ಭಾರತದಲ್ಲಿ ‘ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತರನ್ನು ನಿರ್ಮೂಲನೆ ಮಾಡುವ’ ಪ್ರಯತ್ನ ನಡೆಯುತ್ತಿದೆ. ಅವರ ನರಮೇಧಕ್ಕೆ ಸಿದ್ಧತೆ ನಡೆಯುತ್ತಿದೆ ಎಂದು ಪಂಚಭಾಷಾ ಮತ್ತು ಬಿಜೆಪಿ ಆಡಳಿತ ವಿಮರ್ಶಕ ಪ್ರಕಾಶ್ ರಾಜ್ ಅವರು ಆರೋಪಿಸಿದ್ದಾರೆ.
ಬಿಜೆಪಿ ಜೊತೆಗೆ ನ್ಯಾಯಾಲಯಗಳ ಬಗ್ಗೆ ಅವರ ನೀಡಿರುವ ಸ್ಪೋಟಕ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬಿಜೆಪಿ ಬೆಂಬಲಿಗರು ನಟನ ಹೇಳಿಕೆ ಖಂಡಿಸಿದ್ದಾರೆ.
ಹೈದರಾಬಾದ್‌ನಲ್ಲಿ ನಾಗರಿಕ ಹಕ್ಕುಗಳ ರಕ್ಷಣಾ ಸಂಘ (APCR) ಕಳೆದ ತಿಂಗಳು ಆಯೋಜಿಸಿದ್ದ “ನ್ಯಾಯಕ್ಕಾಗಿ ಹಂಬಲ’ ಹೆಸರಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದರು. ಆ ಹೇಳಿಕೆ, ಆರೋಪಗಳ ವಿಡಿಯೋ ಕಳೆದೊಂದು ದಿನದಿಂದ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಆಕ್ಷೇಪದ ಜೊತೆಗೆ ತೀವ್ರ ಚರ್ಚೆ ಹುಟ್ಟು ಹಾಕಿದೆ.
ಸದ್ಯ ದೇಶದಲ್ಲಿ ಏನಾಗುತ್ತಿದೆ. ಮುಸ್ಲಿಮರನ್ನು ನಿರ್ಮೂಲನೆ ಮಾಡಲು ಬಯಸುತ್ತಿದ್ದಾರೆ. ನರಮೇಧದ ಸಿದ್ಧತೆ ನಡೆಯುತ್ತಿರುವುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಅವರು ಬುಡಕಟ್ಟು ಜನರನ್ನು, ಅಲ್ಪಸಂಖ್ಯಾತರನ್ನು ಅಳಿಸಿಹಾಕಲು ಬಯಸಿದ್ದಾರೆ. ಇದೇ ಅವರ ಆಲೋಚನೆ ಎಂದು ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಪೋಷಕರಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಉದ್ದೇಶಿಸಿ ಅವರು ಮಾತನಾಡಿದ್ದಾರೆ.
ನ್ಯಾಯಾಂಗ ವ್ಯವಸ್ಥೆ ಮೇಲೂ ನಟ ಟೀಕೆ
ಬಿಜೆಪಿಯ ಜೊತೆಗೆ ಭಾರತದ ಪ್ರಜಾಪ್ರಭುತ್ವ ಸಂಸ್ಥೆಗಳ ವಿರುದ್ಧವು ನಟ ಪ್ರಕಾಶ್ ರಾಜ್ ಹರಿಹಾಯ್ದರು. ಈ ಸಂಸ್ಥೆಗಳು ಅವರೊಂದಿಗೆ ರಾಜಿ ಮಾಡಿಕೊಂಡಿವೆ ಎಂದು ದೂರಿದರು. ಒಂದು ಕಾಲದಲ್ಲಿ ಜನಸಾಮಾನ್ಯರ ಕಟ್ಟ ಕಡೆಯ ಭರವಸೆ ಆಗಿದ್ದ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು. ‘ಈ ವೇದಿಕೆಯಲ್ಲಿ ಧೈರ್ಯವಾಗಿ ಹೇಳುತ್ತೇನೆ, ಭಾರತದ ನ್ಯಾಯಾಲಯಗಳು ನಾಚಿಕೆ ಪಡಬೇಕು. ಏಕೆಂದರೆ ನೀವು ನ್ಯಾಯವನ್ನು ಕೊಲ್ಲುವ ದೊಡ್ಡ ಅಪರಾಧ ಮಾಡುತ್ತಿದ್ದೀರಿ’ ಎಂದು ದೂರಿದರು. ನ್ಯಾಯಾಲಯಗಳು ‘ಸಾಂವಿಧಾನಿಕ ನೈತಿಕತೆ ಎತ್ತಿಹಿಡಿಯಲು ವಿಫಲವಾಗಿವೆ’ ಎಂದು ಗಂಭೀರ ಆರೋಪ ಮಾಡಿದರು.
