ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳ ಗೃಹಲಕ್ಷ್ಮಿ ಹಣವನ್ನು ಆದಷ್ಟು ಬೇಗ ಬಿಡುಗಡೆ ಮಾಡುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ತಿಳಿಸಿದರು.
ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳ ಗೃಹಲಕ್ಷ್ಮಿ ಹಣ ಇನ್ನೂ ಬಿಡುಗಡೆಯಾಗಿಲ್ಲ. ಆದಷ್ಟು ಬೇಗ ಬಿಡುಗಡೆ ಮಾಡ್ತೀವಿ. ನಮ್ಮ ಗೃಹಲಕ್ಷ್ಮಿಯನ್ನು ಕಾಪಿ ಮಾಡಿಕೊಂಡು ಬಿಜೆಪಿ ಅವರು ಎಲ್ಲಾ ಕಡೆ ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ. ಕರ್ನಾಟಕವನ್ನು ರೋಲ್ ಮಾಡಲ್ ಮಾಡಿಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು.
ನ.28ಕ್ಕೆ ನಾವು ಅಂಗನವಾಡಿ ಆರಂಭಿಸಿ 50 ವರ್ಷ ಆಯಿತು. ಕರ್ನಾಟಕದಿಂದಲೇ ಅಂಗನವಾಡಿ ಶುರುವಾಗಿದ್ದು. 1975ರಲ್ಲಿ ಇಂದಿರಾಗಾಂಧಿ ಅವರು ಮೈಸೂರಿನ ಟಿ.ನರಸೀಪುರದಲ್ಲಿ ಪ್ರಾರಂಭ ಮಾಡಿದರು. ಐವತ್ತು ವರ್ಷದ ಹಿನ್ನೆಲೆ ಸುವರ್ಣ ಮಹೋತ್ಸವ ಆಚರಿಸುತ್ತಿದ್ದೇವೆ. ಇಲಾಖೆಯಿಂದ ಅರಮನೆ ಮೈದಾನದಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಅದಕ್ಕಾಗಿ 10 ಜಿಲ್ಲೆಗಳಲ್ಲಿ ಪೂರ್ವಭಾವಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಇದು ಕೇವಲ ಸಂಭ್ರಮವಲ್ಲ ಇಂದಿರಾಗಾಂಧಿ ಅವರ ಕನಸನ್ನು ಯಾವ ರೀತಿ ತೆಗೆದುಕೊಂಡು ಹೋಗಬೇಕು ಎಂಬುದನ್ನು ಘೋಷಣೆ ಮಾಡುತ್ತೇವೆ.
ಇನ್ನೂ ಇದೇ ವೇಳೆ ಅಕ್ಕಪಡೆ ಬಗ್ಗೆ ಮಾತನಾಡಿ, ಪೊಲೀಸ್ ಇಲಾಖೆ ಮತ್ತು ನಮ್ಮ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಅಕ್ಕಪಡೆ ಕಾರ್ಯನಿರ್ವಹಿಸುತ್ತದೆ. ಪ್ರತಿ ಜಿಲ್ಲೆಯಲ್ಲೂ, ಅದರಲ್ಲೂ ನಗರ ಕೇಂದ್ರಗಳಲ್ಲಿ 10 ಮಹಿಳೆಯರು ಇರುತ್ತಾರೆ. ಅವರ ಜೊತೆಗೆ ಇಬ್ಬರು ಮಹಿಳಾ ಪೊಲೀಸರು ಇರುತ್ತಾರೆ. ಅದರಲ್ಲಿ ಎನ್ಸಿಸಿ, ಹೋಮ್ ಗಾರ್ಡ್ಗಳು ಕೂಡ ಇರುತ್ತಾರೆ. ಅವರಿಗೊಂದು ವಾಹನ, ಅದಕ್ಕೊಬ್ಬ ಚಾಲಕ ಇರುತ್ತಾರೆ. ಶಾಲೆ, ಕಾಲೇಜುಗಳು, ಬಸ್ ನಿಲ್ದಾಣ ಸೇರಿದಂತೆ ಜನಸಂದಣಿ ಪ್ರದೇಶ, ಮಹಿಳಾ ಹಾಸ್ಟೆಲ್ಗಳು, ಪಾರ್ಕ್, ದೇವಸ್ಥಾನ, ಮನೆ, ಜನವಸತಿ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತದೆ.
ರೋಡ್ ರೋಮಿಯೋಗಳು, ಮಹಿಳೆಯರನ್ನು ಚುಡಾಯಿಸುವಂತಹ ವಿಚಾರಗಳನ್ನು ಅಣ್ಣಾ ತಮ್ಮಂದಿರ ಹತ್ತಿರ ಹೇಳಿಕೊಳ್ಳಲು ಸಾಧ್ಯವಿಲ್ಲ. ಮನೆಯಲ್ಲಿ ದೌರ್ಜನ್ಯಕ್ಕೆ ಒಳಗಾದರೂ ಸುಮ್ಮನಿರುತ್ತಾರೆ. ಹೀಗಾಗಿ ಕಮಾಂಡೋ ಡ್ರೆಸ್ ಧರಿಸಿ ಅಕ್ಕಪಡೆ ಗಸ್ತು ತಿರುಗುತ್ತಾರೆ. ಪೊಲೀಸ್ ಇಲಾಖೆಯದ್ದೇ ನಂಬರ್ ಇದೆ, ಅದಕ್ಕೆ ಕರೆ ಮಾಡಿದರೆ ಅವರ ಹೆಸರನ್ನು ಗೌಪ್ಯವಾಗಿಟ್ಟು ಅವರ ರಕ್ಷಣೆಗೆ ಹೋಗುತ್ತೇವೆ ಎಂದು ಹೇಳಿದರು.
