ಮೈಸೂರಿನ ಕುವೆಂಪು ನಗರದಲ್ಲಿ ನಿರ್ಮಿಸಿರುವ ಹೊಸ ಮನೆಗೆ ವಿದ್ಯುತ್ ಸಂಪರ್ಕ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೇ ಇನ್ನೂ ಸಾಧ್ಯವಾಗಿಲ್ಲ…!’ಸಿದ್ದರಾಮಯ್ಯ ಅವರು 80X120 ಅಡಿ ಅಳತೆಯ ನಿವೇಶನದಲ್ಲಿ ಮೂರು ಅಂತಸ್ತಿನ ಮನೆ ನಿರ್ಮಿಸಿದ್ದಾರೆ. ಆರು ತಿಂಗಳ ಹಿಂದೆಯೇ 94 ಕಿಲೊವಾಟ್ ವಿದ್ಯುತ್ ಮಂಜೂರಾಗಿದೆ. ಆದರೆ, ನ್ಯಾಯಾಲಯವು ನಕ್ಷೆ ಮಂಜೂರಾತಿ, ಸ್ವಾಧೀನಾನುಭವ ಪ್ರಮಾಣಪತ್ರ (ಒ.ಸಿ) ಕಡ್ಡಾಯ ಮಾಡಿರುವ ಕಾರಣ ವಿದ್ಯುತ್ ಸಂಪರ್ಕ ನೀಡಲು ಸಾಧ್ಯವಾಗಿಲ್ಲ’ ಎಂದು ಮೂಲಗಳು ಖಚಿತಪಡಿಸಿವೆ.
‘ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಈ ವರ್ಷದ ಏಪ್ರಿಲ್‌ನಿಂದಲೇ ರಾಜ್ಯದ ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕ ನೀಡಲು ನಕ್ಷೆ ಮಂಜೂರಾತಿ, ಒಸಿಯನ್ನು ಕಡ್ಡಾಯಗೊಳಿಸಲಾಗಿದೆ. ಒ.ಸಿ ಇಲ್ಲದೆ ಇರುವುದರಿಂದ ಸಿದ್ದರಾಮಯ್ಯ ಅವರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗಿಲ್ಲ’ ಎಂದು ಕರ್ನಾಟಕ ವಿದ್ಯುತ್ ಗುತ್ತಿಗೆದಾರರ ಸಂಘದ (ಕೆಎಸ್‌ಎಲ್‌ಇಸಿಎ) ಅಧ್ಯಕ್ಷ ರಮೇಶ್ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು. ಮನೆ ನಿರ್ಮಾಣ ಕಾಮಗಾರಿಯನ್ನು ಈಚೆಗೆ ವೀಕ್ಷಿಸಿದ್ದ ಸಿದ್ದರಾಮಯ್ಯ ಅವರು, ಡಿಸೆಂಬರ್‌ನಲ್ಲಿ ‘ಗೃಹ ಪ್ರವೇಶ’ ಮಾಡುವುದಾಗಿ ಹೇಳಿದ್ದರು.
ಹಗ್ಗಜಗ್ಗಾಟ: ನಿವೇಶನ ಅಥವಾ ಕಟ್ಟಡದ ವಿಸ್ತೀರ್ಣವನ್ನು ಪರಿಗಣಿಸದೆ, ಈಗಾಗಲೇ ನಿರ್ಮಾಣವಾಗಿರುವ ಎಲ್ಲ ಕಟ್ಟಡಗಳಿಗೆ ಒಂದು ಬಾರಿಗೆ ಮಾತ್ರ ಅನ್ವಯವಾಗುವಂತೆ ಷರತ್ತು ವಿಧಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲು ಇಂಧನ ಇಲಾಖೆ ಒಲವು ತೋರಿದೆ.
‘ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಂಬಂಧಪಟ್ಟ ಇಲಾಖೆಯಿಂದ ನಕ್ಷೆಗೆ ಅನುಮೋದನೆ ಪಡೆಯದೆ ಕಟ್ಟಡಗಳನ್ನು ನಿರ್ಮಿಸಿರುವ, ಒ.ಸಿ ಇಲ್ಲದೆ ಇದ್ದರೂ, ವಿದ್ಯುತ್ ಸಂಪರ್ಕ ಕೋರಿ ಈಗಾಗಲೇ ಅರ್ಜಿ ಸಲ್ಲಿಸಿರುವ ಎಲ್ಲರಿಗೂ ವಿದ್ಯುತ್ ಸಂಪರ್ಕ ನೀಡಬೇಕು ಎಂಬ ಸಲಹೆಯನ್ನು ಇಂಧನ ಇಲಾಖೆ ಅಧಿಕಾರಿಗಳು ನೀಡಿದ್ದಾರೆ. ಆದರೆ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಅಧಿಕಾರಿಗಳು ಇದಕ್ಕೆ ಒಪ್ಪುತ್ತಿಲ್ಲ’ ಎನ್ನಲಾಗಿದೆ.
