ನಾಲ್ವರು ಸಾಲಗಾರರು ತಾವು ನೀಡಿರುವ ಸಾಲವನ್ನು ಮರುಪಾವತಿಸಲು ರೈತನೊಬ್ಬನ ಕಿಡ್ನಿ ಮಾರಾಟ ಮಾಡುವಂತೆ ಒತ್ತಾಯಿಸಿದ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ನಾಗಭಿಡ್‌ನ ಮಿಂಥೂರ್ ಗ್ರಾಮದಲ್ಲಿ ನಡೆದಿದೆ.
ಈ ವಿಷಯ ಬಹಿರಂಗವಾದ ಬಳಿಕ, ಪೊಲೀಸರು ತನಿಖೆ ಆರಂಭಿಸಿದ್ದು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬ್ರಹ್ಮಪುರಿ ಪೊಲೀಸ್ ಠಾಣೆಯಲ್ಲಿ ಸಾಲಗಾರರ ವಿರುದ್ಧ ಸುಲಿಗೆ ಆರೋಪ ಮತ್ತು ಮಹಾರಾಷ್ಟ್ರ ಹಣ ಸಾಲ (ನಿಯಂತ್ರಣ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಂತ್ರಸ್ತ ರೋಷನ್ ಸದಾಶಿವ್ ಕುಡೆ ನಾಲ್ಕು ಎಕರೆ ತೋಟವನ್ನು ಹೊಂದಿದ್ದರು. ಈ ನಡುವೆ ಕೃಷಿಯಲ್ಲಿ ನಿರೀಕ್ಷೆಯಷ್ಟು ಆದಾಯ ಬರದಿದ್ದಾಗ ಸಂಸಾರದ ಬಂಡಿ ಸಾಗಿಸಲು ಆ ವ್ಯಕ್ತಿ 2021 ರಲ್ಲಿ ನಾಲ್ಕು ಜನ ಸ್ಥಳೀಯರಿಂದ ಶೇ 40 ರಷ್ಟು ಬಡ್ಡಿದರದಲ್ಲಿ 1 ಲಕ್ಷ ರೂ. ಸಾಲ ಪಡೆದು ಹಸುಗಳನ್ನು ಖರೀದಿಸಿ ಡೈರಿ ವ್ಯವಹಾರವನ್ನು ಪ್ರಾರಂಭಿಸುತ್ತಾನೆ. ಅವನ ದುರದೃಷ್ಟಕ್ಕೆ ಖರೀದಿಸಿದ ಹಸುಗಳು ಸತ್ತವು, ಇದರಿಂದಾಗಿ ಅವರ ಸಾಲ ಹೊರೆ ಹೆಚ್ಚಾಯಿತು.
ಜಮೀನು, ಟ್ರ್ಯಾಕ್ಟರ್ ಮಾರಾಟ
ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸಲು ಸಾಧ್ಯವಾಗದ ಕಾರಣ, ಸಾಲಗಾರರು ಬಡ್ಡಿ ಮತ್ತು ದೈನಂದಿನ ದಂಡವನ್ನು ವಿಧಿಸಿದರು. ಆರಂಭಿಕ 1 ಲಕ್ಷ ರೂ ಸಾಲ ಕ್ರಮೇಣ 74 ಲಕ್ಷ ರೂ.ಗಳಿಗೆ ಏರಿಕೆಯಾಯಿತು. ಸಾಲ ನೀಡಿದವರು ಪದೇ ಪದೇ ಮನೆಗೆ ಭೇಟಿ ನೀಡಲು ಪ್ರಾರಂಭಿಸಿದರು. ಸಾಲವನ್ನು ತೀರಿಸುವ ಪ್ರಯತ್ನವಾಗಿ ಆ ಬಡ ರೈತ ತಮ್ಮ ಜಮೀನಿನಲ್ಲಿ ಒಂದು ಭಾಗ ಮತ್ತು ಟ್ರ್ಯಾಕ್ಟರ್ ಮತ್ತು ಕೆಲ ವಸ್ತುಗಳನ್ನು ಮಾರಿದರು ಸಾಲ ತೀರಿಸಲಾಗಲಿಲ್ಲ.
