ಜಗತ್ತಿನಲ್ಲಿ ಅದೆಷ್ಟೋ ಲವ್ ಸ್ಟೋರಿ ಹೊಂದಿರುವ ಸಿನಿಮಾ, ಕಥೆ, ಕಾದಂಬರಿಗಳು ಬಂದಿವೆ. ಅಮರ ಪ್ರೇಮಿಗಳು ಎನಿಸಿಕೊಂಡಿರುವ ಕೆಲವು ಪಾತ್ರಗಳು ಶತಮಾನ ಕಳೆದ ಮೇಲೂ ಜನರನ್ನು ಕಾಡುತ್ತವೆ, ಕಣ್ಣಂಚಿನಲ್ಲಿ ಒಂದು ಹನಿ ನೀರು ಜಿನುಗುವಂತೆ ಮಾಡುತ್ತವೆ.
ಇಲ್ಲೊಂದು ನಿಜ ಲವ್ ಸ್ಟೋರಿ ಕೇಳಿದರೆ ಒಂದುಕ್ಷಣ ನೀವು ಭಾವುಕರಾಗುವುದು ಖಚಿತ. ಮಹಾರಾಷ್ಟ್ರದ ನಾಂದೇಡ್‌ನಲ್ಲಿ 20 ವರ್ಷದ ಯುವಕನನ್ನು ಜಾತಿಯ ಹೆಸರಿನಲ್ಲಿ ಥಳಿಸಿ, ಗುಂಡು ಹಾರಿಸಿ, ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದೆ (Maharashtra News). ಪ್ರಿಯಕರನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಪ್ರಿಯತಮೆ ಮೃತದೇಹದೊಂದಿಗೆ ಮದುವೆಯಾಗಿ, ಹಣೆಯ ಮೇಲೆ ಕುಂಕುಮ ಹಚ್ಚಿಕೊಂಡು, ಆತನ ಮನೆಯಲ್ಲೇ ಸೊಸೆಯಾಗಿ ವಾಸಿಸುವುದಾಗಿ ಪ್ರತಿಜ್ಞೆ ಮಾಡಿದ್ದಾಳೆ. ಸದ್ಯ ಇವರ ಈ ಲವ್ ಸ್ಟೋರಿ ನೋಡಿ ಹಲವರು ಕಣ್ಣೀರು ಮಿಡಿದಿದ್ದಾರೆ.
ಮೃತನನ್ನು ಸಕ್ಷಮ್ ಟೇಟ್ ಎಂದು ಗುರುತಿಸಲಾಗಿದೆ. ಆತನ ಪ್ರೇಯಸಿ ಆಂಚಲ್ ಇದೀಗ ಆತನ ನೆನಪಿನಲ್ಲೇ ಬದುಕುವುದಾಗಿ ಪಣ ತೊಟ್ಟಿದ್ದಾಳೆ. ವಿಶೇಷ ಎಂದರೆ ಆಂಚಲ್‌ಗೆ ತನ್ನ ಸಹೋದರರ ಮೂಲಕ ಸಕ್ಷಮ್ ಟೇಟ್‌ನ ಪರಿಚಯವಾಗಿತ್ತು. ಇದೀಗ ಅವರೇ ಸಕ್ಷಮ್ ಟೇಟ್‌ನ ಸಾವಿಗೆ ಕಾರಣವಾಗಿದ್ದಾರೆ.
ಘಟನೆ ವಿವರ
ಪರಸ್ಪರ ಪರಿಚಿತರಾದ ಆಂಚಲ್ ಮತ್ತು ಸಕ್ಷಮ್ ಟೇಟ್ ಮಧ್ಯೆ ಕ್ರಮೇಣ ಸ್ನೇಹ ಚಿಗುರಿತು. ಆಗಾಗ ಇವರು ಭೇಟಿಯಾಗುತ್ತಿದ್ದರು ಕೂಡ. ಬಳಿಕ ಇವರ ಸಂಬಂಧ ಇನ್ನಷ್ಟು ಗಟ್ಟಿಯಾಯಿತು. ಇವರ ಈ 3 ವರ್ಷಗಳ ಪ್ರೀತಿಗೆ ಇತ್ತೀಚೆಗೆ ಆಂಚಲ್‌ನ ಮನೆಯವರು ವಿರೋಧ ವ್ಯಕ್ತಪಡಿಸತೊಡಗಿದರು. ಅವರು ಬೇರೆ ಬೇರೆ ಜಾತಿಯವರಾದ ಕಾರಣ ಆಕೆಯ ಮನೆಯವರು ಅವರ ಮದುವೆಯನ್ನು ವಿರೋಧಿಸಿದರು. ಅದಾಗ್ಯೂ ಆಂಚಲ್ ಮತ್ತು ಟೇಟ್ ನಡುವಿನ ಪ್ರೀತಿ ಮುಂದುವರಿದೇ ಇತ್ತು.