ಸಾಕಷ್ಟು ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿರುವ ವಿಚಾರವಾಗಿ ಮಾತನಾಡಿ, ರಾಜ್ಯದಲ್ಲಿ 69,500 ಅಂಗನವಾಡಿಗಳನ್ನು ನಡೆಸುತ್ತಿದ್ದೇವೆ. 50 ಸಾವಿರ ಅಂಗನವಾಡಿಗಳು ಸ್ವಂತ ಕಟ್ಟಡದಲ್ಲಿ ನಡೆಯುತ್ತಿವೆ. ಇಡೀ ದೇಶದಲ್ಲೇ 50 ಸಾವಿರ ಸ್ವಂತ ಕಟ್ಟಡ ಇರುವುದು ಕರ್ನಾಟಕದಲ್ಲಿ ಮಾತ್ರ. ಇದನ್ನು ಹೇಳಲು ಹೆಮ್ಮೆ ಅನಿಸುತ್ತದೆ. ಪ್ರತಿವರ್ಷ 2000 ಅಂಗನವಾಡಿ ಕಟ್ಟಡ ಕಟ್ಟಲು ಯೋಜಿಸಿದ್ದೇವೆ. ನಾನು ಸಚಿವೆ ಆದ ಮೇಲೆ 2500 ಅಂಗನವಾಡಿ ಕಟ್ಟಡಕ್ಕೆ ಮಂಜೂರು, ಕೆಲವು ಕಾಮಗಾರಿ ನಡೆಯುತ್ತಿದೆ, ಕೆಲವು ಮುಗಿದಿವೆ. ಮುಂದಿನ ದಿನಗಳಲ್ಲಿ ಉಳಿದ ಕಟ್ಟಡಗಳನ್ನು ನಿರ್ಮಿಸಲಾಗುವುದು. ಶಿಥಿಲವಾಗಿರುವ ಅಂಗನವಾಡಿ ಕಟ್ಟಡಗಳ ಕಾಮಗಾರಿ ಕೂಡ ಕೈಗೆತ್ತಿಕೊಂಡಿದ್ದೇವೆ ಎಂದರು.
ಸಂಪುಟ ಪುನರ್ ರಚನೆಯಲ್ಲಿ ಖಾತೆ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಬಹಳ ಸಂತೋಷದಿಂದ ಈ ಖಾತೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಏನೇ ಇದ್ದರೂ ಹೈಕಮಾಂಡ್ ನಿರ್ಧಾರ. ನಮಗೆ ಬೇರೆ ಖಾತೆ ಕೊಡಿ, ನಾವು ಮಂತ್ರಿ ಆಗಿರಬೇಕು ಅನ್ನೋದೆಲ್ಲ ನಾವು ಮಾತಾಡಬಾರದು. ಸಾಮಾನ್ಯ ಕಾರ್ಯಕರ್ತೆಯಾಗಿ ಬಂದಿದ್ದೇನೆ, ನಮ್ಮ ಹೈಕಮಾಂಡ್ ತೀರ್ಮಾನವೇ ನಮ್ಮ ತೀರ್ಮಾನ. ನಾನು ಯಾವಾಗಲೂ ಇದೇ ಮಾತನ್ನು ಹೇಳುತ್ತೇನೆ. ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತೆ. ಪಕ್ಷ ಏನ್ ಹೇಳುತ್ತೋ, ಶಿಸ್ತಿನ ಸಿಪಾಯಿಗಳಾಗಿ ಕೇಳ್ತಿವಿ. ಅವರು ಇವತ್ತು ಆಗ್ತಾರೋ, ನಾಳೆ ಆಗ್ತಾರೋ ಅವೆಲ್ಲಾ ಹೈಕಮಾಂಡ್ಗೆ ಬಿಟ್ಟ ವಿಚಾರ ಎಂದರು.
ಗ್ಯಾರಂಟಿ ಲಾಭ ಪಡೆದ ಮಹಿಳೆಯರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಮತ ಹಾಕಿಲ್ಲ ಎಂಬ ಕೆ.ಎನ್.ರಾಜಣ್ಣ ಹೇಳಿಕೆ ವಿಚಾರವಾಗಿ ಮಾತನಾಡಿ, ರಾಜಣ್ಣ ಸರ್ ಯಾವ ಅರ್ಥದಲ್ಲಿ ಮಾತನಾಡಿದ್ದಾರೆಯೋ ಬಹುಶಃ ಅವರ ಕಡೆ ಕೇಳಿದರೆ ಸೂಕ್ತ ಉತ್ತರ ಸಿಗುತ್ತದೆ ಎಂದು ತಿಳಿಸಿದರು.
2 ತಿಂಗಳ ಗೃಹಲಕ್ಷ್ಮಿ ಹಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡ್ತೇವೆ ಎಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
WhatsApp Group
Join Now