ಯುವಕನ ಕಿರಿಕಿರಿಗೆ ಬೇಸತ್ತು ಮಗನೊಂದಿಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ: ತುಮಕೂರಿನಲ್ಲಿ ಹೃದಯವಿದ್ರಾವಕ ಘಟನೆ

Spread the love

ಕೆಲಸದ ನೆಪದಲ್ಲಿ ಕಾಡುತ್ತಿದ್ದ ಯುವಕನ ಕಿರುಕುಳಕ್ಕೆ ಬೇಸತ್ತು, ಎಂಟು ವರ್ಷದ ಮಗನೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಕರುಣಾಜನಕ ಘಟನೆ ತುಮಕೂರು ತಾಲೂಕಿನ ಸೋರೆಕುಂಟೆ ಗ್ರಾಮದಲ್ಲಿ ನಡೆದಿದೆ.

ಹಂಸರೇಖ ಎಂಬ ಮಹಿಳೆಯೇ ಆತ್ಮಹತ್ಯೆಗೆ ಶರಣಾದವರು. ಹಂಸರೇಖ ಅವರ ಪತಿ ನಾಗೇಶ್ ನಾಲ್ಕೈದು ವರ್ಷಗಳ ಹಿಂದೆ ನಿಧನರಾಗಿದ್ದರು. ಆಗಲೇ ಇಬ್ಬರು ಮಕ್ಕಳ ತಾಯಿಯಾಗಿದ್ದ ಹಂಸರೇಖ ಅವರ ಭವಿಷ್ಯ ಹಾಳಾಗಬಾರದು ಎಂಬ ಉದ್ದೇಶದಿಂದ ಕುಟುಂಬಸ್ಥರು ಪತಿಯ ಸಹೋದರನೊಂದಿಗೆ ಮರುವಿವಾಹ ಮಾಡಿಸಿದ್ದರು. ಬಳಿಕ ಜೀವನೋಪಾಯಕ್ಕಾಗಿ ವಸಂತನರಸಾಪುರದಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು.

ಕಂಪನಿಯಲ್ಲಿ ಕೆಲಸ ಮಾಡುವ ವೇಳೆ ಯುವಕನೊಬ್ಬ ಹಂಸರೇಖ ಅವರ ಪರಿಚಯ ಮಾಡಿಕೊಂಡಿದ್ದ. ಆ ಪರಿಚಯ ಮುಂದುವರಿದು ಸ್ನೇಹವಾಗಿ, ಬಳಿಕ ಆತ್ಮೀಯತೆಯ ಹಂತಕ್ಕೆ ತಲುಪಿತ್ತು ಎನ್ನಲಾಗಿದೆ. ಆದರೆ ಕೆಲ ದಿನಗಳ ಹಿಂದೆ ಇಬ್ಬರ ನಡುವೆ ಕಲಹ ಉಂಟಾಗಿ, ಹಂಸರೇಖ ಆ ಯುವಕನನ್ನು ದೂರ ಇಡಲು ಆರಂಭಿಸಿದ್ದರು. ಇದರಿಂದ ಕೋಪಗೊಂಡ ಯುವಕ, ಹಂಸರೇಖ ಅವರೊಂದಿಗೆ ನಡೆದಿದ್ದ ಫೋನ್ ಸಂಭಾಷಣೆಯ ಆಡಿಯೋವನ್ನು ಆಕೆಯ ಸಂಬಂಧಿಕರಿಗೆ ಕಳುಹಿಸಿದ್ದಾನೆ ಎನ್ನಲಾಗಿದೆ.

ಈ ವಿಚಾರ ತಿಳಿದ ಹಂಸರೇಖ ಅವರ ಅಣ್ಣ ಯುವಕನಿಗೆ ಕರೆ ಮಾಡಿ ಎಚ್ಚರಿಕೆ ನೀಡಿದ್ದರು. ಇದರಿಂದ ಮಾನಸಿಕವಾಗಿ ಕುಗ್ಗಿಹೋದ ಹಂಸರೇಖ, ತೀವ್ರ ನಿರಾಶೆಗೆ ಒಳಗಾಗಿ ತನ್ನ ಎಂಟು ವರ್ಷದ ಪುತ್ರ ಗುರುವನ್ನೊಂದಿಗೆ ಕಳ್ಳೆಂಬಳ್ಳ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹಂಸರೇಖ ಇಬ್ಬರೂ ಮಕ್ಕಳನ್ನೂ ಕರೆದುಕೊಂಡು ಕೆರೆಗೆ ತೆರಳಿದ್ದರು ಎನ್ನಲಾಗಿದೆ. ಈ ವೇಳೆ “ನಾವು ಸಾಯೋಣ” ಎಂದು ಮಕ್ಕಳಿಗೆ ಹೇಳಿದ್ದರಿಂದ ಭಯಗೊಂಡ ಹಿರಿಯ ಮಗ ತಕ್ಷಣ ಕಳ್ಳೆಂಬಳ್ಳ ಬಸ್‌ಸ್ಟಾಂಡ್‌ಗೆ ಓಡಿ ಬಂದು ಅತ್ತೆ ಯಶೋಧ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಆದರೆ ಕುಟುಂಬಸ್ಥರು ಸ್ಥಳಕ್ಕೆ ತಲುಪುವಷ್ಟರಲ್ಲಿ ಹಂಸರೇಖ ದುಡುಕಿನ ನಿರ್ಧಾರ ಕೈಗೊಂಡಿದ್ದರು.

ಈ ದುರ್ಘಟನೆಯಲ್ಲಿ ತಾಯಿ ಹಾಗೂ ಒಬ್ಬ ಮಗ ಪ್ರಾಣ ಕಳೆದುಕೊಂಡಿದ್ದು, ಮತ್ತೊಬ್ಬ ಮಗ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥನಾಗಿದ್ದಾನೆ. ಘಟನೆಗೆ ಕಾರಣವಾಗಿರುವ ಯುವಕ ಪತ್ತೆಯಾಗಿಲ್ಲ. ಆತನ ಮೊಬೈಲ್ ಸಂಖ್ಯೆ ಹೊರತುಪಡಿಸಿ ಹೆಚ್ಚಿನ ಮಾಹಿತಿ ಪೊಲೀಸರಿಗೆ ಲಭ್ಯವಾಗಿಲ್ಲ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಯುವಕನ ಬಂಧನಕ್ಕಾಗಿ ಬಲೆ ಬೀಸಿದ್ದು, ತನಿಖೆ ಮುಂದುವರಿದಿದೆ.

WhatsApp Group Join Now

Spread the love

Leave a Reply