ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತಗಾರ ಎ.ಆರ್. ರೆಹಮಾನ್ ಬಗ್ಗೆ ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರನೌತ್ ಅವರ ಹೇಳಿಕೆಗೆ ನಟ ಮತ್ತು ನಿರ್ದೇಶಕ ಪ್ರಕಾಶ್ ರಾಜ್ (Prakash Raj) ಟೀಕಿಸಿದ್ದಾರೆ.
ಕೇರಳ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದ ಪ್ರಕಾಶ್ ರಾಜ್, ಈ ದೇಶದಲ್ಲಿ ಭಿನ್ನಾಭಿಪ್ರಾಯವನ್ನು ಅಪರಾಧೀಕರಿಸಲಾಗುತ್ತಿದೆ. ಮಾತನಾಡಿದ್ದಕ್ಕಾಗಿ ಯಾರನ್ನು ಬಂಧಿಸಲಾಗುತ್ತದೆ? ಎಂದು ಇತ್ತೀಚೆಗೆ ಎ.ಆರ್. ರೆಹಮಾನ್ ಅವರಿಗೆ ಎದುರಾಧ ವಿರೋಧವನ್ನು ಉದಾಹರಿಸಿ ಅವರು ಮಾತನಾಡಿದರು.
ಬೊಗಳುವುದು ಪ್ರಾರಂಭವಾಗಿದೆ: ಪ್ರಕಾಶ್ ರಾಜ್
ಎ.ಆರ್. ರೆಹಮಾನ್ ಚಲನಚಿತ್ರೋದ್ಯಮದಲ್ಲಿ ತಮ್ಮ ಕೆಲಸದ ಅವಕಾಶಗಳ ಬಗ್ಗೆ ಮಾತನಾಡಿದ ನಂತರ “ಬೊಗಳುವುದು” ಪ್ರಾರಂಭವಾಯಿತು ಎಂದು ವರ್ಷದ ಪ್ರಕಾಶ್ ರಾಜ್ ಹೇಳಿದರು. ತಮ್ಮ ಸಿನಿಮಾದಲ್ಲಿ ಭಾಗವಹಿಸಿಲು ನಿರಾಕರಿಸಿದ್ದಕ್ಕೆ ರೆಹಮಾನ್ ವಿರುದ್ಧ ಮಾತನಾಡಿದ ಕಂಗನಾ ರನೌತ್ ಅವರನ್ನು ಪ್ರಕಾಶ್ ರಾಜ್ ಟೀಕಿಸಿದ್ದಾರೆ.
ಎ.ಆರ್. ರೆಹಮಾನ್ ಅವರೊಂದಿಗೆ ಏನಾಗುತ್ತಿದೆ.?
ಮಾ ತುಜೆ ಸಲಾಮ್, ಜೈ ಹೋ, ಎರಡು ಆಸ್ಕರ್ ಪ್ರಶಸ್ತಿಗಳು ಇವೆಲ್ಲಾ ತಂದುಕೊಟ್ಟಾಗ ನೀವು ಸಂತೋಷಪಟ್ಟಿದ್ದೀರಿ. ಅವರು ನನಗೆ ಅವಕಾಶ ದೊರೆಯುತ್ತಿಲ್ಲ ಎಂದು ಹೇಳಿದರು ಇದಕ್ಕೆ ಇಷ್ಟೆಲ್ಲಾ ವಿರೋಧಿಸುವ ಅವಶ್ಯಕತೆ ಇತ್ತೇ ಎಂದು ರಾಜ್ ಪ್ರಶ್ನಿಸಿದ್ದಾರೆ.
ಎ.ಆರ್. ರೆಹಮಾನ್ ಹೇಳಿದ್ದೇನು?
ಬಿಬಿಸಿ ಏಷ್ಯನ್‌ನ ಯೂಟ್ಯೂಬ್ ಚಾನೆಲ್ನಲ್ಲಿ ಹರುನ್ ರಷೀದ್ ಅವರಿಗೆ ರೆಹಮಾನ್ ಸಂದರ್ಶನ ನೀಡಿದ್ದಾರೆ. ರಾಮಾಯಣ ಸಿನಿಮಾಗೆ ಸಂಗೀತ ನೀಡುವಲ್ಲಿ ನಿಮ್ಮ ಧಾರ್ಮಿಕ ನಂಬಿಕೆಗಳು ಪಾತ್ರ ವಹಿಸಿವೆಯೇ ಎಂದು ರೆಹಮಾನ್ ಅವರನ್ನು ಈ ವೇಳೆ ಪ್ರಶ್ನಿಸಲಾಯಿತು.