ಬಿಜೆಪಿಗಿಂತ ಆರ್‌ಎಸ್‌ಎಸ್ ಹೆಚ್ಚು ಸಕ್ರಿಯ
ಬಿಜೆಪಿ ಜೊತೆ ಜೊತೆಗೆ ಆರ್‌ಎಸ್‌ಎಸ್ ವಿರುದ್ಧ ಗುಡುಗಿದ ಪ್ರಕಾಶ್ ರಾಜ್ ಅವರು, ಐತಿಹಾಸಿಕ ಫ್ಯಾಸಿಸ್ಟ್ ಚಳುವಳಿಗಳನ್ನು ಉಲ್ಲೇಖಿಸಿದರು. ‘ಹಿಟ್ಲರ್, ಮುಸೊಲಿನಿ ಏಕೆ ವಿಫಲರಾದರು?. ಏಕೆಂದರೆ ಅವರು ರಾಜಕೀಯ ಪಕ್ಷವನ್ನು ಪ್ರಾರಂಭಿಸಿದರು. ಅವರು ರಾಜಕೀಯ ಪಕ್ಷವಾಗಿದ್ದರು. ಇಲ್ಲಿ ಆರ್‌ಎಸ್‌ಎಸ್ ರಾಜಕೀಯ ಪಕ್ಷವಲ್ಲ” ಎಂದು ಅವರು ದೂರಿದರು. ಇಲ್ಲಿ ಕಾಣದ ಸಂಘಟನೆಯೊಂದು ಹೆಚ್ಚು ಶಕ್ತಿಶಾಲಿ ಯಾಗಿ ಕಾರ್ಯನಿರ್ವಹಿಸುತ್ತದೆ. ದೇಶದಲ್ಲಿ ಆರ್‌ಎಸ್‌ಎಸ್ ನೀರಿನ ಅಡಿಯಲ್ಲಿನ “ರಾಕ್ಷಸ”ನಂತೆ ಇದ್ದರೆ, ಬಿಜೆಪಿ ಕೇವಲ ನೀರಿನ ಮೇಲ್ಮೈಯಲ್ಲಿ ಕಾಣುವ “ಕಮಲ” ಕಿಡಿ ಕಾರಿದರು.
ನವೆಂಬರ್ 26ರ ಸಂವಿಧಾನ ದಿನ ಪ್ರಧಾನಿ ಮೋದಿಯವರಿಂದ ಸ್ವೀಕರಿಸಲಾಗಿದೆ ಎನ್ನಲಾದ ಇಮೇಲ್ ಕುರಿತು ನಟ ಪ್ರಸ್ತಾಪಿಸಿದರು. “ಇದೆಲ್ಲ ಸುಳ್ಳುಗಳಿಂದ ತುಂಬಿದ ಪತ್ರ” ಎಂದು ಅವರು ಬಣ್ಣಿಸಿದರು. ವೈಯಕ್ತಿಕ ಮಾಹಿತಿ ಬಳಕೆಗೆ ಅವರು ಆಕ್ಷೇಪ ವ್ಯಕ್ತಪಡಿಸಿದರು. ಪ್ರಧಾನಿಯವರಿಗೆ ಡಾ.ಬಿ.ಆರ್.ಅಂಬೇಡ್ಕರ್, ಸಂವಿಧಾನ ಬಗೆಗಿನ ಲಿಖಿತ ಹೊಗಳಿಕೆಯನ್ನು ಟೀಕಿಸಿದರು. ರಾಮ ಮಂದಿರ ಕಾರ್ಯಕ್ರಮದ ಹಿಂದಿನ ದಿನದಲ್ಲಿ ಪ್ರಧಾನಿ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನಡೆದುಕೊಂಡಿದ್ದು ನೋಡಿದರೆ ಗೊತ್ತಾಗುತ್ತದೆ ಎಂದು ಹೋಲಿಕೆ ಮಾಡಿದರು. ಧಾರ್ಮಿಕ ಧ್ವಜ ಹಾರಿಸುವಾಗ ಪ್ರಧಾನಿ ಮೋದಿಯವರ ಕೈ ನಡುಗುತ್ತಿದ್ದನ್ನು ನೋಡಿದರೆ ಇವರಿಗೆ ರಾಷ್ಟ್ರಧ್ವಜದ ಬಗ್ಗೆ ಇಷ್ಟೊಂದು ಗೌರವವಿದೆಯೇ ಎಂದು ನನಗೆ ಆಶ್ಚರ್ಯವಾಯಿತು ಎಂದರು.