ಕಿಡ್ನಿ ಪಣಕ್ಕಿಟ್ಟ ರೈತ
ಸಾಲ ನೀಡಿದವನೊಬ್ಬ ಸಂತ್ರಸ್ತ ಕುಡೆ ಅವರ ಮೂತ್ರಪಿಂಡವನ್ನು ಮಾರಾಟ ಮಾಡುವಂತೆ ಒತ್ತಾಯಿಸಿದ್ದಾನೆಂದು ವರದಿಯಾಗಿದೆ. ಕುಡೆ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಕೋಲ್ಕತ್ತಾಗೆ ಕರೆದೊಯ್ದರು, ಬಳಿಕ ಕಾಂಬೋಡಿಯಾದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಯಿತು ಮತ್ತು ಅವನು ತನ್ನ ಮೂತ್ರಪಿಂಡವನ್ನು ಮಾರಾಟ ಮಾಡಿ, ಅದಕ್ಕೆ ಪ್ರತಿಯಾಗಿ 8 ಲಕ್ಷ ರೂ ಪಡೆದುಕೊಂಡನು. ರೈತ ಕುಡೆ 2021 ರ ಏಪ್ರಿಲ್‌ನಲ್ಲಿ ಸಾಲ ಪಡೆದಿದ್ದ ಎಂದು ಚಂದ್ರಾಪುರ ಪೊಲೀಸ್ ವರಿಷ್ಠಾಧಿಕಾರಿ ಸುದರ್ಶನ್ ಮುಮಕ್ಕ ಮಾಹಿತಿ ನೀಡಿದ್ದು, ಸಾಲದ ಮೇಲಿನ ಬಡ್ಡಿಯನ್ನು ಹೆಚ್ಚಿಸಲಾಯಿತು. ಮತ್ತು ಮೂರು ವರ್ಷಗಳ ಕಾಲ ನಿರಂತರವಾಗಿ ಕಂತುಗಳನ್ನು ಮರುಪಾವತಿಸಿದರೂ,ಕಳೆದ ವರ್ಷ ಅಕ್ಟೋಬರ್‌ನಲ್ಲಿ ತನ್ನ ಮೂತ್ರಪಿಂಡವನ್ನು ಮಾರಾಟ ಮಾಡಲು ಒತ್ತಾಯಿಸಲಾಯಿತು. ಇದೇ ವಿಷಯವಾಗಿ ಸದ್ಯ ಸಾಲದಾತರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಹೇಳಿದರು.
ಅಕ್ರಮ ಸಾಲ ನೀಡಿದ ಆರೋಪ ಎದುರಿಸುತ್ತಿರುವ ಆರೋಪಿಗಳಾದ ಕಿಶೋರ್ ಬವಾಂಕುಲೆ, ಮನೀಶ್ ಘಟ್‌ಬಂಧೆ, ಲಕ್ಷ್ಮಣ್ ಉರ್ಕುಡೆ, ಪ್ರದೀಪ್ ಬವಾಂಕುಲೆ, ಸಂಜಯ್ ಬಲ್ಲಾರ್‌ಪುರೆ ಮತ್ತು ಸತ್ಯವಾನ್ ಬೋರ್ಕರ್ ಸೇರಿದ್ದಾರೆ ಎನ್ನಲಾಗಿದೆ
ಸಾಲ ತೀರಿಸಲು ಕಿಡ್ನಿ ಮಾರಾಟ.! ತೆಗೆದುಕೊಂಡಿದ್ದ 1 ಲಕ್ಷ ಸಾಲ ನಾಲ್ಕು ವರ್ಷದಲ್ಲೇ 74 ಲಕ್ಷಕ್ಕೆ ಏರಿಕೆಯಾಗಿದ್ದು ಹೇಗೆ..?
WhatsApp Group
Join Now