ತನ್ನೊಂದಿಗೆ ಮಾತನಾಡಲು ನಿರಾಕರಿಸಿದ ಮತ್ತು ಗದರಿಸಿದ ಕಾರಣಕ್ಕೆ 14 ವರ್ಷದ ಶಾಲಾ ಬಾಲಕಿಯ ಮೇಲೆ 19 ವರ್ಷದ ಯುವಕನೊಬ್ಬ ಆಸಿಡ್ ದಾಳಿ ಮಾಡಿದ್ದಾನೆ. ಅದೃಷ್ಟವಶಾತ್ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಈ ಮನಕಲಕುವ ಘಟನೆ ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ ಇತ್ತೀಚಿಗೆ ನಡೆದಿದೆ.
ಬಂಧಿತ ಆರೋಪಿಯನ್ನು ಓಂಪ್ರಕಾಶ್ ಅಲಿಯಾಸ್ ಜಾನಿ (19) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿರುವ ಈತ, ಮದುವೆಯೊಂದರ ಚಿತ್ರೀಕರಣದ ವೇಳೆ 9ನೇ ತರಗತಿ ವಿದ್ಯಾರ್ಥಿನಿಯನ್ನು ನೋಡಿದ್ದನು. ಬಾಲಕಿಯ ಮೇಲೆ ಕಣ್ಣಿಟ್ಟಿದ್ದ ಈತ, ಅವಳನ್ನು ಸಂಪರ್ಕಿಸಲು ಮತ್ತು ಮಾತನಾಡಿಸಲು ಹಲವಾರು ಬಾರಿ ಪ್ರಯತ್ನಿಸಿದ್ದನು. ಆದರೆ ಬಾಲಕಿ ಆತನನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು, ದೂರವಿರುವಂತೆ ಎಚ್ಚರಿಸಿದ್ದಳು. ಇದರಿಂದ ಕೆರಳಿದ ಆರೋಪಿ, ಪ್ರೀತಿಯ ಅಮಲಿನಲ್ಲಿ ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿದ್ದನು.
ಯೋಜಿತ ದಾಳಿ ಮತ್ತು ಬಂಧನ
ಬಾಲಕಿ ಶಾಲೆಗೆ ಹೋಗುವ ದಾರಿಯನ್ನು ಗುರುತಿಸಿದ್ದ ಓಂಪ್ರಕಾಶ್, ಸುಭಾಷ್ ಪಾರ್ಕ್ ಪ್ರದೇಶದಲ್ಲಿ ಬೈಕ್‌ನಲ್ಲಿ ಬಂದು ಆಕೆಯ ಮೇಲೆ ಆಸಿಡ್ ಬಾಟಲಿಯನ್ನು ಎಸೆದಿದ್ದಾನೆ. ಈ ವೇಳೆ ಬಾಲಕಿಯ ಬಟ್ಟೆಗಳು ಸುಟ್ಟುಹೋಗಿದ್ದು, ಒಂದು ಬೆರಳಿಗೆ ಗಾಯವಾಗಿದೆ. ಕೂಡಲೇ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ದಾಳಿಯ ನಂತರ ಪೊಲೀಸರಿಂದ ತಪ್ಪಿಸಿಕೊಳ್ಳಲು ಆರೋಪಿ ಮಾಸ್ಟರ್ ಪ್ಲಾನ್ ಮಾಡಿದ್ದನು. ತನ್ನ ಮುಖಕ್ಕೆ ಬಟ್ಟೆ ಕಟ್ಟಿ ಹೆಲ್ಮೆಟ್ ಧರಿಸಿದ್ದಲ್ಲದೆ, ಬೈಕ್‌ನ ನಂಬರ್ ಪ್ಲೇಟ್ ಅನ್ನು ಕೂಡ ಬಟ್ಟೆಯಿಂದ ಮುಚ್ಚಿದ್ದನು. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಿದ್ದರೂ, ಗುರುತು ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅಮೃತಾ ದುಹಾನ್ ಅವರು ಆರೋಪಿಯ ಬಗ್ಗೆ ಮಾಹಿತಿ ನೀಡಿದವರಿಗೆ 25,000 ರೂ. ಬಹುಮಾನ ಘೋಷಿಸಿದ್ದರು.
ಕಾನೂನಿನ ಭಯ ಹುಟ್ಟಿಸಲು ಮೆರವಣಿಗೆ
ತಾಂತ್ರಿಕ ಪುರಾವೆಗಳ ಆಧಾರದ ಮೇಲೆ ಮೂರು ದಿನಗಳ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧನದ ಬಳಿಕ ಪೊಲೀಸರು ಆರೋಪಿಯನ್ನು ಸಾರ್ವಜನಿಕವಾಗಿ ಮಾರುಕಟ್ಟೆಯಲ್ಲಿ ಮೆರವಣಿಗೆ ಮಾಡಿದರು. “ಸಮಾಜದಲ್ಲಿ ಇಂತಹ ಕೃತ್ಯ ಎಸಗುವವರಲ್ಲಿ ಕಾನೂನಿನ ಭಯ ಇರಲಿ ಮತ್ತು ಮಹಿಳೆಯರ ಸುರಕ್ಷತೆ ಕುರಿತು ಧೈರ್ಯ ತುಂಬಲು ಈ ಕ್ರಮ ಕೈಗೊಳ್ಳಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆರೋಪಿಯ ವಿರುದ್ಧ ಕಠಿಣ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
ಮಾತನಾಡಲು ನಿರಾಕರಿಸಿದ್ದಕ್ಕೆ 14 ಬಾಲಕಿ ಮೇಲೆ 19ರ ಬಾಲಕ ಆಸಿಡ್ ದಾಳಿ! ಪೊಲೀಸರಿಂದ ‘ಮೆರವಣಿಗೆ’ ಶಾಸ್ತಿ
WhatsApp Group
Join Now