ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿವಿಧ ರಾಜಕೀಯ ವಿಚಾರಗಳ ಕುರಿತು ಸ್ಪಷ್ಟ ಹಾಗೂ ಕಟುವಾದ ಹೇಳಿಕೆಗಳನ್ನು ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ರಮದಲ್ಲಿ ತಾವು ಗೌರವ ಸಲ್ಲಿಸಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, “ಸಿದ್ದರಾಮಯ್ಯ ಕಾಂಗ್ರೆಸ್ನ ಸಿಎಂ ಅಲ್ಲ, ಅವರು ರಾಜ್ಯದ ಮುಖ್ಯಮಂತ್ರಿ. ಮುಖ್ಯಮಂತ್ರಿ ನಮ್ಮ ಕ್ಷೇತ್ರಕ್ಕೆ ಬಂದಾಗ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ. ಅದಕ್ಕೇ ನಾನು ಗೌರವ ಸಲ್ಲಿಸಿದ್ದೇನೆ. ಇದಕ್ಕೆ ಕೆಲವರಿಗೆ ನೋವಾದರೆ ನಾನು ಏನೂ ಮಾಡಲಾಗದು” ಎಂದು ಹೇಳಿದರು.
ಜನರು ತಮ್ಮ ಪರವಾಗಿ ಕೂಗಿದ್ದನ್ನು ಉಲ್ಲೇಖಿಸಿದ ಅವರು, “ಜನರು ನನ್ನನ್ನು ಬೆಂಬಲಿಸಿದ್ದಾರೆ. ಅದು ನನ್ನ ಮೇಲಿರುವ ಅಭಿಮಾನ. ಜನರ ಪ್ರೀತಿ ಹಾಗೂ ವಿಶ್ವಾಸಕ್ಕೆ ನಾನು ಧನ್ಯವಾದ ಸಲ್ಲಿಸುತ್ತೇನೆ. ನಾನು ಸಿದ್ದರಾಮಯ್ಯ ಅವರಿಗೆ ಗೌರವ ನೀಡಿದಂತೆ, ಕಾಂಗ್ರೆಸ್ನವರು ಕೂಡ ಪ್ರಧಾನಿಗೆ ಗೌರವ ನೀಡಬೇಕು” ಎಂದು ಹೇಳಿದರು.
ಡಿಕೆಶಿ ಕ್ಲಾಸ್ ವಿಚಾರಕ್ಕೆ ತಿರುಗೇಟು :-
ಕಾಂಗ್ರೆಸ್ ಜಿಲ್ಲಾ ನಾಯಕರಿಗೆ ಡಿಕೆಶಿ ನೀಡಿದ ‘ಕ್ಲಾಸ್’ ವಿಚಾರಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, “ಡಿಕೆಶಿ ಎದುರೇ ಜನರು ನನ್ನ ಪರವಾಗಿ ಕೂಗಿದರೆ, ಜಿಲ್ಲೆಯ ನಾಯಕರು ಏನು ಮಾಡಬೇಕು? ಮುಖ್ಯಮಂತ್ರಿ ಎದುರೇ ಜನ ನನ್ನ ಪರವಾಗಿ ಕೂಗಿದ್ದು ಕಾಂಗ್ರೆಸ್ಗೂ ಬಿಜೆಪಿಗೂ ಎಚ್ಚರಿಕೆಯ ಗಂಟೆ. ನಮ್ಮನ್ನೂ, ಪ್ರತಾಪ್ ಸಿಂಹನನ್ನೂ ಬಿಟ್ಟರೆ ಹುಷಾರಾಗಿರಿ ಎಂದು ಬಿಜೆಪಿಗೆ ಎಚ್ಚರಿಕೆ ನೀಡುತ್ತೇನೆ” ಎಂದರು.
ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ವಿಳಂಬದ ಕುರಿತು ಮಾತನಾಡಿದ ಯತ್ನಾಳ್, “ಹೈಕಮಾಂಡ್ ನಾಯಕರಿಗೆ ಎಲ್ಲವೂ ಗೊತ್ತಿದೆ. ಯಾರಿಗೆ ಯಾವಾಗ ಏನು ಕೊಡಬೇಕು ಅನ್ನೋದೂ ಅವರಿಗೆ ತಿಳಿದಿದೆ. ಎಲ್ಲ ನಿರ್ಧಾರಗಳನ್ನು ಹೈಕಮಾಂಡ್ವೇ ಮಾಡುತ್ತದೆ” ಎಂದು ಹೇಳಿದರು.
ಬಳ್ಳಾರಿ ಗಲಾಟೆ : ಸಿಬಿಐ ತನಿಖೆಗೆ ಆಗ್ರಹ :
ಬಳ್ಳಾರಿ ಗಲಾಟೆ ವಿಚಾರದಲ್ಲಿ ಸಿಓಡಿ ತನಿಖೆ ಸಾಕಾಗದು ಎಂದು ಅಭಿಪ್ರಾಯಪಟ್ಟ ಯತ್ನಾಳ್, “ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಆಡಿಯೋ, ವಿಡಿಯೋಗಳನ್ನು ಸಾಕ್ಷಿಯಾಗಿ ಪರಿಗಣಿಸಲಾಗುವುದಿಲ್ಲ. ಏಐ ತಂತ್ರಜ್ಞಾನದ ಮೂಲಕ ಅವುಗಳನ್ನು ನಕಲಿ ಮಾಡಬಹುದು. ರಾಜ್ಯದಲ್ಲಿ ನಡೆಯುವ ತನಿಖೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಕ್ಲೀನ್ ಚಿಟ್ ನೀಡುವ ಸಾಧ್ಯತೆ ಇದೆ. ಆದ್ದರಿಂದ ಬಳ್ಳಾರಿ ಗಲಾಟೆ ಕುರಿತು ಸಿಬಿಐ ತನಿಖೆ ನಡೆಸಬೇಕು” ಎಂದು ಆಗ್ರಹಿಸಿದರು.
ಸಿಎಂ ಎದುರು ಜನ ನನ್ನ ಪರ ಕೂಗಿದ್ದು ಕಾಂಗ್ರೆಸ್-ಬಿಜೆಪಿಗೆ ಎಚ್ಚರಿಕೆ ಗಂಟೆ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್!
WhatsApp Group
Join Now