ಕೋಲಾರದ ನರ್ಸ್ ಸುಜಾತಾ ಮರ್ಡರ್ : 2 ಮಕ್ಕಳ ತಂದೆಯನ್ನು ಲವ್ ಮಾಡಿ ರಸ್ತೆ ಮಧ್ಯದಲ್ಲೇ ಹೆಣವಾದಳು.!

Spread the love

ಕೋಲಾರದಲ್ಲಿ ವಿವಾಹಿತ ಪ್ರಿಯಕರನೊಬ್ಬ ತನ್ನ ಪ್ರಿಯತಮೆಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಕೆಲಸಕ್ಕೆ ತೆರಳುತ್ತಿದ್ದ ನರ್ಸ್ ಸುಜಾತಾ ಕೊಲೆಗಿದ್ದು, ಪರಾರಿಯಾಗಲು ಯತ್ನಿಸಿದ ಆರೋಪಿ ಚಿರಂಜೀವಿಯನ್ನು ಸ್ಥಳೀಯರು ಹಿಗ್ಗಾಮುಗ್ಗ ಥಳಿಸಿ ಪೊಲೀಸರ ವಶಕ್ಕೆ ನೀಡಿದ್ದಾರೆ.

ಪ್ರೀತಿ ಹಾಗೂ ಹಣಕಾಸಿನ ವ್ಯವಹಾರದ ನಡುವೆ ಉಂಟಾದ ವಿರಸವು ಕೊಲೆಯಲ್ಲಿ ಅಂತ್ಯವಾಗಿರುವ ಘೋರ ಘಟನೆ ಕೋಲಾರ ನಗರದ ಹೊರವಲಯದ ಬಂಗಾರಪೇಟೆ ಬ್ರಿಡ್ಜ್ ಬಳಿ ನಡೆದಿದೆ. ತನ್ನನ್ನು ಪ್ರೀತಿಸುತ್ತಿದ್ದ ಯುವತಿಯನ್ನೇ ಪ್ರಿಯಕರ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ.

ಬಂಗಾರಪೇಟೆ ತಾಲ್ಲೂಕಿನ ದಾಸರಹೊಸಹಳ್ಳಿ ಮೂಲದ ಸುಜಾತಾ (28) ಕೊಲೆಯಾದ ದುರ್ದೈವಿ. ಈಕೆ ನರಸಾಪುರ ಕೈಗಾರಿಕಾ ಪ್ರದೇಶದ ‘ಬೆಲ್ರೈಸ್’ ಕಂಪನಿಯಲ್ಲಿ ಸ್ಟಾಫ್ ನರ್ಸ್ ಆಗಿ ಕಳೆದ ಮೂರು ತಿಂಗಳಿನಿಂದ ಕೆಲಸ ಮಾಡುತ್ತಿದ್ದರು. ಯಳಬುರ್ಗಿ ಗ್ರಾಮದ ಚಿರಂಜೀವಿ (27) ಎಂಬಾತನೇ ಕೊಲೆ ಮಾಡಿದ ಆರೋಪಿ. ಈತ ಹೊಸಕೋಟೆಯ ಖಾಸಗಿ ಫೈನಾನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು.

ಆರೋಪಿ ಚಿರಂಜೀವಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುವಾಗ ಸ್ತ್ರೀಶಕ್ತಿ ಸಂಘಗಳ ಮೂಲಕ ಸಾಲ ನೀಡುವ ಮತ್ತು ಹಣ ವಸೂಲಿ ಮಾಡುವ ಕೆಲಸ ಮಾಡುತ್ತಿದ್ದನು. ಈ ಸಂದರ್ಭದಲ್ಲಿ ಸುಜಾತಾ ಪರಿಚಯವಾಗಿ, ಇಬ್ಬರ ನಡುವೆ ಪ್ರೀತಿ ಅಂಕುರಿಸಿತ್ತು. ವಿಶೇಷವೆಂದರೆ, ಆರೋಪಿ ಚಿರಂಜೀವಿ ಈಗಾಗಲೇ ವಿವಾಹಿತನಾಗಿದ್ದು, ಇಬ್ಬರು ಮಕ್ಕಳ ತಂದೆಯೂ ಆಗಿದ್ದಾನೆ.

ಪೋಲೀಸ್ ಮೂಲಗಳ ಪ್ರಕಾರ, ಇಬ್ಬರ ನಡುವೆ ಕಳೆದ ಕೆಲವು ದಿನಗಳಿಂದ ಹಣಕಾಸಿನ ವಿಚಾರಕ್ಕೆ ಭಾರಿ ಜಗಳ ನಡೆಯುತ್ತಿತ್ತು. ಸುಜಾತಾ ಆರೋಪಿಯಿಂದ ಹಣ ಪಡೆದಿದ್ದಳು ಎನ್ನಲಾಗಿದ್ದು, ಈ ವಿಚಾರವಾಗಿ ಈ ಹಿಂದೆಯೂ ಚಿರಂಜೀವಿ ಆಕೆಯ ಮೇಲೆ ಹಲ್ಲೆ ಮಾಡಿದ್ದನು.

ಈ ಸಂಬಂಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಆದರೂ ಬುದ್ಧಿ ಕಲಿಯದ ಆರೋಪಿ, ಇಂದು ಬೆಳಗ್ಗೆ ಸುಜಾತಾ ಕೆಲಸಕ್ಕೆ ತೆರಳುತ್ತಿದ್ದಾಗ ಕೋಲಾರ ಬಸ್ ಡಿಪೋ ಬಳಿ ತಡೆದು ಮಾತುಕತೆಗೆ ಇಳಿದಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ತನ್ನ ಬಳಿಯಿದ್ದ ಚಾಕುವಿನಿಂದ ಸುಜಾತಾಳಿಗೆ ಮನಬಂದಂತೆ ಇರಿದಿದ್ದಾನೆ.

ಸುಜಾತಾ ಕಿರುಚಾಟ ಕೇಳಿ ಸ್ಥಳಕ್ಕೆ ಧಾವಿಸಿದ ಸಾರ್ವಜನಿಕರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿಯನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ಆರೋಪಿ ಚಿರಂಜೀವಿಯನ್ನು ಸಾರ್ವಜನಿಕರು ಬೆನ್ನಟ್ಟಿ ಹಿಡಿದು, ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಇನ್ನು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಕನಿಕ ಸಿಕ್ರಿವಾಲ್ ಮಾತನಾಡಿ, ‘ವೈಯಕ್ತಿಕ ಮತ್ತು ಹಣಕಾಸಿನ ಕಾರಣಕ್ಕೆ ಈ ಕೊಲೆ ನಡೆದಿದೆ. ಸುಜಾತಾ ಎಷ್ಟು ಹಣ ಪಡೆದಿದ್ದಳು ಮತ್ತು ಕೊಲೆಗೆ ಬೇರೇನಾದರೂ ಪ್ರಚೋದನೆ ಇತ್ತೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.

WhatsApp Group Join Now

Spread the love

Leave a Reply