ಹುತಾತ್ಮರ ಸಮಾಧಿಯ ಮೇಲೆ ಖಿ ಖಿ ಖಿ ಖಿ ಡಿಪ್ಲೊಮಸಿ ಮೋದಿ ವಿರುದ್ಧ ನಟ ಕಿಶೋರ್ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಈಚೆಗೆ ವಿವಿಧ ವಿಚಾರಗಳ ಬಗ್ಗೆ ಆರ್ಎಸ್ಎಸ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ನಟ ಕಿಶೋರ್ ಅವರು ವಾಗ್ದಾಳಿ ನಡೆಸಿದ್ದರು.
ಇದಕ್ಕೆ ಸಾರ್ವಜನಿಕ ವಲಯದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು. ಇದರ ಬೆನ್ನಲ್ಲೇ ಅವರು ಮತ್ತೊಂದು ಬರಹವನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.
ನಟ ಕಿಶೋರ್ ಅವರ ಬರಹ ಈ ರೀತಿ ಇದೆ. ಹುತಾತ್ಮರ ಸಮಾಧಿಯ ಮೇಲೆ ಮಾಡಿದ ಖಿ ಖಿ ಖಿ ಖಿ ಡಿಪ್ಲೊಮಸಿ ರಾಜಕೀಯದಿಂದ ಸಿಕ್ಕ ಲಾಭ … ಭಾರತದ ಅಖಂಡತೆಯನ್ನೇ ಕೆಣಕುವ ಹೊಸ ವರ್ಲ್ಡ್ ಆರ್ಡರ್. ಆತಂಕವಾದವನ್ನು ಮುಗಿಸಿಬಿಡುತ್ತೇವೆಂದು ನಗದು ಅಮಾನ್ಯೀಕರಣ ಮಾಡಿ ದೇಶದ ಆರ್ಥಿಕತೆಯ, ದೇಶದ ಅಸಂಖ್ಯ ಜನರ ಉದ್ದಿಮೆಗಳ ಬೆನ್ನುಮುರಿದ ಅಯೋಗ್ಯರು, ಅಮೆರಿಕಕ್ಕೆ ಉತ್ತರ ಕೊಡುತ್ತೇವೆಂದು ಹೇಳಿ ಪೆಹೆಲ್ಗಾಮ್ ನಲ್ಲಿ ಅಮಾಯಕರನ್ನು ಕೊಂದ ಆತಂಕವಾದಿಗಳ ಜೊತೆ ಸೇರಿ ನಮ್ಮ ಅನೇಕ ವೀರ ಸೈನಿಕರನ್ನೂ, ಲೆಕ್ಕ ಹೇಳದ ಜನರ ಹಣದಲ್ಲಿ ಕೊಂಡ ರಫೇಲ್ ಗಳನ್ನೂ ಹೊಡೆದುರುಳಿಸಿದ ವಂಚಕ ಚೀನಾದೊಂದಿಗೆ ಹಲ್ಲು ಕಿಸಿದು ಫೋಟೋ ಪ್ರಚಾರ ಡಿಪ್ಲೊಮಸಿ ಮಾಡಿದ್ದರಿಂದ ದೇಶಕ್ಕಾದ ಪ್ರಯೋಜನ ಇದೇನು ಎಂದು ಪ್ರಶ್ನೆ ಮಾಡಿದ್ದಾರೆ.
ಪುಲ್ವಾಮಾ ಗಲ್ವಾನ್ ಪೆಹೆಲ್ಗಾಮ್ ದೆಹಲಿ ಯಾವುದೇ ದಾಳಿಯ ಜವಾಬ್ದಾರಿ ಹೊರದೇ ಬರೀ ಅಂಬಾನಿ ಅಡಾನಿಗಳಿಗೆ ದಲ್ಲಾಳಿಯ ಕೆಲಸ ಮಾಡಿ ಇಡೀ ವಿದೇಶ ನೀತಿಯನ್ನು ಫೋಟೋ ಪ್ರಚಾರ ಡಿಪ್ಲೊಮಸಿಗಿಳಿಸಿ ಇಂದು ಇಡೀ ಪ್ರಪಂಚದಲ್ಲಿ ಮಿತ್ರ ದೇಶಗಳೇ ಇಲ್ಲದ ಮಟ್ಟಕ್ಕೆ ಬಂದು ಕೂತಿದೆಯಷ್ಟೆ. ಬಂಪರ್ ಜಿಡಿಪಿ, ನಾಲ್ಕನೇ ದೊಡ್ಡ ಎಕಾನಮಿ ಎಂಬ ಬಡಾಯಿಯ ಹಿಂದೆ ಎಂದೂ ಇಲ್ಲದ ಮಟ್ಟಿಗೆ ಬಿದ್ದಿರುವ ರೂಪಾಯಿ, ದೇಶದಲ್ಲಿನ ಬಡತನದಂತೆ ದುನಿಯಾ ಮೆ ಡಂಕಾದ ಬಡಾಯಿಯ ಹಿಂದೆ ಜಿಯೊ ಪೊಲಿಟಿಕ್ಸ್ ನಲ್ಲಿ ರಿಪೇರಿ ಮಾಡಲಾಗದ ಒಂಟಿತನದಲ್ಲಿ ನಿಂತಿದೆ ನಮ್ಮ ವಿಶ್ವಗುರು ಭಾರತ ಎಂದಿದ್ದಾರೆ.
ಅದು ಸಾಲದೆಂದು ಆತಂಕವಾದಿ ಪಾಕೀಸ್ತಾನದ ಹೆಸರಲ್ಲಿ ಓಟು ಕೇಳುವ ಜನ ಅವರೊಂದಿಗೇ ಕ್ರಿಕೆಟ್ ಅಡಿ ಇವರ ಜೇಬಿಗೆ ಹಣ ಇಳಿಸೋ ಯೋಜನೆ ಬೇರೆ. ಇದೇ ಹುತಾತ್ಮರ ರಕ್ತಕ್ಕೆ ನಾವು ಕಟ್ಟಿದ ಬೆಲೆಗೆ ಸಿಕ್ಕ ಪ್ರತಿಫಲವೇ ಎಂದೂ ಅವರು ಪ್ರಶ್ನೆ ಮಾಡಿದ್ದಾರೆ.