ಇದಕ್ಕೆ ಉತ್ತರ ನೀಡಿದ ರೆಹಮಾನ್, ನಾನು ಬ್ರಾಹ್ಮಣ ಶಾಲೆಯಲ್ಲಿ ಓದಿದ್ದೇನೆ. ರಾಮಾಯಣ ಮತ್ತು ಮಹಾಭಾರತದ ಕತೆಗಳನ್ನು ಪ್ರತಿ ವರ್ಷ ಹೇಳಿಕೊಡಲಾಗುತ್ತಿತ್ತು. ಆದ್ದರಿಂದ, ನನಗೆ ಕತೆಗಳು ಚೆನ್ನಾಗಿ ತಿಳಿದಿವೆ. ಈ ಕತೆಗಳು ಮಾನವ ದಯೆ, ಉನ್ನತ ಆದರ್ಶಗಳು ಮತ್ತು ಎಲ್ಲದರ ಬಗ್ಗೆ ತಿಳಿಸುತ್ತದೆ. ಜನರು ಏನೇ ವಾದಿಸಬಹುದು ಆದರೆ, ನಾನು ಎಲ್ಲ ಒಳ್ಳೆಯ ವಿಷಯಗಳನ್ನು ಗೌರವಿಸುತ್ತೇನೆ ಮತ್ತೆ ಒಳ್ಳೆಯ ವಿಷಯಗಳನ್ನು ಕಲಿತರೂ ತಪ್ಪಿಲ್ಲ ಎಂದರು.
ನಾನು ತೊಂಭತ್ತರ ದಶಕದಲ್ಲಿ ಕೆಲಸ ಆರಂಭಿಸಿದಾಗ ಯಾವುದೇ ಧಾರ್ಮಿಕ ಪೂರ್ವಾಗ್ರಹಗಳಿರಲಿಲ್ಲ. ಆದರೆ ಕಳೆದ 8 ವರ್ಷಗಳಲ್ಲಿ ಹಿಂದಿ ಚಿತ್ರಗಳಲ್ಲಿ ನನಗೆ ತುಂಬಾ ಕಡಿಮೆ ಕೆಲಸ ಬಂದಿದೆ. ಇದಕ್ಕೆ ಕಾರಣ ನನ್ನ ಪ್ರಯತ್ನದ ಕೊರತೆಯಲ್ಲ ಮತ್ತು ನಾನು ಕೆಲಸಕ್ಕಾಗಿ ಯಾರ ಬಳಿಯೂ ಹೋಗುವುದಿಲ್ಲ. ನನಗೆ ಕಡಿಮೆ ಕೆಲಸ ಸಿಗಲು ಅಧಿಕಾರದ ಹಸ್ತಾಂತರ ಕಾರಣ ಇರಬಹುದು ಅಥವಾ ಕೋಮು ಅಂಶಗಳು ಕೂಡ ಪ್ರಭಾವ ಬೀರಿರಬಹುದು ಎನ್ನುವ ಮೂಲಕ ತಾನು ಮುಸ್ಲಿಂ ಆಗಿರುವುದರಿಂದ ತನಗೆ ಅವಕಾಶಗಳು ಕಡಿಮೆ ಎಂಬ ಅರ್ಥದಲ್ಲಿ ರೆಹಮಾನ್ ಹೇಳಿದ್ದಾರೆ.
ತಮ್ಮ ಹೇಳಿಕೆಗೆ ಸ್ಪಷ್ಟಣೆ ನೀಡಿರುವ ಎ.ಆರ್.ರೆಹಮಾನ್
ತಮ್ಮ ಹೇಳಿಕೆಗಳ ಕುರಿತು ಗದ್ದಲ ಹೆಚ್ಚುತ್ತಿರುವಂತೆಯೇ, ಭಾನುವಾರ ರೆಹಮಾನ್ ಮೌನ ಮುರಿದು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡ ವೀಡಿಯೊ ಸಂದೇಶದಲ್ಲಿ ಭಾರತದ ಮೇಲಿನ ತಮ್ಮ ಪ್ರೀತಿಯನ್ನು ಪುನರುಚ್ಚರಿಸಿದ್ದಾರೆ. ತಮ್ಮ ಹೇಳಿಕೆಗಳಿಂದ ನೋವುಂಟು ಮಾಡುವುದು ಎಂದಿಗೂ ತಮ್ಮ ಉದ್ದೇಶವಲ್ಲ ಮತ್ತು ಸಂಗೀತದ ಮೂಲಕ ದೇಶಕ್ಕೆ ಸೇವೆ ಸಲ್ಲಿಸಲು ಅವರು ಯಾವಾಗಲೂ ಶ್ರಮಿಸಿದ್ದಾರೆ ಎಂದು ಅವರು ಹೇಳಿದರು.
ಭಾರತ ನನ್ನ ಸ್ಫೂರ್ತಿ, ನನ್ನ ಗುರು ಮತ್ತು ನನ್ನ ಮನೆ. ಕೆಲವೊಮ್ಮೆ ಉದ್ದೇಶಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಬಹುದು ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ ನನ್ನ ಉದ್ದೇಶ ಯಾವಾಗಲೂ ಸಂಗೀತದ ಮೂಲಕ ಉನ್ನತಿ, ಗೌರವ ಮತ್ತು ಸೇವೆ ಮಾಡುವುದು. ನಾನು ಎಂದಿಗೂ ನೋವುಂಟು ಮಾಡಲು ಬಯಸುವುದಿಲ್ಲ ಎಂದು ಸ್ಪಷ್ಟಣೆ ನೀಡಿದ್ದಾರೆ.