ನಟಿ ಆಶಿಕಾ ರಂಗನಾಥ್ ಅವರ ಸಂಬಂಧಿ, ಇಂಜಿನಿಯರಿಂಗ್ ಪದವೀಧರೆ ಅಚಲಾ ಬೆಂಗಳೂರಿನಲ್ಲಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಪ್ರೀತಿಸಿದ ಯುವಕ ಮಯಾಂಕ್ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದೇ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದು, ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ.
ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಆಶಿಕಾ ರಂಗನಾಥ್ ಅವರ ಸಂಬಂಧಿಯಾಗಿರುವ ಯುವತಿಯೊಬ್ಬಳು ಪ್ರೀತಿಸಿದ ಯುವಕನಿಂದ ದೈಹಿಕ ಮತ್ತು ಮಾನಸಿಕ ಕಿರುಕುಳಕ್ಕೆ ಬೇಸತ್ತು ಆತ್ಮ*ಹತ್ಯೆ ಮಾಡಿಕೊಂಡಿರುವ ದುರ್ಘಟನೆ ವರದಿಯಾಗಿದೆ. ಘಟನೆ ನಡೆದು 10 ದಿನಗಳು ಕಳೆದರೂ ಆರೋಪಿಗಳನ್ನು ಬಂಧಿಸದಿರುವುದು ಯುವತಿಯ ಪೋಷಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಹಾಸನ ಮೂಲದ, ನಟಿ ಆಶಿಕಾ ರಂಗನಾಥ್ ಅವರ ಮಾವನ ಮಗಳಾದ ಅಚಲಾ (22) ಆತ್ಮ*ಹತ್ಯೆಗೆ ಶರಣಾದ ಯುವತಿ. ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರುವ ತಯಾರಿಯಲ್ಲಿದ್ದ ಅಚಲಾ, ನವೆಂಬರ್ 21ರಂದು ಬೆಂಗಳೂರಿನ ಪಾಂಡುರಂಗ ನಗರದ ಸಂಬಂಧಿಕರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಅಚಲಾ ಅವರು ತಮ್ಮ ದೂರದ ಸಂಬಂಧಿ, ಹಾಸನ ನಗರದ ನಿವಾಸಿಯಾದ ಮಯಾಂಕ್ ಎಂಬಾತನೊಂದಿಗೆ ಸ್ನೇಹ ಹೊಂದಿದ್ದರು. ಮಯಾಂಕ್ ಪ್ರೀತಿಸುವ ನಾಟಕವಾಡಿ, ಮದುವೆಯಾಗುವುದಾಗಿ ನಂಬಿಸಿ ಅಚಲಾ ಅವರನ್ನು ಸುತ್ತಾಡಿಸಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ. ಅಲ್ಲದೆ, ಮದುವೆಗೂ ಮುನ್ನವೇ ದೈಹಿಕ ಸಂಬಂಧಕ್ಕೆ ಪದೇ ಪದೇ ಪೀಡಿಸಿದ್ದಾನೆ ಎನ್ನಲಾಗಿದೆ.
ಪ್ರೇಮಿಯಿಂದ ದೈಹಿಕ ಸಂಪರ್ಕದ ಒತ್ತಾಯಕ್ಕೆ ಅಚಲಾ ಒಪ್ಪದಿದ್ದಾಗ, ಆರೋಪಿ ಮಯಾಂಕ್ ಆಕೆಗೆ ದೈಹಿಕ ಹಲ್ಲೆ ಮತ್ತು ಮಾನಸಿಕ ಕಿರುಕುಳ ನೀಡಲು ಆರಂಭಿಸಿದ್ದಾನೆ. ಈತ ಡ್ರಗ್ ಅಡಿಕ್ಟ್ ಕೂಡ ಆಗಿದ್ದ ಎಂದು ಆರೋಪಿಸಲಾಗಿದ್ದು, ಪದೇ ಪದೇ ಫೋನ್‌ಮಾಡಿ ಕಿರುಕುಳ ನೀಡುತ್ತಿದ್ದರಿಂದಲೇ ಮಗಳು ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ಯುವತಿಯ ತಾಯಿ ಕಣ್ಣೀರು ಹಾಕಿದ್ದಾರೆ.
ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಯಾಂಕ್ ಹಾಗೂ ಆತನ ತಾಯಿ ಮೈನಾ ವಿರುದ್ಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ಘಟನೆ ನಡೆದು 10 ದಿನಗಳೇ ಕಳೆದರೂ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ. ನನ್ನ ಮಗಳ ಸಾವಿಗೆ ಕಾರಣರಾದವರನ್ನು ಕೂಡಲೇ ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕು’ ಎಂದು ಅಚಲಾ ಅವರ ಪೋಷಕರು ಪೊಲೀಸರನ್ನು ಒತ್ತಾಯಿಸಿದ್ದಾರೆ.
ಮೃತ ಅಚಲಾ ಅವರು ನಟಿ ಆಶಿಕಾ ರಂಗನಾಥ್ ಅವರ ಮಾವನ ಮಗಳಾಗಿದ್ದರಿಂದ, ಈ ಪ್ರಕರಣವು ಮತ್ತಷ್ಟು ಮಹತ್ವ ಪಡೆದಿದೆ. ಅಮಾಯಕ ಯುವತಿಯ ಸಾವಿಗೆ ನ್ಯಾಯ ಒದಗಿಸಲು ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕಿದೆ. ಪ್ರೀತಿಯ ಹೆಸರಿನಲ್ಲಿ ವಂಚಿಸಿ, ಯುವತಿಯ ಜೀವಕ್ಕೆ ಕುತ್ತು ತಂದಿರುವ ಆರೋಪಿಗಳ ಬಂಧನ ಯಾವಾಗ ಎಂಬುದು ಈಗ ಎಲ್ಲರ ಪ್ರಶ್ನೆಯಾಗಿದೆ.
ನಟಿ ಆಶಿಕಾ ರಂಗನಾಥ್ ಮಾವನ ಮಗಳಿಗೆ ‘ಲೈಂಗಿಕ ಕಿರುಕುಳ.! ಯುವಕನಿಂದ ಬೇಸತ್ತು ಯುವತಿ ಆತ್ಮಹತ್ಯೆಗೆ ಶರಣು!
WhatsApp Group
Join Now