ತಾಯಿ ಹೇಳಿದ ‘ಬುದ್ಧಿ ಮಾತು’ ಮಗನ ಸಾವಿಗೆ ಕಾರಣವಾಯ್ತು.? ಹೊಸ ವರ್ಷದ ದಿನ ವಿಷ ಸೇವಿಸಿದ್ದ ಯುವಕ ಸಾವು.!

Spread the love

‘ಹೊಸ ವರ್ಷ ಬಂದಿದೆ, ಇನ್ಮುಂದೆಯಾದರೂ ಸರಿಯಾಗಿ ಕೆಲಸ ಮಾಡು’ ಎಂದು ತಾಯಿ ಹೇಳಿದ ಬುದ್ಧಿಮಾತನ್ನೇ ಅವಮಾನವಾಗಿ ಭಾವಿಸಿದ ಯುವಕನೊಬ್ಬ ವಿಷ ಸೇವಿಸಿ ಆತ್ಮ*ಹತ್ಯೆ ಮಾಡಿಕೊಂಡಿರುವ ಘಟನೆ ಕಿತ್ತೂರು ತಾಲೂಕಿನ ಉಗರಖೋಡ ಗ್ರಾಮದಲ್ಲಿ ನಡೆದಿದೆ. ಹೊಸ ವರ್ಷದ ಆರಂಭದ ದಿನವೇ ಬೆಳಗಾವಿ ಜಿಲ್ಲೆಯಲ್ಲಿ ದಾರುಣ ಘಟನೆಯೊಂದು ಸಂಭವಿಸಿದೆ.

ನಿನ್ನೆಯೂ ಕೂಡ ಬೆಂಗಳೂರಿನಲ್ಲಿ 17 ವರ್ಷದ ಬಾಲಕಿಯೊಬ್ಬಳು ಅಪ್ಪ-ಅಮ್ಮ ನನಗೆ ಪ್ರೀತಿ ತೋರಿಸುತ್ತಿಲ್ಲ. ಅವರಿಬ್ಬರೂ ಬೇರೆ ಬೇರೆ ಆಗಿದ್ದಾರೆ. ನಾನು ಎಸ್‌ಎಸ್‌ಎಲ್‌ಸಿ ಫೇಲ್ ಆದರೂ ನನ್ನ ಮೇಲೆ ಒಂಚೂರು ಪ್ರೀತಿ ತೋರಿಸಿ ಧೈರ್ಯ ತುಂಬುತ್ತಿಲ್ಲವೆಂದು ನೇಣಿಗೆ ಶರಣಾಗಿ ಜೀವ ಬಿಟ್ಟಿದ್ದಳು. ಇದೀಗ ತಾಯಿ ಹೊಸ ವರ್ಷದ ನಿಮಿತ್ತ ಉತ್ತಮ ಜೀವನ ರೂಪಿಸಿಕೊಳ್ಳುವುದಕ್ಕೆ ಮಗನಿಗೆ ಬುದ್ಧಿವಾದ ಹೇಳಿದ್ದಕ್ಕೆ, ವಿಷ ಸೇವಿಸಿ ಪ್ರಾಣ ಬಿಟ್ಟಿರುವ ದಾರುಣ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಘಟನೆಯ ವಿವರ

ಉಗರಖೋಡ ಗ್ರಾಮದ ನಿವಾಸಿ ಕಲ್ಮೇಶ ಕಾಜಗಾರ (24) ಮೃತಪಟ್ಟ ದುರ್ದೈವಿ. ಡಿಸೆಂಬರ್ 31ರ ರಾತ್ರಿ ಇಡೀ ಜಗತ್ತು ಹೊಸ ವರ್ಷದ ಸಂಭ್ರಮದಲ್ಲಿರುವಾಗ, ಇತ್ತ ಕಲ್ಮೇಶನ ತಾಯಿ ಮಂಜುಳಾ ಅವರು ಮಗನ ಭವಿಷ್ಯದ ಬಗ್ಗೆ ಕಾಳಜಿಯಿಂದ ಮಾತನಾಡಿದ್ದರು. ‘ಹೊಸ ವರ್ಷದಿಂದಲಾದರೂ ಚೆನ್ನಾಗಿ ಕೆಲಸ ಮಾಡಿಕೊಂಡು ಬಾಳಪ್ಪಾ’ ಎಂದು ಕಿವಿಮಾತು ಹೇಳಿದ್ದರು. ಆದರೆ, ಈ ಮಾತಿನಿಂದ ತೀವ್ರವಾಗಿ ಮನನೊಂದ ಕಲ್ಮೇಶ, ತಕ್ಷಣವೇ ಮನೆಯಿಂದ ಹೊರಬಂದಿದ್ದಾನೆ.

ಗ್ರಾಮದ ಸರ್ಕಾರಿ ಶಾಲೆಯ ಆವರಣಕ್ಕೆ ತೆರಳಿದ ಕಲ್ಮೇಶ, ಅಲ್ಲಿ ಕೀಟನಾಶಕ (ವಿಷ) ಸೇವಿಸಿದ್ದಾನೆ. ವಿಷಯ ತಿಳಿದ ತಕ್ಷಣ ಕುಟುಂಬಸ್ಥರು ಆತನನ್ನು ರಕ್ಷಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಬಿಮ್ಸ್ (BIMS) ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ದುರದೃಷ್ಟವಶಾತ್ ಚಿಕಿತ್ಸೆ ಫಲಿಸದೆ ನಿನ್ನೆ ರಾತ್ರಿ ಕಲ್ಮೇಶ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ಕುಟುಂಬದಲ್ಲಿ ಶೋಕ

ಮೃತ ಕಲ್ಮೇಶನ ತಂದೆಗೆ ಇಬ್ಬರು ಪತ್ನಿಯರಿದ್ದು, ಕಲ್ಮೇಶ ಮಂಜುಳಾ ಅವರ ಪುತ್ರನಾಗಿದ್ದಾನೆ. ಮಗನ ಏಳಿಗೆಗಾಗಿ ಹೇಳಿದ ಮಾತು ಆತನ ಪ್ರಾಣಕ್ಕೇ ಕುತ್ತು ತರುತ್ತದೆ ಎಂದು ಆ ತಾಯಿ ಕನಸಿನಲ್ಲೂ ಯೋಚಿಸಿರಲಿಲ್ಲ. ಮಗನ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ವಾರಸುದಾರರಿಗೆ ಹಸ್ತಾಂತರಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.

WhatsApp Group Join Now

Spread the love

Leave a Reply