ಬ್ರಹ್ಮಾವರ: ಪತಿಯ ಬಂಧನ ಭೀತಿಯಿಂದ ಪತ್ನಿಯು ಒಂದೂವರೆ ವರ್ಷದ ಮಗುವನ್ನು ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಮಧ್ಯಾಹ್ನ ಹೆರಂಜೆ ಆರೂರಿನಲ್ಲಿ ಸಂಭವಿಸಿದೆ.
ಸುಶ್ಮಿತಾ (23) ಮತ್ತು ಮಗು ಶ್ರೇಷ್ಠಾ(1.6) ಮೃತಪಟ್ಟವರು. ಮನೆಯ ಚಾವಡಿಯಲ್ಲಿ ಮೊದಲು ಮಗುವಿಗೆ ನೇಣು ಬಿಗಿದು ಅನಂತರ ಸಮೀಪದಲ್ಲೇ ತಾನೂ ನೇಣು ಬಿಗಿದುಕೊಂಡಿದ್ದಾರೆ.
16 ವರ್ಷಗಳ ಹಿಂದಿನ ಪ್ರಕರಣ:
16 ವರ್ಷಗಳ ಹಿಂದೆ ಪಕ್ಕದ ಮನೆಯವರೊಂದಿಗೆ ಗಲಾಟೆ ನಡೆದಿದ್ದು, ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳ ಹಿಂದೆ ಪತಿ ಸುಭಾಷ್ ನಾಯ್ಕ ಹಾಗೂ ಅವರ ಸಹೋದರ ಸಹಿತ 6 ಮಂದಿಯ ಬಂಧನಕ್ಕೆ ನ್ಯಾಯಾಲಯ ಆದೇಶಿಸಿತ್ತು. ಈ ಕುರಿತು ಪದೇ ಪದೆ ಮನೆಗೆ ಪೊಲೀಸರು ಆಗಮಿಸಿ ನೋಟಿಸು ನೀಡುವುದು ಮತ್ತು ಬೆದರಿಕೆ ಹಾಕಿದ್ದಾರೆಂಬ ಕಾರಣದಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಸೋಮವಾರ ಬೆಳಗ್ಗೆಯೂ ಬಂಧನ ವಾರಂಟ್ ಸಹಿತ ಮನೆಗೆ ಬಂದ ಪೊಲೀಸರು ಮನೆಗೆ ಆಗಮಿಸಿ ಪತಿ ಎಲ್ಲಿದ್ದಾರೆಂದು ಬೆದರಿಸಿ ಕೇಳಿದ್ದು, ಅಕ್ಕ ಪಕ್ಕದಲ್ಲೂ ವಿಚಾರಿಸಿದ್ದಾರೆ. ಈ ಸಂದರ್ಭ ಸುಭಾಷ್ ಅವರು ಮೇಲ್ಮನವಿ ಸಲ್ಲಿಸುವ ಉದ್ದೇಶದಿಂದ ಬೆಂಗಳೂರಿಗೆ ತೆರಳಿದ್ದರು. ಅನಂತರ ಸುಶ್ಮಿತಾ ಸಂಬಂಧಿಕರಿಗೆ ಕರೆ ಮಾಡಿ, ಹೀಗೆಲ್ಲ ಆಗಿದೆ, ಬಿಡಿಸಿಕೊಳ್ಳಲು ಹಣವೂ ಇಲ್ಲ ಎಂದು ಅಳಲು ತೋಡಿಕೊಂಡಿದ್ದರು. ನಾವು ಬರುವುದರ ಒಳಗೆ ಹೀಗಾಗಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ.
ಮರುಕ ಹುಟ್ಟಿಸಿದ ಘಟನೆ
ಚಿಕ್ಕ ಮಗುವಿನೊಂದಿಗೆ ನೇಣು ಬಿಗಿದುಕೊಂಡ ಹೃದಯ ವಿದ್ರಾವಕ ದೃಶ್ಯ ಮನ ಕಲಕುವಂತಿತ್ತು. ಮೃತ ದೇಹಗಳನ್ನು ಕುಣಿಕೆಯಿಂದ ಕೆಳಗಿಳಿಸುವಾಗ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ವಿಷಾದ ವ್ಯಕ್ತವಾಗಿದೆ. ಸ್ಥಳಕ್ಕೆ ಎಸ್ಪಿ ಹರಿರಾಂ ಶಂಕರ್, ಡಿವೈಎಸ್ಪಿ ಪ್ರಭು ಡಿ.ಟಿ., ವೃತ್ತ ನಿರೀಕ್ಷಕ ಗೋಪಿಕೃಷ್ಣ, ಠಾಣಾಧಿಕಾರಿ ಅಶೋಕ್ ಭೇಟಿ ನೀಡಿದ್ದಾರೆ.
ಸ್ಥಳದಲ್ಲಿ ಡೆತ್ನೋಟ್ ಪತ್ತೆ:
2009ರಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿ ಪತಿ ಹಾಗೂ ಮನೆಯವರು ತಪ್ಪಿತಸ್ಥರು ಎನ್ನುವುದಾಗಿ ಇತ್ತೀಚೆಗೆ ಹೈಕೋರ್ಟ್ನಲ್ಲಿ ದೃಢೀಕರಣಗೊಂಡಿದೆ. ಇದೇ ವಿಚಾರದಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಸ್ಥಳದಲ್ಲಿ ಡೆತ್ನೋಟ್ ದೊರಕಿದ್ದು, ಘಟನೆಗೆ ನಾನೇ ಹೊಣೆಗಾರರಾಗಿದ್ದೇವೆ ಎನ್ನುವ ರೀತಿಯಲ್ಲಿ ಬರೆದಿದ್ದಾರೆ. ಬೇರೆ ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ತನಿಖೆಯಿಂದ ತಿಳಿಯಲಿದೆ. – ಹರಿರಾಂ ಶಂಕರ್, ಎಸ್ಪಿ, ಉಡುಪಿ

ಪತಿಯ ಬಂಧನ ಭೀತಿ : ಮಗುವಿಗೆ ನೇಣು ಬಿಗಿದು ತಾಯಿಯೂ ಆತ್ಮಹತ್ಯೆ – ಪೊಲೀಸರ ನೋಟಿಸ್, ಬೆದರಿಕೆಯಿಂದ ನೊಂದ ಮಹಿಳೆ
WhatsApp Group
Join Now