ಪೈಲಟ್‌ಗೆ ಅಂತಿಮ ವಿದಾಯ ; ಸಮವಸ್ತ್ರ ತೊಟ್ಟು, ಕಣ್ಣೀರು ಹಾಕುತ್ತ ಪತಿಗೆ ಸೆಲ್ಯೂಟ್‌ ಹೊಡೆದ ಪತ್ನಿ

Spread the love

ದುಬೈ ಏರ್‌ ಶೋ ವೇಳೆ ಶುಕ್ರವಾರ ತೇಜಸ್‌ ಯುದ್ಧ ವಿಮಾನ ಪತನಗೊಂಡು ಮೃತಪಟ್ಟಿದ್ದ ಭಾರತೀಯ ವಾಯುಪಡೆಯ ವಿಂಗ್‌ ಕಮಾಂಡರ್‌ ಪೈಲಟ್‌ ನಮಾಂಶ್‌ ಸ್ಯಾಲ್ ಪಾರ್ಥೀವ ಶರೀರವನ್ನು ಸ್ವದೇಶಕ್ಕೆ ತರಲಾಗಿದೆ. ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ಶೋಕದ ಛಾಯೆ ಆವರಿಸಿತ್ತು.

ನಮಾಂಶ್‌ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ನೂರಾರು ಸ್ಥಳೀಯರು ಜಮಾಯಿಸಿದ್ದರು. ಈ ಸಂದರ್ಭ ಭಾರತೀಯ ವಾಯುಪಡೆಯಿಂದ ಗೌರವ ನಮನ ಸಲ್ಲಿಸಲಾಯಿತು. ವಾಯುಪಡೆಯ ಉನ್ನತ ಅಧಿಕಾರಿಗಳು ಮತ್ತು ಸಿಬ್ಬಂದಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ಸಕಲ ಸರ್ಕಾರಿ ಗೌರವಗಳು ಮತ್ತು ಕುಶಾಲತೋಪು ಹಾರಿಸಿದರು. ವಿಧಿವಿಧಾನಗಳ ಪ್ರಕಾರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು. ಕುಟುಂಬಸ್ಥರು, ಸ್ಥಳೀಯರು ಮತ್ತು ಅಧಿಕಾರಿಗಳು ಕಣ್ಣೀರು ಹಾಕುತ್ತಲೇ ವಿದಾಯ ಹೇಳಿದರು.

ಐಎಎಫ್‌ ಟ್ವೀಟ್‌ನಲ್ಲಿ ಏನಿದೆ?

ʻಅಚಲ ಬದ್ಧತೆ, ಅಸಾಧಾರಣ ಕೌಶಲ್ಯ ಮತ್ತು ಕರ್ತವ್ಯ ಪ್ರಜ್ಞೆ ಹೊಂದಿದ್ದ ಸಮರ್ಪಿತ ಫೈಟರ್ ಪೈಲಟ್ ಅವರನ್ನು ಕಳೆದುಕೊಂಡಿದ್ದೇವೆ. ಈ ದುಃಖದ ಸಮಯದಲ್ಲಿ ಭಾರತೀಯ ವಾಯುಪಡೆ ಅವರ ಕುಟುಂಬದೊಂದಿಗೆ ನಿಂತಿದೆ. ಅವರ ಧೈರ್ಯ ಮತ್ತು ತ್ಯಾಗವನ್ನು ಸ್ಮರಿಸುತ್ತೇವೆ ಎಂದು ಭಾರತೀಯ ವಾಯುಪಡೆ ಎಕ್ಸ್‌ನಲ್ಲಿ ಹಂಚಿಕೊಂಡಿದೆ
ಏನಿದು ಘಟನೆ?

