Kantara : ‘ಕಾಂತಾರ’ ಚಿತ್ರದ ವಿರುದ್ಧ ದೈವದ ಅಪಹಾಸ್ಯದ ಆರೋಪದ ಹಿನ್ನೆಲೆಯಲ್ಲಿ, ಕೆಲವು ದೈವಾರಾಧಕರು ಪಿಲ್ಚಂಡಿ ದೈವದ ಎದುರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಈ ವೇಳೆ ದೈವದ ನುಡಿಗಳು ದೈವಾರಾಧಕರಿಗೆ ಅಭಯ ನೀಡುವುದರ ಜೊತೆಗೆ ಎಚ್ಚರಿಕೆಯನ್ನೂ ನೀಡಿವೆ.
‘ನಾನು ನಿಮ್ಮ ಹಿಂದಿದ್ದೇನೆ, ನಿಮ್ಮ ಹೋರಾಟ ಮುಂದುವರೆಸಿ’ ಎಂದು ದೈವವು ದೈವಾರಾಧಕರಿಗೆ ಅಭಯ ನೀಡಿದ್ದು, ‘ಹುಚ್ಚು ಕಟ್ಟಿದವರ ಹುಚ್ಚು ಹಿಡಿಸುತ್ತೇನೆ’ ಎಂದು ಹೇಳುವ ಮೂಲಕ ಎಚ್ಚರಿಕೆಯನ್ನೂ ನೀಡಿದೆ. ದೈವದ ಹೆಸರಿನಲ್ಲಿ ಮಾಡಿದ ದುಡ್ಡನ್ನು (ಆದಾಯವನ್ನು) ಆಸ್ಪತ್ರೆಗೆ ಸುರಿಸುವಂತೆ ಮಾಡುತ್ತೇನೆ ಎಂದೂ ಹೇಳಿದೆ.
ಇನ್ನು ದೈವಾರಾಧಕ ಶ್ರೀಧರ್ ಕವತ್ತಾರ್ ಮಾತನಾಡಿದ್ದು, ದೈವದ ಅಪಹಾಸ್ಯದಿಂದ ನಮಗೆ ತುಂಬಾ ಬೇಸರವಾಗಿದೆ. ನಮ್ಮ ಹೋರಾಟಕ್ಕೆ ದೈವವು ಸಂಪೂರ್ಣ ಬೆಂಬಲವಿದೆ ಎಂದು ನುಡಿ ನೀಡಿದೆ ಎಂದರು. ಅಲ್ಲದೆ, ಅವರು ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಾ, ‘ಇಂತಹ ತಪ್ಪನ್ನು ತುಳುವರು ಮಾಡಬೇಡಿ. ನಟನನ್ನೇ ದೈವವಾಗಿ ಆರಾಧಿಸುವಂತಹ ಅವಿವೇಕಿಗಳಿದ್ದಾರೆ. ದೈವಕ್ಕೆ ಯಾರೇ ಅಪಹಾಸ್ಯ ಮಾಡಿದರೂ ನಾವು ಅದನ್ನು ವಿರೋಧಿಸುತ್ತೇವೆ,” ಎಂದು ಸ್ಪಷ್ಟಪಡಿಸಿದರು.
ಇನ್ನೊಂದೆಡೆ, ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ‘ಕಾಂತಾರ ಅಧ್ಯಾಯ 1’ ಸಿನಿಮಾವು ವಿಶ್ವಾದ್ಯಂತ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಪ್ರದರ್ಶನ ನೀಡಿದೆ. ಕೇವಲ ಮೊದಲ ವಾರಾಂತ್ಯದಲ್ಲಿ ಈ ಚಿತ್ರ ₹451 ಕೋಟಿ ಗಳಿಸಿ, ₹500 ಕೋಟಿ ಗಡಿ ದಾಟಲು ಸಜ್ಜಾಗಿದೆ.
ಕಾಂತಾರ ಅಧ್ಯಾಯ 1, ಬಿಡುಗಡೆಯ ಏಳನೇ ದಿನ ₹25 ಕೋಟಿ ನಿವ್ವಳ ಗಳಿಕೆ ಕಂಡಿದ್ದು, ದೇಶೀಯವಾಗಿ ಒಟ್ಟು ₹379 ಕೋಟಿ ಗಳಿಸಿದೆ. ಇದು ಹಿಂದಿ ಆವೃತ್ತಿಯಲ್ಲಿ ₹100 ಕೋಟಿ ಹಾಗೂ ತೆಲುಗು ಆವೃತ್ತಿಯಲ್ಲಿ ₹60 ಕೋಟಿಗೂ ಹೆಚ್ಚು ಗಳಿಸಿ, ನಿಜವಾದ ಪ್ಯಾನ್-ಇಂಡಿಯಾ ಹಿಟ್ ಎನಿಸಿಕೊಂಡಿದೆ. ಈ ಚಿತ್ರ ವಿದೇಶದಲ್ಲಿಯೂ $8 ಮಿಲಿಯನ್ ಗೂ ಹೆಚ್ಚು ಗಳಿಸಿದೆ.
ಗುರುವಾರದ ವೇಳೆಗೆ, ‘ಕಾಂತಾರ ಅಧ್ಯಾಯ 1’ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರಗಳ ಪಟ್ಟಿಯಲ್ಲಿ ‘ಬ್ರಹ್ಮಾಸ್ತ್ರ’ (₹431 ಕೋಟಿ) ಮತ್ತು ‘3 ಈಡಿಯಟ್ಸ್’ (₹450 ಕೋಟಿ) ಸಿನಿಮಾಗಳ ಜೀವಮಾನದ ಕಲೆಕ್ಷನ್ಅನ್ನು ಮೀರಿಸಿದೆ. ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರ, ‘ಕಾಂತಾರ’ದ ಕಥೆಯ ಪೂರ್ವಭಾಗವನ್ನು ಹೇಳುತ್ತದೆ. ಎರಡನೇ ವಾರಾಂತ್ಯದಲ್ಲಿ ₹500 ಕೋಟಿ ಗಡಿ ದಾಟುವ ನಿರೀಕ್ಷೆಯಿದೆ.

Kantara : ‘ದೈವದ ಹೆಸರಲ್ಲಿ ಮಾಡಿದ ದುಡ್ಡನ್ನು ಆಸ್ಪತ್ರೆಗೆ ಸುರಿಸುತ್ತೇನೆ..’ ಕಾಂತಾರ ತಂಡಕ್ಕೆ ಎಚ್ಚರಿಕೆ ನೀಡಿದ ಪಿಲ್ಚಂಡಿ ದೈವ!
WhatsApp Group
Join Now