ಮಹಿಳೆಯೊಬ್ಬರನ್ನು ಕೊಲೆ ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಮನೆಯ ಆವರಣ ಗೋಡೆ ಸಮೀಪ ಎಸೆದ ಘಟನೆ ಕೇರಳ ಕೊಚ್ಚಿ ಸಮೀಪದ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಕೊಂತುರ್ತಿ ನಿವಾಸಿ ಜಾರ್ಜ್ ಕೆ.ಕೆ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ತಾನೇ ಕೃತ್ಯ ಎಸಗಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.
ಲೈಂಗಿಕ ಕಾರ್ಯಕರ್ತೆಯಾಗಿರುವ ಆಕೆಯನ್ನು ತೇವರದಲ್ಲಿರುವ ಬಾಲಕಿಯ ಪ್ರೌಢ ಶಾಲೆಯ ಬಳಿಯಿಂದ ತನ್ನ ಮನೆಗೆ ಕರೆದುಕೊಂಡು ಬಂದಿದ್ದ. ಹಣಕಾಸಿನ ವಿಚಾರದಲ್ಲಿ ಇವರಿಬ್ಬರ ನಡುವೆ ವಾಗ್ವಾದ ನಡೆದಿದೆ. ಮಾತಿನ ಭರದಲ್ಲಿ ಕಬ್ಬಿಣದ ರಾಡ್‌ನಿಂದ ಆಕೆಯ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ಕೊಚ್ಚಿ ಪೊಲೀಸ್ ವರಿಷ್ಠಾಧಿಕಾರಿ ಸಿಬಿ ಟಾಮ್ ತಿಳಿಸಿದ್ದಾರೆ.
ವಿಚಾರಣೆ ವೇಳೆ ಕೃತ್ಯ ಎಸಗಿದ್ದನ್ನು ಆತ ಒಪ್ಪಿಕೊಂಡಿದ್ದಾನೆ. ಮೃತದೇಹವನ್ನು ಮನೆಯ ಹೊರಗೆ ತೆಗೆದುಕೊಂಡು ಹೋಗಲು ಪ್ರಯತ್ನಿಸಿದ್ದನಾದರೂ, ಸಾಧ್ಯವಾಗದೆ ಕುಸಿದು ಬಿದ್ದಿದ್ದಾನೆ. ಸಾಕು ಪ್ರಾಣಿಯೊಂದರ ಕಳೇಬರ ಎಂದು ಹೇಳಿ, ಅದನ್ನು ವಿಲೇವಾರಿ ಮಾಡಲು ನೆರೆಹೊರೆಯವರ ನೆರವನ್ನೂ ಆತ ಕೇಳಿದ್ದ ಎಂದು ವಿಚಾರಣೆ ವೇಳೆ ಹೇಳಿದ್ದಾಗಿ ಟಾಮ್ ತಿಳಿಸಿದ್ದಾರೆ.
ಮನೆಯ ಆವರಣ ಗೋಡೆ ಸಮೀಪ ಬಿದ್ದಿದ್ದ ಹೆಣವನ್ನು ಗಮನಿಸಿದ ಸ್ವಚ್ಛತಾ ತಂಡ ‘ಹರಿತ ಕರ್ಮ ಸೇನಾ’ದ ಸದಸ್ಯರು ಸ್ಥಳೀಯ ಕೌನ್ಸಿಲರ್‌ಗೆ ಮಾಹಿತಿ ನೀಡಿದ್ದಾರೆ. ಅವರು ಪೊಲೀಸರಿಗೆ ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಇದೊಂದು ಕೊಲೆ ಎಂದು ಸಾಬೀತಾಗಿದ್ದು, ಆತನ ಮನೆಯಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ. ಹೆಚ್ಚಿನ ತನಿಖೆ ವೇಳೆ ನಡೆದ ಘಟನೆಗಳನ್ನೆಲ್ಲಾ ಆತ ಬಾಯಿ ಬಿಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಮೃತ ಮಹಿಳೆ ಪಾಲಕ್ಕಾಡ್ ಮೂಲದವರೆಂದು ಹೇಳಲಾಗುತ್ತಿದ್ದು, ಹೆಚ್ಚಿನ ಮಾಹಿತಿ ಪಡೆಯಲು ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಹಣದ ವಿಚಾರಕ್ಕೆ ಗಲಾಟೆ : ಲೈಂಗಿಕ ಕಾರ್ಯಕರ್ತೆಯನ್ನು ಕೊಂದು ಚೀಲದಲ್ಲಿ ಹಾಕಿ ಎಸೆದ!
WhatsApp Group
Join Now