ನಕಲಿ ಗೋಲ್ಡ್, ಅಸಲಿ ಎಫ್ಐಆರ್ : ಕಳ್ಳರಿಗೆ ಚಳ್ಳೆಹಣ್ಣು ತಿನ್ನಿಸಿದ ಶಿವಮೊಗ್ಗದ 73ರ ಅಜ್ಜಿ

Spread the love

ಶಿವಮೊಗ್ಗ : ಮನೆಗೆ ಬಂದಿದ್ದ ಇಬ್ಬರು ಕಳ್ಳರಿಗೆ 73ರ ಅಜ್ಜಿ ಚಳ್ಳೆಹಣ್ಣು ತಿನ್ನಿಸಿದ ಘಟನೆ ಶಿವಮೊಗ್ಗದ ಗೋಪಾಳ ಬಳಿಯ ಕೆಎಚ್‌ಬಿ ಕಾಲೋನಿಯಲ್ಲಿ ನಡೆದಿದೆ. ಈ ಘಟನೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಶಿವಲಿಂಗಮ್ಮ ಅಜ್ಜಿ ಕೆಎಚ್‌ಬಿ ಕಾಲೋನಿಯಲ್ಲಿ ವಾಸವಾಗಿದ್ದು, ಮನೆಯಲ್ಲಿ ಒಬ್ಬರೇ ಇದ್ದಾಗ ಇಬ್ಬರು ಕಳ್ಳರು ನುಗ್ಗಿದ್ದಾರೆ. ಅಜ್ಜಿ ಧರಿಸಿದ ಬಳೆಗಳನ್ನು ಬಿಚ್ಚಿಕೊಂಡು ಕಳ್ಳರಿಬ್ಬರು ಪರಾರಿಯಾಗಿದ್ದಾರೆ. ಅಜ್ಜಿಯ ದಿನನಿತ್ಯದ ರೂಢಿ ಇಂದು ಅವರ ಪ್ರಾಣ ಮತ್ತು ಬಂಗಾರವನ್ನು ಉಳಿಸಿದೆ. ಬಂಗಾರ ಎಂದು ಕಳ್ಳರು ತೆಗೆದುಕೊಂಡು ಹೋಗಿದ್ದ ಉಮಾಗೋಲ್ಡ್ ಬಳೆಗಳಾಗಿವೆ.

ಅಜ್ಜಿ ಮನೆಯಲ್ಲಿ ಆಗಿದ್ದೇನು?

ಬೆಳಗ್ಗೆ 11.30ರ ವೇಳೆ ಮಹಡಿಯಲ್ಲಿ ಬಟ್ಟೆ ಒಣಗಿಸಿ ಹಾಲ್ ಒಳಗೆ ಅಜ್ಜಿ ಪ್ರವೇಶಿಸಿದಾಗ ಇಬ್ಬರು ಕಳ್ಳರು ಕಾಣಿಸಿದ್ದಾರೆ. ಕಳ್ಳರ ಪೈಕಿ ಒಬ್ಬ ಅಜ್ಜಿಯ ಬಾಯಿಯನ್ನು ಬಟ್ಟೆಯಿಂದ ಕಟ್ಟಿದ್ದಾನೆ. ಮತ್ತೋರ್ವ ಅಜ್ಜಿಯ ಕೈಗಳನ್ನು ಕಟ್ಟಿದ್ದಾನೆ. ಈ ನಡುವೆಯೇ ನನ್ನ ಮಗ ಬರ್ತಿದ್ದಾನೆ ಎಂದು ಅಜ್ಜಿ ಕೂಗಿಕೊಂಡಿದ್ದಾರೆ. ಇದರಿಂದ ಆತಂಕಗೊಂಡ ಕಳ್ಳರು, ಅಜ್ಜಿಯ ಕೈಯಲ್ಲಿನ 4 ಬಳೆಗಳನ್ನು ಬಿಚ್ಚಿಕೊಂಡು ಪರಾರಿಯಾಗಿದ್ದಾರೆ. ಕಳ್ಳರು ಎಸ್ಕೇಪ್ ಆಗುತ್ತಿದ್ದಂತೆ ಕಟ್ಟು ಬಿಚ್ಚಿಕೊಂಡು ಅಜ್ಜಿ, ಅಕ್ಕ-ಪಕ್ಕದ ಮನೆಯವರಿಗೆ ಕೂಗಿ ವಿಷಯ ತಿಳಿಸಿದ್ದಾರೆ.