‘ಈ ರೀತಿ ಮಾಡುವುದರಿಂದ ಸುಮಾರು ಒಂದು ಲಕ್ಷ ಗ್ರಾಹಕರಿಗೆ ಅನುಕೂಲವಾಗಲಿದೆ. ದಂಡ ಹಾಕಿ, ಸಂಪರ್ಕ ನೀಡಬಹುದು ಎಂದು ಸಲಹೆ ನೀಡಲಾಗಿದೆ. ಆದರೆ, ಸಂಪುಟ ಸಭೆಯ ಮುಂದೆ ಈ ವಿಷಯ ಬಂದಾಗ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. ಹೀಗಾಗಿ ಎಂಟು ತಿಂಗಳಾದರೂ, ಇದಕ್ಕೆ ಪರಿಹಾರ ಸಿಕ್ಕಿಲ್ಲ, ಯಾವಾಗ ಸಮಸ್ಯೆ ಬಗೆಯುತ್ತದೆ ಎಂಬುದೂ ಗೊತ್ತಿಲ್ಲ’ ಎಂದು ಇಂಧನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
ಹೆಚ್ಚು ಜನರಿಗೆ ಅನುಕೂಲವಿಲ್ಲ: 1,200 ಚದರಡಿ ಅಥವಾ ಅದಕ್ಕಿಂತ ಕಡಿಮೆ ನಿವೇಶನದಲ್ಲಿ ನೆಲ + 2 ಅಂತಸ್ತು ಅಥವಾ ಸ್ಟಿಲ್ಟ್ +3 ಅಂತಸ್ತುವರೆಗಿನ ವಸತಿ ಕಟ್ಟಡಗಳಿಗೆ, ನಕ್ಷೆ ಮಂಜೂರಾತಿ, ಒ.ಸಿ ಅಗತ್ಯವಿಲ್ಲ ಎಂದು ನಗರಾಭಿವೃದ್ಧಿ ಇಲಾಖೆ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
ತಾತ್ಕಾಲಿಕ ಸಂಪರ್ಕವೇ ಗತಿ
ಕಾಯಂ ಸಂಪರ್ಕ ನೀಡದ ಕಾರಣ, ಬಹುತೇಕ ಗ್ರಾಹಕರು ತಾತ್ಕಾಲಿಕ ಸಂಪರ್ಕವನ್ನೇ ಅವಲಂಬಿಸಿದ್ದಾರೆ. ನಿರ್ಮಾಣ ಮುಗಿದಿದ್ದರೂ ಹಲವರು ತಾತ್ಕಾಲಿಕ ಸಂಪರ್ಕ ಮುಂದುವರಿಸಿದ್ದಾರೆ. ಅಧಿಕಾರಿಗಳು ಕೂಡ ಇದಕ್ಕೆ ಆಕ್ಷೇಪ ಮಾಡುತ್ತಿಲ್ಲ. ಕಾಯಂ ಸಂಪರ್ಕ ನೀಡದೆ ಇರುವುದರಿಂದ, ಅವರೂ ಸಹಕರಿಸಿಕೊಂಡು ಹೋಗುತ್ತಿದ್ದಾರೆ.
‘ಈಗ ಹೊಸದಾಗಿ ಮನೆ ನಿರ್ಮಾಣ ಮಾಡುತ್ತಿರುವವರಿಗೆ ನೆಲ + 2 ಅಂತಸ್ತು ಅಥವಾ ಸ್ಟಿಲ್ಟ್ +3 ಅಂತಸ್ತು ವರೆಗೆ ಮಾತ್ರ ನಿರ್ಮಿಸಬೇಕು ಎಂಬ ಷರತ್ತಿನ ಮೇಲೆ ತಾತ್ಕಾಲಿಕ ಸಂಪರ್ಕಗಳನ್ನು ನೀಡಲಾಗುತ್ತಿದೆ. ಹೀಗಾಗಿ ಒಂದು ತಿಂಗಳಿಂದ ಈಚೆಗೆ ನಿರ್ಮಾಣ ಚಟುವಟಿಕೆಗಳು ಸ್ವಲ್ಪಮಟ್ಟಿಗೆ ಗರಿಗೆದರಿವೆ’ ಎಂದು ಗುತ್ತಿಗೆದಾರರೊಬ್ಬರು ತಿಳಿಸಿದರು.
ನನಗೂ ಗೊತ್ತಿಲ್ಲ: ತುಷಾರ್
‘ಈ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಈ ಸಮಸ್ಯೆಗೆ ಯಾವಾಗ ಪರಿಹಾರ ಸಿಗಲಿದೆ ಎಂಬುದು ನಮಗೂ ಗೊತ್ತಿಲ್ಲ. ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ನಿರ್ಧರಿಸಬೇಕು. ಈಗ ಹೊರಡಿಸಿರುವ ಆದೇಶದಿಂದ ಬೆಂಗಳೂರಿನಲ್ಲಿ ಶೇ 25ರಷ್ಟು ಅರ್ಜಿದಾರರಿಗೆ ಹಾಗೂ ಉಳಿದ ಕಡೆ ಶೇ 50ರಷ್ಟು ಅರ್ಜಿದಾರರಿಗೆ ಅನುಕೂಲವಾಗಲಿದೆ’ ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರು ತಿಳಿಸಿದರು.
ಹೊಸದಾಗಿ ನಿರ್ಮಿಸಿರುವ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡುವ ಸಂಬಂಧ ಉಂಟಾಗಿರುವ ಕಗ್ಗಂಟಿಗೆ ಪರಿಹಾರ ಸಿಗದೇ ಇರುವುದು ಇದಕ್ಕೆ ಕಾರಣವಾಗಿದೆ.