ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ ಅವರನ್ನು ಪತ್ನಿ ವಿಜಯಲಕ್ಷ್ಮಿ ಭೇಟಿಯಾಗಿದ್ದಾರೆ. ಈ ವೇಳೆ ದರ್ಶನ್ ಅವರ ಸ್ಥಿತಿ ಕಂಡು ವಿಜಯಲಕ್ಷ್ಮಿ ಅವರು ಕಣ್ಣೀರಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೊದಲ ಬಾರಿಗೆ ದರ್ಶನ್ ಅವರು ಜೈಲಿಗೆ ಹೋಗಿದ್ದಾಗ ಕೆಲ ಸೌಲಭ್ಯಗಳು ಸಿಕ್ಕಿತ್ತು.
ಆದರೆ ಸುಪ್ರೀಂಕೋರ್ಟ್ ಖಡಕ್ ಸೂಚನೆ ಬಳಿಕ ಎರಡನೇ ಸಲ ಜೈಲಿಗೆ ಮರಳಿರುವ ದರ್ಶನ್ಗೆ ಯಾವುದೇ ಹೆಚ್ಚುವರಿ ಸೌಲಭ್ಯಗಳು ಸಿಗುತ್ತಿಲ್ಲ. ಒಂದು ರೀತಿ ಜೈಲಿನಲ್ಲಿ ನರಕಯಾತನೆ ಎಂಬಂತಾಗಿದೆ. ಹೀಗಾಗಿ ನನ್ನ ನೋಡಲು ಜೈಲಿಗೆ ಬರಬೇಡ ಎಂದು ದರ್ಶನ್ ತನ್ನ ಪತ್ನಿಗೆ ಹೇಳಿದ್ದಾರಂತೆ.
ದರ್ಶನ್ ಅವರು ಮೊದಲ ಬಾರಿ ಈ ಕೇಸ್ನಲ್ಲಿ ಜೈಲು ಸೇರಿದ್ದಾಗ ತುಸು ಧೈರ್ಯವಾಗಿಯೇ ಇದ್ದರು. ವಿಜಯಲಕ್ಷ್ಮಿ ಅವರು ಕೂಡ ದಿಟ್ಟತನ ಪ್ರದರ್ಶಿಸಿದ್ದರು. ಆದರೆ ಈ ಬಾರಿ ದರ್ಶನ್ ಅವರೇ ಬೇಸರದ ಮಾತುಗಳನ್ನಾಡುತ್ತಿದ್ದಾರೆ ಎನ್ನಲಾಗಿದೆ. ಎರಡನೇ ಬಾರಿ ಜೈಲಿಗೆ ಹೋದಾಗಿನಿಂದಲೂ ದರ್ಶನ್ ಸಮಸ್ಯೆಗಳ ಸರಮಾಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ನಿದ್ರಿಸಲು ಹಾಸಿಗೆ, ದಿಂಬು ಇಲ್ಲದೇ ಪರದಾಡುವಂತಾಗಿದ್ದು, ಏನೇ ಬೇಡಿಕೆ ಇಟ್ಟರೂ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಒಟ್ಟಾರೆ ದರ್ಶನ್ ಅವರು ಜೈಲಿನ ಜೀವನದಿಂದ ಬೇಸತ್ತು ಪತ್ನಿ ವಿಜಯಲಕ್ಷ್ಮಿ ಅವರ ಮುಂದೆ ಸಂಕಷ್ಟಗಳನ್ನು ಬಿಚ್ಚಿಟ್ಟಿದ್ದಾರೆ.