ನಿತ್ಯ ರೂಢಿಯೇ ಅಜ್ಜಿಯನ್ನು ಕಾಪಾಡಿತ್ತು!

ಅಜ್ಜಿ ಶಿವಲಿಂಗಮ್ಮ ಪ್ರತಿದಿನ ಸಂಜೆ 4 ಗಂಟೆಗೆ ವಾಕಿಂಗ್ ಹೋಗುವ ಅಭ್ಯಾಸ ರೂಢಿಸಿಕೊಂಡಿದ್ದರು. ವಾಕಿಂಗ್ ಹೋಗುವ ಮುನ್ನ ಕೊರಳಲ್ಲಿದ್ದ ಚಿನ್ನದ ತಾಳಿ ಸರ ಮತ್ತು ಕೈಯಲ್ಲಿನ ಬಳೆಗಳನ್ನು ಬಿಚ್ಚಿಡುತ್ತಿದ್ದರು. ಆನಂತರ ನಕಲಿ ಬಂಗಾರದ ತಾಳಿ ಸರ ಮತ್ತು ಬಳೆ ಧರಿಸಿಕೊಂಡು ವಾಕಿಂಗ್‌ಗೆ ಹೋಗುತ್ತಿದ್ದರು. ಸಂಜೆಯ ನಂತರ ಚಿನ್ನದ ತಾಳಿ ಸರ ಮತ್ತು ಬಂಗಾರದ ಬಳೆ ತೆಗೆದಿಟ್ಟರೆ ಮರುದಿನ ಬೆಳಗ್ಗೆ ಸ್ನಾನವಾದ ನಂತರವೇ ಹಾಕಿಕೊಳ್ಳುತ್ತಿದ್ದರು.

ಅಜ್ಜಿ ಮಹಡಿ ಮೇಲೆ ಬಟ್ಟೆ ಒಣಗಿ ಹಾಕಿ ಬಂದು ಬಂಗಾರ ಆಭರಣಗಳನ್ನು ಧರಿಸುವ ಮೊದಲೇ ಕಳ್ಳರು ಮನೆಗೆ ನುಗ್ಗಿದ್ದಾರೆ. ಅಜ್ಜಿ ಧರಿಸಿದ್ದ ಅಸಲಿ ಬಂಗಾರ ಎಂದು ತಿಳಿದು ಬಲವಂತವಾಗಿ ಬಳೆಗಳನ್ನು ಕಿತ್ತುಕೊಂಡು ಹೋಗಿದ್ದಾರೆ. ಒಂದು ವೇಳೆ ಕಳ್ಳರು ಅರ್ಧ ಗಂಟೆ ಲೇಟಾಗಿ ಬಂದಿದ್ದರೆ ಅಜ್ಜಿ ಚಿನ್ನದ ಆಭರಣಗಳನ್ನು ಧರಿಸುತ್ತಿದ್ದರು. ಅಜ್ಜಿ ಸ್ನಾನ ಮಾಡಿ ಆಭರಣ ಧರಿಸುವ ಮುನ್ನವೇ ಬಂದಿರುವ ಕಾರಣ ನಕಲಿ ಚಿನ್ನದ ಬಳೆ ತೆಗೆದುಕೊಂಡು ಹೋಗಿದ್ದಾರೆ.

ಇದೀಗ ನಕಲಿ ಗೋಲ್ಡ್ ತೆಗೆದುಕೊಂಡು ಹೋಗಿರುವ ಕಳ್ಳರ ವಿರುದ್ಧ ಅಸಲಿ ಎಫ್‌ಐಆರ್ ದಾಖಲಾಗಿದೆ. ಕಳ್ಳರು ಬಳೆ ಕಿತ್ತುಕೊಳ್ಳುವಾಗ ಅಜ್ಜಿ ಇದು ನಕಲಿ ಅಂತ ಹೇಳದೇ ಜಾಣತನ ಮೆರೆದಿದ್ದಾರೆ.

WhatsApp Group Join Now

Spread the love

Leave a Reply