ಬಸ್‌ಗಳಲ್ಲಿ ಲಗೇಜ್ ಹೊರತುಪಡಿಸಿ ಬೇರೆ ಸಾಮಾನು ಸಾಗಾಟಕ್ಕೆ ನಿಷೇಧ: ಸಾರಿಗೆ ಸಚಿವ ರಾಮಲಿಂಗ ರೆಡ್ಡಿ

Spread the love

ರಾಮಲಿಂಗಾರೆಡ್ಡಿ ಕರ್ನೂಲ್‌ನಲ್ಲಿ ಖಾಸಗಿ ಬಸ್ಸಿನ ಬೆಂಕಿ ದುರಂತದ ನಂತರ ರಾಜ್ಯದಲ್ಲಿಯೂ ಬಸ್ಸುಗಳಲ್ಲಿ ಪ್ರಯಾಣಿಕರ ಲಗೇಜ್, ವಸ್ತುಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸಾಮಾನುಗಳ ಸಾಗಾಟಕ್ಕೆ ಅವಕಾಶವಿಲ್ಲ ಎಂದು ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಬೆಂಕಿ ದುರಂತಕ್ಕೊಳಗಾದ ಬಸ್ಸಿನಲ್ಲಿ ಹೆಚ್ಚು ಲಗೇಜ್ ಹಾಕಿದ್ದ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ರಾಜ್ಯ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಸುದ್ದಿಗಾರರಿಗೆ ತಿಳಿಸಿದರು.

ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ. 2013ರಲ್ಲಿ ನಾನು ಸಾರಿಗೆ ಸಚಿವನಾಗಿದ್ದೆ, ಆಗ ಹಾವೇರಿಯಲ್ಲೂ ಇದೇ ರೀತಿ ಅಪಘಾತವಾಗಿತ್ತು. ಆಗ ಎಮರ್ಜೆನ್ಸಿ ಎಕ್ಸಿಟ್ ಇರಲಿಲ್ಲ, ಲಕ್ಷುರಿ ಬಸ್ಸುಗಳಲ್ಲೂ ಗ್ಲಾಸ್ ಒಡೆದು ಆಚೆಗೆ ಬರಬೇಕಾದ ಪರಿಸ್ಥಿತಿ ಇತ್ತು, ಈಗ ಸಾರಿಗೆ ಇಲಾಖೆಯ 25000 ಬಸ್ಸುಗಳು ಸೇರಿ ಎಲ್ಲಾ ಖಾಸಗಿ ಮತ್ತು ಶಾಲಾ ಬಸ್ಸುಗಳಿಗೆ ಎಮರ್ಜೆನ್ಸಿ ಎಕ್ಸಿಟ್ ಇದೆ ಎಂದರು.

ರಾಜ್ಯದಲ್ಲಿ ಗ್ಯಾರಂಟಿ ಶಕ್ತಿ ಯೋಜನೆ ಯಾವುದೇ ಕಾರಣಕ್ಕೂ ಬಂದ್ ಆಗುವುದಿಲ್ಲ, ಈ ಯೋಜನೆಯಿಂದ ರಾಜ್ಯದ ಮಹಿಳೆಯರಿಗೆ ಉಪಯೋಗವಾಗುತ್ತಿದೆ, ಆದ್ದರಿಂದ ಬಂದ್ ಮಾಡುವ ಯೋಚನೆ ಇಲ್ಲ ಎಂದರು. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ, ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂಬ ಬಿಜೆಪಿ ಹೇಳಿಕೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಾನು ಬಯಸುವುದಿಲ್ಲವೆಂದರು.

900 ಹೊಸ ಬಸ್‌ ಖರೀದಿ

ಕೋವಿಡ್ ಸಂದರ್ಭಗಳಲ್ಲಿ ದೀರ್ಘ ಮಾರ್ಗದ ಬಸ್‌ಗಳನ್ನು ನಿಲ್ಲಿಸಲಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಐಶಾರಾಮಿ ಬಸ್‌ಗಳನ್ನು ಖರೀದಿಸಿಲ್ಲ. ಈಗ 70 ಬಸ್‌ಗಳ ಟೆಂಡರ್ ಪ್ರಕ್ರಿಯೆ ಮುಗಿದಿವೆ. ತಿಂಗಳೊಳಗೆ ಬಸ್‌ಗಳು ಇಲಾಖೆಗೆ ದೊರೆಯುತ್ತವೆ ಎಂದು ಸಿಎಂ ತಿಳಿಸಿದ್ದಾರೆ. ಈ ಪೈಕಿ ಮಂಗಳೂರಿಗೆ ಆದ್ಯತೆ ಕೊಡುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ರಾಜ್ಯ ಸಾರಿಗೆ ನಿಗಮ ಮಂಗಳೂರು ವಿಭಾಗದದಿಂದ ಬೈಂದೂರಿನಲ್ಲಿ ನೂತವಾಗಿ ನಿರ್ಮಿಸಲಾದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದರು. 900 ಹೊಸ ಬಸ್‌ಗಳನ್ನು ಖರೀದಿಸಲಿದ್ದು, 15 ಜಿಲ್ಲೆಗಳಲ್ಲಿ ಉಡುಪಿ, ದ.ಕ ಗೆ ಆದ್ಯತೆ ಮೇಲೆ ಕೊಡುತ್ತೇವೆ ಎಂದರು.

