ಗಣಿತ ಹೋಮ್‌ವರ್ಕ್‌ ಮಾಡದ 4 ವರ್ಷದ ಮಗಳು ವಂಶಿಕಾಳನ್ನು ಲಟ್ಟಣಿಗೆಯಲ್ಲಿ ಹೊಡೆದು ಸಾಯಿಸಿದ ಪಾಪಿ ಅಪ್ಪ.!

Spread the love

ಗಣಿತದ ಹೋಮ್‌ವರ್ಕ್‌ ಮಾಡುವ ವೇಳೆ 1 ರಿಂದ 50ರವರೆಗಿನ ಸಂಖ್ಯೆಗಳನ್ನು ಬರೆಯಲು ವಿಫಲವಾದ ಕಾರಣಕ್ಕೆ 4 ವರ್ಷದ ಮಗಳನ್ನು ಲಟ್ಟಣಿಗೆಯಲ್ಲಿ ಹೊಡೆದು ಸ್ವಂತ ಅಪ್ಪನೇ ಕೊಂದಿರುವ ಘಟನೆ ನಡೆದಿದೆ. 31 ವರ್ಷದ ವ್ಯಕ್ತಿ ಸಿಟ್ಟಿನ ಭರದಲ್ಲಿ 4 ವರ್ಷದ ಮಗಳಿಗೆ ಲಟ್ಟಣಿಗೆಯಲ್ಲಿ ಹೊಡೆದಿದ್ದು, ಬಳಿಕ ಸಿಟ್ಟಿನಲ್ಲಿ ಆಕೆಯನ್ನು ನೆಲಕ್ಕೆ ಬಡಿದಿದ್ದಾನೆ.

ಇದರ ಬೆನ್ನಲ್ಲಿಯೇ ಮಗು ಸಾವು ಕಂಡಿದೆ. ಬಳಿಕ ಹರಿಯಾಣದ ಫರಿದಾಬಾದ್ ನಿವಾಸಿ ಕೃಷ್ಣ ಜೈಸ್ವಾಲ್ ಈ ಕೊಲೆಯನ್ನು ಆಕಸ್ಮಿಕ ಸಾವು ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ ಎಂದು ವರದಿಯಾಗಿದೆ. ತನ್ನ ಮಗಳು ಮೆಟ್ಟಿಲುಗಳಿಂದ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಆತ ಪೊಲೀಸರಿಗೆ ಹೇಳಿದ್ದ.

ಕೃಷ್ಣ ಜೈಸ್ವಾಲ್‌ ಅವರ ಆರು ವರ್ಷದ ಮಗ, ಕೆಲಸಕ್ಕೆ ಹೋಗಿದ್ದ ತನ್ನ ತಾಯಿಗೆ ಸಹೋದರಿಯ ಮೇಲಿನ ಹಲ್ಲೆಯ ಬಗ್ಗೆ ತಿಳಿಸಿದ ನಂತರವೇ ಸತ್ಯ ಬೆಳಕಿಗೆ ಬಂದಿದೆ. ಬುಧವಾರ ಫರಿದಾಬಾದ್‌ನ ಬಲ್ಲಬ್‌ಗಢದ ಸೆಕ್ಟರ್ 58 ರಿಂದ ಈ ಘಟನೆ ವರದಿಯಾಗಿದೆ. ಜೈಸ್ವಾಲ್ ಅವರ ಪತ್ನಿ ನೀಡಿದ ದೂರು ಮತ್ತು 6 ವರ್ಷದ ಬಾಲಕನ ಹೇಳಿಕೆಯ ಆಧಾರದ ಮೇಲೆ ಗುರುವಾರ ಕೃಷ್ಣ ಜೈಸ್ವಾಲ್‌ನನ್ನು ಬಂಧಿಸಲಾಗಿದೆ.

ಪೊಲೀಸರ ಪ್ರಕಾರ, ಸಂತ್ರಸ್ತೆ ವಂಶಿಕಾಳನ್ನು ಆಕೆಯ ತಂದೆ ಹಲವು ಬಾರಿ ಕಪಾಳಮೋಕ್ಷ ಮಾಡಿದ್ದಾನೆ. ಮಗುವಿಗೆ ಹೋಮ್‌ವರ್ಕ್‌ ಬುಕ್‌ನಲ್ಲಿ 1-50 ರವರೆಗಿನ ಸಂಖ್ಯೆಗಳನ್ನು ಬರೆಯಲು ಸಾಧ್ಯವಾಗದಿದ್ದಾಗ ಕೋಪಗೊಂಡ ಆರೋಪಿ, ಲಟ್ಟಣಿಗೆಯಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ನಂತರ ಆಕೆಯನ್ನು ನೆಲದ ಮೇಲೆ ಬಡಿದಿದ್ದಾನೆ. ಇದರ ಬೆನ್ನಲ್ಲಿಯೇ ಆಕೆ ಕುಸಿದು ಬಿದ್ದಿದ್ದಳು.

ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಜೈಸ್ವಾಲ್‌

ಜೈಸ್ವಾಲ್ ಬಲ್ಲಬ್‌ಗಢದ ಖಾಸಗಿ ಕಂಪನಿಯಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರೆ, ಅವರ ಪತ್ನಿ ರಂಜೀತಾ ಮತ್ತೊಂದು ಖಾಸಗಿ ಕಂಪನಿಯಲ್ಲಿ ಹಗಲು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸದ ವೇಳಾಪಟ್ಟಿಯ ಪ್ರಕಾರ, ಜೈಸ್ವಾಲ್ ಕೆಲಸದಿಂದ ಮರಳಿದ ಬಳಿಕ ಬೆಳಗ್ಗೆ 6 ಗಂಟೆಗೆ ಮಕ್ಕಳನ್ನು ಶಾಲೆಗೆ ಕಳಿಸುತ್ತಿದ್ದರು. ಮಧ್ಯಾಹ್ನ ಅವರು ಮರಳಿದ ಬಳಿಕ ಅವರ ಹೋಮ್‌ವರ್ಕ್‌ಅನ್ನು ಮಾಡಿಸುತ್ತಿದ್ದರು.

“ಬುಧವಾರ ಮಧ್ಯಾಹ್ನ 12.10 ರಿಂದ 12.30 ರ ನಡುವೆ ಈ ಘಟನೆ ನಡೆದಿದ್ದು, ಜೈಸ್ವಾಲ್ ತನ್ನ ಮಗಳ ಹೋಮ್‌ವರ್ಕ್‌ ಮೇಲ್ವಿಚಾರಣೆ ಮಾಡುತ್ತಿದ್ದಾಗ. ಆಕೆಗೆ ತನ್ನ ಹೋಮ್‌ವರ್ಕ್‌ ಬುಕ್‌ನಲ್ಲಿ ಒಂದರಿಂದ ಐವತ್ತರವರೆಗಿನ ಸಂಖ್ಯೆಗಳನ್ನು ಬರೆಯಲು ಸಾಧ್ಯವಾಗಲಿಲ್ಲ, ಇದು ಅಪ್ಪನ ಸಿಟ್ಟಿಗೆ ಕಾರಣವಾಗಿದೆ” ಎಂದು ಫರಿದಾಬಾದ್ ಪೊಲೀಸ್ ಪಿಆರ್‌ಒ ಯಶ್ಪಾಲ್ ಯಾದವ್ ತಿಳಿಸಿದ್ದಾರೆ.

ಪದೇ ಪದೇ ಹಲ್ಲೆ ನಡೆಸಿದ್ದರಿಂದ ಮಗು ಕುಸಿದು ಬಿದ್ದ ನಂತರ, ಮಗಳನ್ನು ಬಲ್ಲಬ್‌ಗಢ ಸಿವಿಲ್ ಆಸ್ಪತ್ರೆಗೆ ಕರೆದೊಯ್ದಿದ್ದ. ಅಲ್ಲಿ ವಂಶಿಕಾ ಸಾವು ಕಂಡಿದ್ದಾಳೆ. ಮಗು ಮೆಟ್ಟಿಲುಗಳಿಂದ ಜಾರಿ ಬಿದ್ದಿದೆ ಎಂದು ವೈದ್ಯರಿಗೆ ತಿಳಿಸಿದ್ದ.

ರಾತ್ರಿ 1 ಗಂಟೆಗೆ ಬಂದು ಪೊಲೀಸರಿಗೆ ದೂರು

ಸಂಜೆ 6.30 ರ ಸುಮಾರಿಗೆ ಆಸ್ಪತ್ರೆಯು ಮಗುವಿನ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿತು ಆದರೆ ಪೋಷಕರಿಬ್ಬರೂ ದೂರು ನೀಡಿಲ್ಲ. “ಗುರುವಾರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ದುಃಖಿತರಾದ ತಾಯಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ತಮ್ಮ ಪತಿಯೇ ತಮ್ಮ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ನಮಗೆ ತಿಳಿಸಿದರು” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

WhatsApp Group Join Now

Spread the love

Leave a Reply