: ಏಳೂ ಆರೋಪಿಗಳು ಯಾದಗಿರಿಗೆ ಗಡಿಪಾರು

Spread the love

ಜಿಲ್ಲೆಯ ಹಾನಗಲ್ ಸಮೀಪದ ನಾಲ್ಕರ ಕ್ರಾಸ್‍ನಲ್ಲಿ 2024ರ ಜ. 8ರಂದು ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ಏಳು ಪ್ರಮುಖ ಆರೋಪಿಗಳನ್ನು ಹಾವೇರಿ ಜಿಲ್ಲೆಯಿಂದ ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ..

ಜಿಲ್ಲಾ ಎಸ್‌ಪಿ ಅವರು ಸಲ್ಲಿಸಿದ್ದ ಪ್ರಸ್ತಾವದ ವಿಚಾರಣೆ ನಡೆಸಿದ್ದ ಸವಣೂರು ಉಪವಿಭಾಗಾಧಿಕಾರಿ ಶುಭಂ ಶುಕ್ಲಾ, ಪ್ರಕರಣದ ಏಳೂ ಆರೋಪಿಗಳನ್ನು ಗಡಿಪಾರು ಮಾಡಿ ಡಿ.
18ರಂದು ಆದೇಶ ಹೊರಡಿಸಿದ್ದಾರೆ.

ಅಕ್ಕಿಆಲೂರಿನ ಸಮೀವುಲ್ಲಾ ಲಾಲನವರ, ಅಫ್ತಾಬ್ ಚಂದನಕಟ್ಟೆ, ಮದಾರಸಾಬ್ ಮಂಡಕ್ಕಿ, ಮೊಹಮ್ಮದ್ ಸಾದಿಕ್ ಅಗಸಿಮನಿ, ಶೋಯೆಬ್ ಮುಲ್ಲಾ, ತೌಸಿಫ್ ಚೋಟಿ ಹಾಗೂ ರಿಯಾಜ್ ಸಾವಿಕೇರಿ ಅವರನ್ನು ಗಡಿಪಾರು ಮಾಡಲಾಗಿದೆ.

‘ಸಾಮೂಹಿಕ ಅತ್ಯಾಚಾರ ಸೇರಿದಂತೆ ಹಲವು ಅಪರಾಧ ಕೃತ್ಯಗಳಲ್ಲಿ ಪದೇ ಪದೇ ಭಾಗಿಯಾಗುತ್ತಿದ್ದ ಏಳು ಆರೋಪಿಗಳನ್ನು ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಪಡೆದು ಹೊರಗಿದ್ದ ಆರೋಪಿಗಳನ್ನು ವಶಕ್ಕೆ ಪಡೆದು, ಯಾದಗಿರಿ ಜಿಲ್ಲೆಯ ಹುಣಸಗಿ ಠಾಣೆ ವ್ಯಾಪ್ತಿಯಲ್ಲಿ ಬಿಟ್ಟು ಬರಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಯುವತಿಯರನ್ನು ಚುಡಾಯಿಸುತ್ತಿದ್ದ ಆರೋಪಿಗಳು: ‘ಏಳು ಆರೋಪಿಗಳು, ಪದೇ ಪದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದರು. ಐದಾರು ವರ್ಷಗಳಿಂದ ಯುವತಿಯರನ್ನು ಚುಡಾಯಿಸುವುದು, ಯುವತಿಯರನ್ನು ಅಪಹರಣ ಮಾಡುವುದು, ಗಲಭೆಗೆ ಪ್ರಚೋದನೆ ನೀಡುವುದು, ಮಹಿಳೆಯರ ಮೇಲೆ ಅತ್ಯಾಚಾರ ಮಾಡುವುದು, ಹಲ್ಲೆ ಮಾಡುವುದು ಮಾಡುತ್ತಿದ್ದಾರೆ’ ಎಂದು ಎಸ್‌ಪಿ ಅವರು ವರದಿಯಲ್ಲಿ ಉಲ್ಲೇಖಿಸಿದ್ದರು.

‘ಆರೋಪಿಗಳನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಿ ಎರಡು ಬಾರಿ ತಹಶೀಲ್ದಾರ್ ಎದುರು ಹಾಜರುಪಡಿಸಲಾಗಿತ್ತು. ಅಷ್ಟಾದರೂ ಅವರು, ಪ್ರಕರಣದ ಸಾಕ್ಷಿದಾರರಿಗೆ ಬೆದರಿಕೆ ಹಾಕುತ್ತಿದ್ದರು. ಎಚ್ಚರಿಕೆ ನೀಡಿದರೂ ಆರೋಪಿಗಳು, ಸುಧಾರಿಸಿಲ್ಲ. ಇವರಿಂದ ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗಬಹುದು. ಹೀಗಾಗಿ, ಏಳು ಮಂದಿಯನ್ನು ಗಡಿಪಾರು ಮಾಡಿ’ ಎಂದು ಕೋರಿದ್ದರು.

ಹಾನಗಲ್‌ ಪಿಎಸ್‌ಐಗೆ ಅಧಿಕಾರ: ‘ಅಕ್ಕಿಆಲೂರಿನ ಕಮಾಟಿ ಓಣಿಯ ಸಮೀವುಲ್ಲಾ ಸೇರಿದಂತೆ ಏಳು ಆರೋಪಿಗಳನ್ನು ಇಂದಿನಿಂದ ಒಂದು ವರ್ಷದವರೆಗೆ ಹಾವೇರಿ ಜಿಲ್ಲೆಯಿಂದ ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ. ಆರೋಪಿಯು ಯಾದಗಿರಿ ಜಿಲ್ಲೆಯ ಹುಣಸಗಿ ಠಾಣೆಗೆ ನಿತ್ಯವೂ ಭೇಟಿ ನೀಡಿ ಹಾಜರಾತಿ ನಮೂದಿಸಬೇಕು’ ಎಂದು ಉಪವಿಭಾಗಾಧಿಕಾರಿಯವರು ಆದೇಶದಲ್ಲಿ ತಿಳಿಸಿದ್ದಾರೆ.

‘ಗಡಿಪಾರು ಆದೇಶವನ್ನು ಉಲ್ಲಂಘಿಸಿದರೆ, ಆರೋಪಿ ವಿರುದ್ಧ ಸಂಬಂಧಪಟ್ಟ ಪೊಲೀಸರು ಕಾನೂನು ಕ್ರಮ ಜರುಗಿಸಬೇಕು. ನಿಗದಿತ ಅವಧಿಯಲ್ಲಿ ಆರೋಪಿಗಳು ಪುನಃ ಜಿಲ್ಲೆಗೆ ಪ್ರವೇಶಿಸಿದರೆ, ಅವರನ್ನು ಜಿಲ್ಲೆಯಿಂದ ಹೊರದೂಡಲು ಹಾನಗಲ್ ಪಿಎಸ್‌ಐ ಅವರಿಗೆ ಅಧಿಕಾರ ನೀಡಲಾಗಿದೆ’ ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ನಾಲ್ಕರ ಕ್ರಾಸ್ ಬಳಿಯ ಲಾಡ್ಜ್ ಒಂದರಲ್ಲಿ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಆರೋಪ ವ್ಯಕ್ತವಾಗಿತ್ತು. ಈ ಪ್ರಕರಣದಲ್ಲಿ ಸಮೀವುಲ್ಲಾ ಸೇರಿ ಏಳು ಪ್ರಮುಖ ಆರೋಪಿಗಳು ಹಾಗೂ ಇತರರನ್ನು ಬಂಧಿಸಲಾಗಿತ್ತು. ಜಾಮೀನು ಮೇಲೆ ಹೊರಬಂದಿದ್ದ ಆರೋಪಿಗಳು ತೆರೆದ ಜೀಪಿನಲ್ಲಿ ಕೇಕೆ ಹಾಕುತ್ತ ಮೆರವಣಿಗೆ ಮಾಡಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ ಪ್ರತ್ಯೇಕ ಪ್ರಕರಣ ದಾಖಲಾಗಿತ್ತು.

WhatsApp Group Join Now

Spread the love

Leave a Reply