ಸಿಎಂ ಸಿದ್ದರಾಮಯ್ಯ ಆಗಮನ ಹಿನ್ನೆಲೆ ಕೇಸರಿ ಧ್ವಜ ತೆರವಿಗೆ ಪೊಲೀಸರು ಸೂಚನೆ ; ದಿಢೀರ್ ಪ್ರತಿಭಟನೆ

Spread the love

ಸಿಎಂ ಸಿದ್ದರಾಮಯ್ಯ (Siddaramaiah) ಆಗಮನ ಹಿನ್ನೆಲೆ ಕೇಸರಿ ಧ್ವಜ ತೆರವಿಗೆ ಸೂಚಿಸಿದ ಪೊಲೀಸರ ನಡೆ ಖಂಡಿಸಿ ಕೊಪ್ಪಳ ತಾಲೂಕಿನ ಭಾಗ್ಯನಗರ ಪಟ್ಟಣದಲ್ಲಿ ಇಂದು ರಾತ್ರಿ ಬಿಜೆಪಿ ನಾಯಕರು (BJP Leaders) ಹಾಗೂ ಸಾರ್ವಜನಿಕರು ದಿಢೀರ್ ಪ್ರತಿಭಟನೆ ನಡೆಸಿದರು.

ನಾಡಿದ್ದು ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಪ್ಪಳಕ್ಕೆ ಆಗಮಿಸಲಿದ್ದಾರೆ. ಭಾಗ್ಯನಗರದ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದರ ಅಂಗವಾಗಿ ರಸ್ತೆ ತಗ್ಗು ಮತ್ತು ಗುಂಡಿಗಳನ್ನು ಅವಸರ ಅವಸರವಾಗಿ ಮುಚ್ಚಲಾಗುತ್ತಿದೆ. ನವರಾತ್ರಿ ಅಂಗವಾಗಿ ಅಂಬಾಭವಾನಿ ದೇವಾಲಯ ಮುಂಭಾಗದಲ್ಲಿ ರಸ್ತೆಗೆ ಅಡ್ಡಲಾಗಿ ಕೇಸರಿ ಧ್ವಜಗಳ ತೋರಣ ಕಟ್ಟಲಾಗಿದೆ. ಅದನ್ನು ತೆರವು ಮಾಡುವಂತೆ ಪೊಲೀಸರು ಸೂಚಿಸಿದ್ದಾರೆ. ಇದರಿಂದ ಕೆರಳಿದ ಹಿಂದೂ ಕಾರ್ಯಕರ್ತರು, ಬಿಜೆಪಿ ನಾಯಕರು ಏಕಾಏಕಿ ಪ್ರತಿಭಟನೆ ನಡೆಸಿದರು. ಧ್ವಜ ತೆರವಿಗೆ ಮುಂದಾಗಿದ್ದು ಸರಿಯಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ, ಪೊಲೀಸರ ವಿರುದ್ಧ ಘೋಷಣೆ ಕೂಗಿದರು.

ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್‌, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್ ಸ್ಥಳಕ್ಕೆ ಧಾವಿಸಿದರು. ತೆರವು ಮಾಡುವುದಿಲ್ಲವೆಂದು ಹೇಳುವವರೆಗೂ ಸ್ಥಳಬಿಟ್ಟು ಕದಲುವುದಿಲ್ಲವೆಂದು ಪಟ್ಟು ಹಿಡಿದರು. ಹೆಚ್ಚು ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಪರಿಸ್ಥಿತಿ ಕೈಮೀರುವ ಹಂತ ತಲುಪಿತು.

ತಕ್ಷಣ ಸ್ಥಳಕ್ಕೆ ಬಂದ ಕೊಪ್ಪಳ ನಗರಠಾಣೆ ಪಿಐ ಜಯಪ್ರಕಾಶ, ಸಿಎಂ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡುತ್ತಿದ್ದೇವೆ. ರಸ್ತೆಯುದ್ದಕ್ಕೂ ಇದ್ದ ಎಲ್ಲ ಧ್ವಜ, ದಾರ, ಇನ್ನಿತರ ವಸ್ತುಗಳನ್ನು ತೆರವು ಮಾಡಲಾಗುತ್ತಿದೆ. ಅದರಂತೆ ಇವುಗಳನ್ನು ತೆಗೆಯಲು ಹೇಳಿದ್ದೆವು. ಬೇಡವೆಂದರೆ ತೆಗೆಯುವುದು ಬೇಡವೆಂದು ಸಮಜಾಯಿಷಿ ನೀಡಿದರು. ಬಳಿಕ ಜನ ಚದುರಿದರು.

WhatsApp Group Join Now

Spread the love

Leave a Reply