ಮೂತ್ರಪಿಂಡ (ಕಿಡ್ನಿ) ಮಾನವ ದೇಹದ ಅತ್ಯಂತ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ದೇಹದಲ್ಲಿನ ಬೇಡದ ತ್ಯಾಜ್ಯಗಳನ್ನು ಮೂತ್ರದ ಮೂಲಕ ಹೊರಹಾಕುವುದು, ರಕ್ತದಲ್ಲಿನ ಕಲ್ಮಶವನ್ನು ಶೋಧಿಸುವುದು ಹಾಗೂ ದೇಹದ ದ್ರವ ಸಮತೋಲನವನ್ನು ಕಾಪಾಡುವುದು ಇದರ ಪ್ರಮುಖ ಕಾರ್ಯಗಳಾಗಿವೆ.
ಆದರೆ ಕಿಡ್ನಿ ದುರ್ಬಲವಾದರೆ ದೇಹದ ವಿವಿಧ ಅಂಗಗಳಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕೆಲ ಸಂದರ್ಭಗಳಲ್ಲಿ ವ್ಯಕ್ತಿಗಳು ಒಂದು ಕಿಡ್ನಿಯನ್ನು ಕಳೆದುಕೊಳ್ಳುವ ಪರಿಸ್ಥಿತಿಗೂ ತಲುಪುತ್ತಾರೆ.
ಸಾಮಾನ್ಯವಾಗಿ ಮಾನವನ ದೇಹದಲ್ಲಿ ಎರಡು ಮೂತ್ರಪಿಂಡಗಳಿರುತ್ತವೆ. ಆದರೆ ಕಿಡ್ನಿ ದಾನ, ಅಪಘಾತ ಅಥವಾ ವಿವಿಧ ಕಾಯಿಲೆಗಳ ಕಾರಣದಿಂದ ಕೆಲವರು ಒಂದೇ ಕಿಡ್ನಿಯೊಂದಿಗೆ ಜೀವನ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ “ಒಬ್ಬ ವ್ಯಕ್ತಿ ಒಂದೇ ಕಿಡ್ನಿಯಲ್ಲಿ ಎಷ್ಟು ಕಾಲ ಬದುಕಬಹುದು?” ಎಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿ ಮೂಡುತ್ತದೆ.
ವೈದ್ಯರ ಪ್ರಕಾರ, ಉಳಿದಿರುವ ಕಿಡ್ನಿ ಸಂಪೂರ್ಣ ಆರೋಗ್ಯಕರವಾಗಿದ್ದರೆ ವ್ಯಕ್ತಿಯು ಸಾಮಾನ್ಯ ಜೀವನವನ್ನು ನಡೆಸಬಹುದು. ಒಂದೇ ಕಿಡ್ನಿ ಇದ್ದರೂ ಅದು ಎರಡೂ ಕಿಡ್ನಿಗಳು ಮಾಡುವ ಕೆಲಸವನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರುತ್ತದೆ. ಹೀಗಾಗಿ ಇಂತಹವರು ದೀರ್ಘಕಾಲ ಬದುಕಬಹುದು ಮತ್ತು ಸಾಮಾನ್ಯ ಜೀವನಶೈಲಿಯನ್ನೇ ಅನುಸರಿಸಬಹುದು.
ಆದರೆ ಒಂದೇ ಕಿಡ್ನಿಯೊಂದಿಗೆ ಬದುಕುವವರು ಕೆಲ ವಿಷಯಗಳಲ್ಲಿ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಒಂದು ಕಿಡ್ನಿಯ ಮೇಲೆ ಹೆಚ್ಚಿದ ಒತ್ತಡ ಇರುವುದರಿಂದ ಅಧಿಕ ರಕ್ತದೊತ್ತಡದ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡುವುದು ಬಹಳ ಮುಖ್ಯ.
ಮೂತ್ರಪಿಂಡಗಳ ಆರೋಗ್ಯಕ್ಕಾಗಿ ಸಾಕಷ್ಟು ನೀರು ಕುಡಿಯುವುದು ಅಗತ್ಯ. ದೇಹದಲ್ಲಿ ನೀರಿನ ಕೊರತೆ ಉಂಟಾದರೆ ಕಿಡ್ನಿಗಳ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ಅಪಘಾತಗಳು ಅಥವಾ ಗಂಭೀರ ಗಾಯಗಳು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು.
ಇದಲ್ಲದೆ, ನಿಯಮಿತ ವೈದ್ಯಕೀಯ ತಪಾಸಣೆಗಳು ಅತ್ಯಗತ್ಯ. ರಕ್ತ ಮತ್ತು ಮೂತ್ರ ಪರೀಕ್ಷೆಗಳ ಜೊತೆಗೆ GFR (ಗ್ಲೋಮೆರೂಲರ್ ಫಿಲ್ಟ್ರೇಶನ್ ರೇಟ್) ಪರೀಕ್ಷೆಯನ್ನು ಆರು ತಿಂಗಳು ಅಥವಾ ವರ್ಷಕ್ಕೊಮ್ಮೆ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡುತ್ತಾರೆ.
ಒಟ್ಟಾರೆ, ಸೂಕ್ತ ಜಾಗ್ರತೆ ಮತ್ತು ಆರೋಗ್ಯಕರ ಜೀವನಶೈಲಿಯೊಂದಿಗೆ ಒಂದೇ ಕಿಡ್ನಿಯಲ್ಲೂ ವ್ಯಕ್ತಿ ದೀರ್ಘಕಾಲ ಆರೋಗ್ಯಕರವಾಗಿ ಬದುಕಬಹುದು.
ಒಂದೇ ಕಿಡ್ನಿಯಲ್ಲಿ ಬದುಕುವುದು ಸಾಧ್ಯವೇ.? ಎಷ್ಟು ವರ್ಷ ಜೀವನ ನಡೆಸಬಹುದು.? ಇಲ್ಲಿದೆ ಉತ್ತರ.!
WhatsApp Group
Join Now