ಶುಕ್ರವಾರ ಮಧ್ಯಾಹ್ನ ದುಬೈನ ಅಲ್ ಮಕ್ತುಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತೇಜಸ್ ಯುದ್ಧ ವಿಮಾನವು ಕಡಿಮೆ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದಾಗ ಪತನಗೊಂಡಿದೆ. ದೃಶ್ಯಾವಳಿಗಳ ಪ್ರಕಾರ, ವಿಮಾನವು ಹಠಾತ್ತನೆ ಎತ್ತರವನ್ನು ಕಳೆದುಕೊಂಡು ನೋಸ್‌ಡೈವಿಂಗ್‌ ಮುಖೇನ ನೆಲಕ್ಕೆ ಅಪ್ಪಳಿಸಿದೆ. ಕೂಡಲೇ ವಿಮಾನದಿಂದ ಬೆಂಕಿ ಸ್ಫೋಟಗೊಂಡಿದೆ. ನಂತರ ಅಲ್ಲಿಂದ ದಟ್ಟವಾದ ಕಪ್ಪು ಹೊಗೆ ಆವರಿಸಿತ್ತು.

49-52 ಸೆಕೆಂಡ್‌ಗಳ ದೃಶ್ಯದಲ್ಲಿ ಪ್ಯಾರಾಚೂಟ್‌ನಂತಹ ವಸ್ತು ಕ್ಷಣಕಾಲ ಕಾಣಿಸಿಕೊಂಡಿದ್ದು, ವಿಂಗ್ ಕಮಾಂಡರ್ ಸಿಯಾಲ್ ಅವರು ಕೊನೆಯ ಕ್ಷಣದಲ್ಲಿ ವಿಮಾನದಿಂದ ಹೊರಬರಲು ಪ್ರಯತ್ನಿಸಿರುವುದು ಕಂಡುಬಂದಿದೆ. ಆದರೆ ವಿಮಾನವು ತೀರಾ ಕಡಿಮೆ ಎತ್ತರದಲ್ಲಿದ್ದ ಕಾರಣ ಸುರಕ್ಷಿತವಾಗಿ ಹೊರಬರಲು ಸಾಧ್ಯವಾಗಲಿಲ್ಲ ಎಂದು ಶಂಕಿಸಲಾಗಿದೆ.

ಅಂತಿಮ ವಿಧಿವಿಧಾನ

ಶುಕ್ರವಾರ (ನ. 21) ದುಬೈನಲ್ಲಿ ನಡೆದ ವಿಮಾನ ಅಪಘಾತದಲ್ಲಿ ನಮಾಂಶ್‌ ಸಿಯಾಲ್ ಪ್ರಾಣ ಕಳೆದುಕೊಂಡಿದ್ದರು. ತೇಜಸ್‌ ವಿಮಾನ ದುರಂತದ ನಿಖರ ಕಾರಣ ತಿಳಿಯಲು ಐಎಎಫ್ ತನಿಖಾ ಸಮಿತಿಯನ್ನು ರಚಿಸಿದೆ.

2014ರಲ್ಲಿ 37 ವರ್ಷದ ವಿಂಗ್ ಕಮಾಂಡರ್ ನಮಾಂಶ್‌ ಅವರು ಪತ್ನಿ ಅಫ್ಸಾನ್ ಮದುವೆಯಾಗಿದ್ದರು. ಅವರಿಗೆ ಏಳು ವರ್ಷದ ಪುತ್ರಿ ಇದ್ದಳು. ಭಾರತೀಯ ವಾಯುಪಡೆಯ ಅಧಿಕಾರಿಯಾಗಿರುವ ನಮಾಂಶ್‌ ಅವರ ಪತ್ನಿ ವಿಂಗ್ ಕಮಾಂಡರ್ ಅಫ್ಸಾನ್ ಅವರು, ಕುಟುಂಬದವರೊಂದಿಗೆ ನಿಂತು ತಮ್ಮ ಪತಿಗೆ ಅಂತಿಮ ನಮನ ಸಲ್ಲಿಸಿದರು. ಕಣ್ಣೀರು ಹಾಕುತ್ತಲೇ ಪತಿಗೆ ‘ಸೆಲ್ಯೂಟ್’ ಹೊಡೆದ ದೃಶ್ಯ ಮನಕಲಕುವಂತಿತ್ತು.

WhatsApp Group Join Now

Spread the love

Leave a Reply