ಬೇರೊಬ್ಬ ಮದುವೆಯಾಗಲಿರುವ ಯುವತಿಗೆ ಇನ್ಸ್ಟಾಗ್ರಾಂನಲ್ಲಿ ಮೆಸೇಜ್ ಮಾಡಿ ಕಾಟ: ತರೀಕೆರೆಯಲ್ಲಿ ಯುವಕನ ಬರ್ಬರ ಹತ್ಯೆ

Spread the love

ಇನ್‌ಸ್ಟಾಗ್ರಾಂನಲ್ಲಿ ಯುವತಿಗೆ ನಿರಂತರವಾಗಿ ಮೆಸೇಜ್ ಮಾಡಿ ಟಾರ್ಚರ್ ನೀಡುತ್ತಿದ್ದ ಆರೋಪದ ಹಿನ್ನೆಲೆ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ನಡೆದಿದೆ.

ಕೊಲೆಯಾದ ಯುವಕನನ್ನು ಮಂಜುನಾಥ್ (21) ಎಂದು ಗುರುತಿಸಲಾಗಿದೆ. ಮಂಜುನಾಥ್ ತರೀಕೆರೆ ತಾಲೂಕಿನ ಉಡೇವಾ ಗ್ರಾಮದ ನಿವಾಸಿಯಾಗಿದ್ದು, ತರೀಕೆರೆ ತಾಲೂಕಿನ ಅತ್ತಿಗನಾಳು ಗ್ರಾಮದ ಬಳಿ ಈ ಘಟನೆ ನಡೆದಿದೆ.

ಪರಿಚಯವಿದ್ದ ಯುವತಿಗೆ ಮಂಜುನಾಥ್ ಪದೇಪದೇ ಇನ್‌ಸ್ಟಾಗ್ರಾಂನಲ್ಲಿ ಮೆಸೇಜ್ ಮಾಡುತ್ತಿದ್ದ ಎನ್ನಲಾಗಿದೆ. ಯುವತಿಗೆ ಈಗಾಗಲೇ ವೇಣು ಎಂಬ ಯುವಕನೊಂದಿಗೆ ಮದುವೆ ನಿಶ್ಚಿತಾರ್ಥವಾಗಿದ್ದು, ‘ಎಂಗೇಜ್ಮೆಂಟ್ ಆಗಿದೆ, ಮೆಸೇಜ್ ಮಾಡಬೇಡ’ ಎಂದು ಯುವತಿ ಮಂಜುನಾಥ್‌ಗೆ ತಿಳಿಸಿದ್ದಳು. ಆದರೂ ಮಂಜುನಾಥ್ ಮೆಸೇಜ್ ಮಾಡುತ್ತಲೇ ಇದ್ದ. ಇದನ್ನು ಯುವತಿ ತನ್ನನ್ನು ಮದುವೆಯಾಗಲಿರುವ ಯುವಕ ವೇಣುಗೆ ತಿಳಿಸಿದ್ದಾಳೆ.

ಈ ಹಿನ್ನೆಲೆ ಮಾತನಾಡಬೇಕು ಎಂದು ಮಂಜುನಾಥ್‌ನನ್ನು ಕರೆಸಿಕೊಂಡ ವೇಣು ಆತನ ಮೇಲೆ ಸ್ನೇಹಿತರಾದ ಕಿರಣ್, ಅಪ್ಪು ಮತ್ತು ಮಂಜು ಜೊತೆ ಜಗಳವಾಡಿದ್ದಾನೆ. ಗಲಾಟೆ ವೇಳೆ ಮಂಜುನಾಥ್‌ಗೆ ಚಾಕುವಿನಿಂದ ಇರಿದು ನಾಲ್ವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಗಂಭೀರ ಗಾಯಗೊಂಡ ಮಂಜುನಾಥ್‌ನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.

ಈ ಘಟನೆ ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

WhatsApp Group Join Now

Spread the love

Leave a Reply