ಉಪ್ಪು ನೀರಿನ ಕಾರಣದಿಂದಾಗಿ ಕಟ್ಟಡ ಕಾಮಗಾರಿ ವಿಳಂಬವಾಗಿದೆ. ಈ ಬಗ್ಗೆ ಗುರುರಾಜ್ ಗಂಟಿಹೊಳೆ, ಮಂಜುನಾಥ್ ಭಂಡಾರಿ, ಗೋಪಾಲ ಪೂಜಾರಿ ನನ್ನ ಗಮನಕ್ಕೆ ತರುತ್ತಲೇ ಇದ್ದರು. ನೀರು ಸಿಕ್ಕಿದ್ದರೆ ಬಸ್ ನಿಲ್ದಾಣ ಅಂದೇ ಉದ್ಘಾಟನೆಯಾಗುತ್ತಿತ್ತು. ಉದ್ಘಾಟನೆ ಅಲ್ಪ ವಿಳಂಬವಾದರೂ ಕೂಡ ಮೂಲಸೌಕರ್ಯಗಳೊಂದಿಗೆ ಉದ್ಘಾಟನೆಗೊಂಡು ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದರು. ಹೆದ್ದಾರಿಯಿಂದ ಡಿವೈಡರ್ ತೆರವುಗೊಳಿಸಿ ನೇರವಾಗಿ ಬಸ್‌ಗಳು ನಿಲ್ದಾಣ ಪ್ರವೇಶಿಸಲು ಜಿಲ್ಲಾಧಿಕಾರಿ ಹಾಗೂ ಲೋಕೋಪಯೋಗಿ ಸಚಿವರೊಂದಿಗೆ ಮಾತುಕತೆ ನಡೆಸುತ್ತೇನೆ. ಕೆಎಸ್‌ಆರ್‌ಟಿಸಿ ನೂತನ ಬಸ್ ಡಿಪೋಗೆ ಜಾಗ ಕಾಯ್ದಿರಿಸಲಾಗಿದ್ದು, ಎಲ್ಲರ ಮನವಿಯಂತೆ ಡಿಪೋ ನಿರ್ಮಾಣವನ್ನು ಮಾಡಿಕೊಡುತ್ತೇವೆ. ನೂತನ ಬಸ್ ನಿಲ್ದಾಣಕ್ಕೆ ಕೊಲ್ಲೂರು ಮೂಕಾಂಬಿಕಾ ದೇವರ ಹೆಸರು ಇಡುವ ಕುರಿತು ಪ್ರಸ್ತಾಪಗಳಿದ್ದು, ಈ ಬಗ್ಗೆ ಸಾರಿಗೆ ನಿಗಮದ ಅಧ್ಯಕ್ಷ ಎಸ್.ಆರ್ ಶ್ರೀನಿವಾಸ್ ಅವರಲ್ಲಿ ಮಾತನಾಡುತ್ತೇನೆ ಎಂದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಜನರ ಬೇಡಿಕೆಗಳನ್ನು ಈಡೇರಿಸಬೇಕಾದದ್ದು ಜನಪ್ರತಿನಿಧಿಗಳ ಕರ್ತವ್ಯ. ಇದನ್ನು ಯಾರೇ ಮಾಡಿದರೂ ಸರ್ಕಾರದ ಕೆಲಸವೆಂದು ಮಾಡಬೇಕು. ಕೆಎಸ್ ಆರ್‌ಟಿಸಿ ಬಸ್ ನಿಲ್ದಾಣದ ಕಟ್ಟಡ ನಿರ್ಮಾಣದ ಬಳಿಕ ರಾ. ಹೆದ್ದಾರಿ ನಿರ್ಮಾಣವಾಗಿತ್ತು. ಆ ಸಂದರ್ಭದಲ್ಲಿ ನಿಲ್ದಾಣದ ಎದುರು ಬಸ್ ಪ್ರವೇಶ ನೀಡಲು ಅವಕಾಶ ಮಾಡಿಕೊಡುವ ಕನಿಷ್ಠ ಜ್ಞಾನವೂ ಅಧಿಕಾರಿಗಳಿಗೆ ಇರಲಿಲ್ಲ. ನಿಲ್ದಾಣದ ಎದುರು ರಸ್ತೆ ವಿಭಜಕ ತೆರವುಗೊಳಿಸುವ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಇಲ್ಲವಾದಲ್ಲಿ ಜನರೇ ಆ ಕೆಲಸ ಮಾಡುತ್ತಾರೆ. ರಾಜಕಾರಣ ಚುನಾವಣಾ ಸಮಯದಲ್ಲಿ ಮಾತ್ರ ಮಾಡಬೇಕು. ಊರಿನ ಅಭಿವೃದ್ದಿಗೆ ಪಕ್ಷ ಭೇದ ಮರೆತು ಒಂದಾಗೋಣ ಎಂದರು.

WhatsApp Group Join Now

Spread the love

Leave a Reply