ಮೊದಲಾದರೆ ದರ್ಶನ್ ಅವರನ್ನು ಭೇಟಿಯಾಗಲು ಕುಟುಂಬಸ್ಥರಿಗೆ ಅವಕಾಶ ಸುಲಭವಾಗಿ ಸಿಗುತ್ತಿತ್ತು. ಆದರೆ ಸುಪ್ರೀಂ ಕೋರ್ಟ್ ಆದೇಶದ ಬಳಿಕೆ ಎಲ್ಲವೂ ಬದಲಾಗಿದೆ. ಪತ್ನಿ ವಿಜಯಲಕ್ಷ್ಮಿ ಕೂಡ ದರ್ಶನ್ ಅವರನ್ನು ಭೇಟಿಯಾಗಲು ಜೈಲಿಗೆ ಬರಲು ಕಷ್ಟ ಎದುರಿಸುವಂತಾಗಿದೆ. ಜೈಲಿನ ಬಳಿ ಬಂದು ಗಂಟೆಗಟ್ಟಲೇ ಕಾಯಬೇಕಿದೆ. ಹೀಗಾಗಿ ಪತ್ನಿಯ ಪಾಡನ್ನು ನೋಡಿ, “ನನ್ನ ಹಣೆಬರಹದಲ್ಲಿ ಏನಿದೆಯೋ ಹಾಗೆ ಆಗುತ್ತೆ, ನೀನು ಇನ್ನು ಮುಂದೆ ಜೈಲಿಗೆ ಬರಬೇಡ ಎಂದು ದರ್ಶನ್ ಹೇಳಿದ್ದಾರಂತೆ. ಸದ್ಯ ಜೈಲಿನಲ್ಲಿ ದರ್ಶನ್ ಪಡುತ್ತಿರುವ ಪಾಡನ್ನು ಕಂಡು ವಿಜಯಲಕ್ಷ್ಮಿ ಕಣ್ಣೀರಿಟ್ಟಿದ್ದಾರೆ.
ಮೊದಲಿನಂತೆ ರಾಜಾತಿಥ್ಯ ಇಲ್ಲ
ದರ್ಶನ್ ಮೊದಲ ಬಾರಿ ಜೈಲು ಸೇರಿದಾಗ ಕೈದಿಯಂತೆ ಇರಲಿಲ್ಲ. ಅಲ್ಲಿ ದರ್ಶನ್ ಅವರಿಗೆ ರಾಜಾತಿಥ್ಯ ನೀಡಿದ್ದ ಆರೋಪ ಕೇಳಿಬಂದಿತ್ತು. ಅಲ್ಲದೆ ಇದಕ್ಕೆ ಸಂಬಂಧಿಸಿದ ಫೋಟೋ ಕೂಡ ರಿಲೀಸ್ ಆಗಿ, ಕೊನೆಗೆ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವವರೆಗೆ ಅವಾಂತರ ಸೃಷ್ಟಿಸಿತ್ತು. ಕೊನೆಗೆ ಜಾಮೀನು ಸಿಕ್ಕಿ ನೆಮ್ಮದಿಯಾಗಿದ್ದ ದರ್ಶನ್ ಅವರಿಗೆ ಸುಪ್ರೀಂಕೋರ್ಟ್ ಶಾಕ್ ನೀಡಿತ್ತು. ದರ್ಶನ್ ಹಾಗೂ ಇತರ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನು ರದ್ದು ಮಾಡಿ ಆದೇಶಿಸಿತ್ತು. ಹೀಗಾಗಿ ದರ್ಶನ್ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಮರಳಬೇಕಾಯಿತು.
ದರ್ಶನ್ ಅವರ ಪಾಡು ಈಗ ಸಾಮಾನ್ಯ ಕೈದಿಗಿಂತಲೂ ಕಡೆಯಾಗಿದೆ. ಬೆನ್ನುನೋವಿನಿಂದಾಗಿ ಚಿಕಿತ್ಸೆಗೆಂದು ದರ್ಶನ್ ಜಾಮೀನು ಕೇಳಿದ್ದರು. ಜಾಮೀನು ಸಿಕ್ಕ ನಂತರ ಕೆಲ ಕಾಲ ಆಸ್ಪತ್ರೆಯಲ್ಲೇ ಇದ್ದು, ಸಿನಿಮಾ ಶೂಟಿಂಗ್ಗಳಲ್ಲಿ ಭಾಗಿಯಾಗಿದ್ದರು. ಇನ್ನೇನು ಡೆವಿಲ್ ಸಿನಿಮಾ ರಿಲೀಸ್ ಆಗಬೇಕು ಎನ್ನುವಷ್ಟರಲ್ಲಿ ಜಾಮೀನು ರದ್ದಾಗಿ ಮತ್ತೆ ಜೈಲು ಸೇರಿದರು. ಸದ್ಯ ಜೈಲು ಜೀವನ ನಡೆಸಲಾರದೆ ದರ್ಶನ್ ಒದ್ದಾಡುತ್ತಿರುವುದಂತೂ ಸತ್ಯ.

ಜೈಲು ಹತ್ರ ಬರಬೇಡ, ಹಣೆಬರಹದಲ್ಲಿ ಇದ್ದಂತೆ ಆಗುತ್ತೆ : ಪತ್ನಿ ಮುಂದೆ ದರ್ಶನ್ ಬೇಸರ
WhatsApp Group
Join Now