ನರಮೇಧ ನಡೆಸುವುದು, ಮನುಸ್ಮೃತಿಯನ್ನು ತರುವುದು, ಸಂವಿಧಾನ ಬದಲಾಯಿಸುವುದು ಅವರ (ಬಿಜೆಪಿ) ಉದ್ದೇಶವಾಗಿದೆ. ಅಂಬೇಡ್ಕರ್ ಅವರು ಬರೆದ ಸಂವಿಧಾನಕ್ಕೆ ಅವರು ‘ತೃಪ್ತರಾಗಿಲ್ಲ”. ಅಲ್ಪಸಂಖ್ಯಾತರನ್ನು “ದ್ವಿತೀಯ ನಾಗರಿಕರ” ಸ್ಥಾನಕ್ಕೆ ಇಳಿಸುವುದು ಅವರ ಗುರಿಯಾಗಿದೆ ಎಂದು ಪ್ರತಿಪಾದಿಸಿದರು. ಗೌರಿ ಲಂಕೇಶ್, ನರೇಂದ್ರ ದಾಭೋಲ್ಕರ್ ಅವರಂತಹ ಕಾರ್ಯಕರ್ತರ ಹತ್ಯೆಗಳು ನಡೆದವು. ಬಳಿಕ ಆರೋಪಿಗಳಿಗೆ ಜಾಮೀನು ಸಿಕ್ಕು ಬಿಡುಗಡೆ ಆಗದ್ದನ್ನು ನಟ ಉಲ್ಲೇಖಿಸಿದರು. ಇದೆಲ್ಲ ನೋಡಿದರೆ ಅವರ ಉದ್ದೇಶ ಏನೆಂಬುದು ಅರ್ಥವಾಗುತ್ತದೆ. ಈ ಬಗ್ಗೆ ಸಾರ್ವಜನಿಕರು ಜಾಗೃತರಾಗಬೇಕು. ಇಂದು ಮುಸ್ಲಮರನ್ನು ಅಳಿಸಲು ಮುಂದಾಗಿರುವ ಅವರ ನಾಳೆ ನಮ್ಮ ಬಳಿಯು ಬರುತ್ತಾರೆ ಎಂದು ಆರೋಪಿಸಿದರು.
ಪ್ರಕಾಶ್ ರಾಜ್ ಅವರ ವೀಡಿಯೋ ನೋಡಿದ ಬಿಜೆಪಿ ಬೆಂಬಲಿಗರು ಮತ್ತು ನೆಟ್ಟಿಗರು. ಇದೆಲ್ಲ ಆಧಾರರಹಿತ ಆರೋಪಗಳು. ಇವರೊಬ್ಬ ದೇಶದ್ರೋಹಿ, ಪ್ರಚೋದನಕಾರಿ ಹೇಳಿಕೆ ಸರಿಯಲ್ಲ. ಶಾಂತಿ ಕದಡಬಾರದು ಎಂದು ನಟನ ಹೇಳಿಕೆಯನ್ನು ಖಂಡಿಸಿದ್ದಾರೆ. ಇವರು ಸಮಾಜದಲ್ಲಿ ದ್ವೇಷವನ್ನು ಹರಡುತ್ತಿದ್ದಾರೆ. ರಾಜಕೀಯಕ್ಕಾಗಿ ಸಮಾಜ ವಿಭಜಿಸಲು ಯತ್ನಿಸುತ್ತಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.