ಆಂಚಲ್ ಸದ್ಯದಲ್ಲೇ ಟೇಟ್ ಜತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾಳೆ ಎಂಬ ವಿಚಾರ ಅದು ಹೇಗೊ ಆಕೆಯ ಸಹೋದರರ ಮೂಲಕ ತಂದೆಗೆ ತಿಳಿಯಿತು. ಆಕೆಯ ಮನೆಯವರೆಲ್ಲ ಸೇರಿ ಗುರುವಾರ (ನವೆಂಬರ್ 27) ಟೇಟ್ ಮೇಲೆ ಹಲ್ಲೆ ನಡೆಸಿ, ಅವನ ತಲೆಗೆ ಗುಂಡು ಹಾರಿಸಿ, ತಲೆಯನ್ನು ಕಲ್ಲಿನಿಂದ ಪುಡಿಪುಡಿ ಮಾಡಿ ಕೊಲೆಗೈದರು.
ಟೇಟ್‌ನ ಕೊಲೆಯಾಗಿದ್ದು ತಿಳಿದು ಆಂಚಲ್ ಕುಸಿದು ಬಿದ್ದಳು. ಕೊನೆಗೆ ಅಂತ್ಯಕ್ರಿಯೆ ನಡೆಯುತ್ತಿದ್ದ ಆತನ ಮನೆಗೆ ತೆರಳಿದಳು. ಮುಂದೆ ನಡೆದಿದ್ದು ಅಲ್ಲಿ ನೆರೆದವರ ಕಣ್ಣಂಚನ್ನು ಒದ್ದೆ ಮಾಡುವ ಭಾವುಕ ಕ್ಷಣ. ತನ್ನ ಪ್ರಿಯತಮನ ಮೃತದೇಹದ ಬಳಿಗೆ ಬಂದ ಆಂಚಲ್ ಆತನಿಗೆ ಅರಶಿನ ಲೇಪಿಸಿ ತನ್ನ ಹಣೆಗೆ ಕುಂಕುಮ ಹಚ್ಚಿಕೊಂಡಳು. ಆ ಮೂಲಕ ಮೃತದೇಹದೊಂದಿಗೆ ಮದುವೆಯಾದಳು. ಇನ್ನು ಮುಂದಿನ ಜೀವನವನ್ನು ಆತನ ಪತ್ನಿಯಾಗಿ ಅಲ್ಲೇ ಕಳೆಯಲು ನಿರ್ಧರಿಸಿದಳು. ʼʼನಮ್ಮ ಪ್ರೀತಿ ಗೆದ್ದಿದೆ. ನನ್ನ ತಂದೆ ಮತ್ತು ಸಹೋದರರು ಸೋತು ಹೋಗಿದ್ದಾರೆʼʼ ಎಂದು ಆಕೆ ಹೇಳಿದ್ದಾಳೆ. ಅಲ್ಲದೆ ಟೇಟ್‌ನನ್ನು ಕೊಂದವರಿಗೆ ಮರಣ ದಂಡನೆ ನೀಡಬೇಕೆಂದು ಆಗ್ರಹಿಸಿದ್ದಾಳೆ. ಟೇಟ್ ಮೃತಪಟ್ಟರೂ ತಮ್ಮ ಪ್ರೀತಿ ಶಾಶ್ವತ ಎಂದು ಸಾರಿದ್ದಾಳೆ.
ಪೊಲೀಸರು ಈಗಾಗಲೇ 6 ಮಂದಿಯ ವಿರುದ್ಧ ದೂರು ದಾಖಲಿಸಿ ಅವರನ್ನು ಬಂಧಿಸಿದ್ದಾರೆ. ಸದ್ಯ ಈ ಘಟನೆ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದು, ಟೇಟ್‌ನ ಕೊಲೆಗಾರರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಹಲವರು ಆಗ್ರಹಿಸಿದ್ದಾರೆ.
ಜಾತಿಯ ಕಾರಣಕ್ಕೆ ಕೊಲೆಗೀಡಾದ ಪ್ರಿಯಕರನನ್ನೇ ವರಿಸಿದ ಯುವತಿ : ಮನ ಕಲುಕುವ ಲವ್ ಸ್ಟೋರಿ ಇಲ್ಲಿದೆ
WhatsApp Group
Join Now